ಪಾರ್ಕ್‌ನಲ್ಲಿ ಈಜುಕೊಳ ನಿರ್ಮಾಣ: ಹೈಕೋರ್ಟ್ ತಡೆ
ಬೆಂಗಳೂರು, ಜೂ.7: ರಾಜಾಜಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರಕಾಶ್‌ನಗರ ಸಮೀಪವಿರುವ ಗಾಯತ್ರಿ ದೇವಿ ಪಾರ್ಕ್(ಮರಿಯಪ್ಪನಪಾಳ್ಯ ಪಾರ್ಕ್)ನಲ್ಲಿ ಕಾನೂನು ಬಾಹಿರವಾಗಿ ಈಜುಕೊಳ, ಫಿಟ್‌ನೆಸ್ ಸೆಂಟರ್(ಜಿಮ್) ಕಟ್ಟಡ ನಿರ್ಮಾಣ ಮಾಡುತ್ತಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ಸಂಬಂಧ ಹೈಕೋರ್ಟ್ ಪಾರ್ಕ್‌ನಲ್ಲಿ ಯಾವುದೇ ಕಾಮಗಾರಿಯನ್ನು ಕೈಗೆತ್ತಿಕೊಳ್ಳದಂತೆ ಮಧ್ಯಂತರ ತಡೆ ನೀಡಿದೆ.
ಈ ಕುರಿತು ಪ್ರಕಾಶ್‌ನಗರದ ಜೆ.ಶ್ರೀನಿವಾಸ್ ಸೇರಿ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಪಿ.ಎಸ್.ದಿನೇಶ್‌ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಅರ್ಜಿದಾರರ ಪರ ವಾದಿಸಿದ ವಕೀಲ ಜಿ.ಆರ್.ಮೋಹನ್ ಅವರು, ರಾಜಾಜಿನಗರದ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗಾಯತ್ರಿ ದೇವಿ ಪಾರ್ಕ್‌ನಲ್ಲಿ ಬಿಬಿಎಂಪಿಯು ಕಾನೂನು ಬಾಹಿರವಾಗಿ ಈಜುಕೊಳ, ಫಿಟ್‌ನೆಸ್ ಸೆಂಟರ್(ಜಿಮ್) ಸೇರಿ ಇನ್ನಿತರ ಕಟ್ಟಡಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಸುಪ್ರೀಂಕೋರ್ಟ್‌ನ ಆದೇಶದಂತೆ ಪಾರ್ಕ್‌ಗಳಲ್ಲಿ ಯಾವುದೇ ಕಾರಣಕ್ಕೂ ಈಜುಕೋಳ ಸೇರಿದಂತೆ ಇನ್ನಿತರ ಕಟ್ಟಡಗಳನ್ನು ಕಟ್ಟಬಾರದೆಂಬ ಆದೇಶವಿದೆ ಎಂದು ಪೀಠಕ್ಕೆ ತಿಳಿಸಿದರು.
ವಕೀಲರ ವಾದ ಆಲಿಸಿದ ನ್ಯಾಯಪೀಠವು ಗಾಯತ್ರಿ ದೇವಿ ಪಾರ್ಕ್‌ನಲ್ಲಿ ಯಾವುದೇ ಕಾಮಗಾರಿಯನ್ನು ಕೈಗೆತ್ತಿಗೊಳ್ಳದಂತೆ ತಾತ್ಕಾಲಿಕ ತಡೆ ನೀಡಿ ಆದೇಶ ಹೊರಡಿಸಿತು.