×
Ad

ನೋಟುಗಳ ಮೇಲೆ ಅಂಬೇಡ್ಕರ್ ಚಿತ್ರ ಇರಬೇಕಿತ್ತು: ಸಿ.ಎಸ್.ದ್ವಾರಕನಾಥ್

Update: 2019-06-07 21:50 IST

ಬೆಂಗಳೂರು, ಜೂ.7: ಭಾರತೀಯರಿಗೆ ನಗದು ವಹಿವಾಟುಗಾಗಿ ನೋಟುಗಳನ್ನು ಪರಿಚಯಿಸಿದ ಆರ್ಥಿಕ ತಜ್ಞ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ ಪ್ರಸ್ತುತ ನೋಟುಗಳಲ್ಲಿ ಮುದ್ರಣ ಆಗಬೇಕಿತ್ತು ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್.ದ್ವಾರಕನಾಥ್ ನುಡಿದರು.

ಶುಕ್ರವಾರ ನಗರದ ಕೆಇಬಿ ಸಭಾಂಗಣದಲ್ಲಿ ಕರ್ನಾಟಕ ವಿದ್ಯುತ್ ನಿಗಮ ಹಾಗೂ ನಿಗಮದ ಪರಿಶಿಷ್ಟ ಜಾತಿ ಮತ್ತು ಪಂಗಡ ವರ್ಗದ ನೌಕರರ ಸಂಘ ಏರ್ಪಡಿಸಿದ್ದ ‘ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ರವರ 128ನೇ ಜಯಂತಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಂಬೇಡ್ಕರ್‌ ಅವರು ಲಂಡನ್‌ನಲ್ಲಿ ಮಂಡಿಸಿದ ಪ್ರೌಢ ಪ್ರಬಂಧದಿಂದಾಗಿ ದೇಶದಲ್ಲಿ ಆರ್‌ಬಿಐ ನೋಟುಗಳನ್ನು ಮುದ್ರಿಸಿ ಚಲಾವಣೆಗೆ ತರುವ ಪರಮಾಧಿಕಾರ ಹೊಂದಿತು. ಹೀಗಾಗಿ, ನ್ಯಾಯಯುತವಾಗಿ ಅಂಬೇಡ್ಕರ್ ಭಾವಚಿತ್ರ ನೋಟುಗಳಲ್ಲಿ ಮುದ್ರಣವಾಗಬೇಕಿತ್ತು ಎಂದರು.

ಗಾಂಧೀಜಿ ಅವರ ಮೇಲೆ ನನಗೆ ಅಪಾರ ಗೌರವವಿದೆ. ಗಾಂಧೀಜಿ ಅವರನ್ನು ಫಾದರ್ ಆಫ್ ನೇಷನ್ ಅನ್ನುತ್ತೇವೆ. ಫಾದರ್ ಅನ್ನುವುದು ನಂಬಿಕೆ. ಅಮ್ಮ ಅನ್ನುವುದು ವಾಸ್ತವ. ಹಾಗಾಗಿ ಅಂಬೇಡ್ಕರ್‌ರನ್ನು ಮದರ್ ಆಫ್ ನೇಷನ್ ಎಂದು ಕರೆಯಲು ಇಚ್ಛಿಸುತ್ತೇನೆ ಎಂದು ಅವರು ಹೇಳಿದರು.

ಅಂಬೇಡ್ಕರ್ ಶ್ರೇಷ್ಠ ಮಾನವ ಹಕ್ಕುಗಳ ಪ್ರತಿಪಾದಕರಾಗಿದ್ದರು. ಇಂದು ನಾವು ಎದುರಿಸುತ್ತಿರುವ ಸಮಸ್ಯೆಗಳಿಗೆ ನೂರಾರು ವರ್ಷಗಳ ಹಿಂದೆಯೇ ಅಂಬೇಡ್ಕರ್ ದೀರ್ಘಕಾಲಿಕ ಯೋಜನೆಗಳನ್ನು, ಚಿಂತನೆಗಳನ್ನು ನೀಡಿದ್ದಾರೆ. ಒಬ್ಬ ಭಾರತೀಯನಾಗಿ ಇಡೀ ಭಾರತದಲ್ಲಿ ಯಾವುದೇ ತೊಂದರೆ, ಅಡಚಣೆ ಇಲ್ಲದೆ ರೈಲ್ವೆ ಮಾರ್ಗಗಳು ಇದ್ದಂತೆ ಸರಾಗವಾಗಿ ನದಿಗಳು ಹರಿಯಬೇಕು ಎಂಬ ಪ್ರತಿಪಾದಿಸಿದ್ದರು. ಅವರು ಅಖಂಡ ಭಾರತದ ಪರಿಕಲ್ಪನೆಯಲ್ಲಿ ಸಂವಿಧಾನವನ್ನು ರಚಿಸಿದರು ಎಂದು ವಿವರಿಸಿದರು.

ಪ್ರತಿ ಹೆಣ್ಣು ಮಕ್ಕಳು ಅವರನ್ನು ನೆನಪಿಸಿಕೊಳ್ಳಬೇಕು. ಆದರೆ, ಅಂತಹ ಮಹಾ ಮಾನವತಾವಾದಿ ಅಂಬೇಡ್ಕರ್‌ರನ್ನು ನಾವಿಂದು ಮರೆತಿದ್ದೇವೆ. ಮಾರ್ಟಿನ್ ಲೂಥರ್ ಕಿಂಗ್, ನೆಲ್ಸನ್ ಮಾಂಡೆಲಾ ಜಗತ್ತಿನ ಶ್ರೇಷ್ಠ ವ್ಯಕ್ತಿಗಳು. ಆದರೆ, ಅವರನ್ನು ಅಂಬೇಡ್ಕರ್ ಅವರಿಗೆ ಹೋಲಿಸಲು ಸಾಧ್ಯವಿಲ್ಲ. ಅಂಬೇಡ್ಕರರ ಬಹುಮುಖ ಪ್ರತಿಭೆಯನ್ನು ಗುರುತಿಸಬೇಕು. ವಿಪರ್ಯಾಸವೆಂದರೆ, ನಮ್ಮಲ್ಲಿನ ಜಾತಿಯ ಮಿಥ್ಯೆ ಅವರನ್ನು ಸೀಮಿತಗೊಳಿಸಿದೆ ಎಂದರು.

ಕಾರ್ಯಕ್ರಮದಲ್ಲಿ ವಿದ್ಯುತ್ ನಿಗಮದ ಸಿಬ್ಬಂದಿ ಹಾಗೂ ಅಧಿಕಾರಿಗಳ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಕೆಪಿಸಿಎಲ್ ಮಾಜಿ ವ್ಯವಸ್ಥಾಪಕ ನಿರ್ದೇಶಕ ಕೆ.ಜೋತಿರಾಮಲಿಂಗಮ್, ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News