×
Ad

ಬೆಂಗಳೂರು ನಗರದಲ್ಲಿ ನಾಲ್ಕು ರುದ್ರಭೂಮಿಗಳ ನಿರ್ಮಾಣಕ್ಕೆ ಯೋಜನೆ

Update: 2019-06-07 23:16 IST

ಬೆಂಗಳೂರು, ಜೂ.7: ನಗರದಲ್ಲಿನ ರುದ್ರಭೂಮಿಗಳ ಕೊರತೆ ನೀಗಿಸುವ ಉದ್ದೇಶದಿಂದ ಬಿಬಿಎಂಪಿಯಿಂದ ನಗರದ ಹೊರವಲಯದಲ್ಲಿ ನಾಲ್ಕು ಹೊಸ ರುದ್ರಭೂಮಿಗಳನ್ನು ನಿರ್ಮಿಸಲು ಯೋಜನೆ ರೂಪಿಸಿದೆ.

ನಗರದಲ್ಲಿರುವ ರುದ್ರಭೂಮಿ, ಚಿತಾಗಾರಗಳಲ್ಲಿ ನೀರಿನ ವ್ಯವಸ್ಥೆ, ಶೇಖರಣೆಯಾಗುವ ತ್ಯಾಜ್ಯ ವಿಲೇವಾರಿ, ನಡಿಗೆ ಪಥ ದುರಸ್ಥಿ, ಉದ್ಯಾನವನ ನಿರ್ಮಾಣ ಸೇರಿದಂತೆ ಹಲವು ಮೂಲಸೌಕರ್ಯ ಕಲ್ಪಿಸಲು ಮುಂದಾಗಿದ್ದು, ಆ ಸಂಬಂಧ ಯೋಜನೆಯೂ ರೂಪಿಸಲಾಗಿದೆ. ಅದರ ಜತೆಗೆ ಹೊಸದಾಗಿ ನಾಲ್ಕು ರುದ್ರಭೂಮಿಗಳ ನಿರ್ಮಾಣಕ್ಕೂ ನಿರ್ಧರಿಸಲಾಗಿದೆ.

ಹೊರವಯಲದಲ್ಲಿ ಈಗಾಗಲೇ ಸ್ಥಳಗಳನ್ನು ಗುರುತಿಸಲಾಗಿದ್ದು, ಆ ಜಾಗಗಳಲ್ಲಿ ಮೂಲ ಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 131 ರುದ್ರಭೂಮಿಗಳಿದ್ದು, ಅವುಗಳಲ್ಲಿ ಬಹುತೇಕ ಸಮರ್ಪಕ ಮೂಲಸೌಕರ್ಯಗಳಿಲ್ಲದೇ ನರಳುತ್ತಿವೆ. ಹೀಗಾಗಿ, ಅವುಗಳಿಗೆ ಸೌಕರ್ಯ ಕಲ್ಪಿಸುವುದು ಹಾಗೂ ಹೊಸ ರುದ್ರಭೂಮಿಗಳ ನಿರ್ಮಾಣಕ್ಕೆ 40 ಕೋಟಿ ರೂ. ಮೀಸಲಿಸಲಾಗಿತ್ತು.

ಮೊದಲ ಹಂತದಲ್ಲಿ 50 ರುದ್ರಭೂಮಿ ಹಾಗೂ ಚಿತಾಗಾರಗಳನ್ನು ಅಭಿವೃದ್ಧಿ ಪಡಿಸಲು ಯೋಜಿಸಲಾಗಿತ್ತು. ಆದರೆ, ಅದು ಇದುವರೆಗೂ ಅನುಷ್ಠಾನಗೊಂಡಿಲ್ಲ. ಹೀಗಾಗಿ, ಹೊಸ ರುದ್ರಭೂಮಿಗಳ ನಿರ್ಮಾನದ ಕಡೆಗೆ ಬಿಬಿಎಂಪಿ ಗಮನ ನೀಡಿದ್ದು, ಅದಕ್ಕೆ ಬಜೆಟ್‌ನಲ್ಲಿ ಮೀಸಲಿಟ್ಟಿರುವ ಹಣ ಬಳಸಿಕೊಳ್ಳಲಾಗುತ್ತಿದೆ.

ಎಲ್ಲೆಲ್ಲಿ ಸ್ಥಳ ಗುರುತಿಸಲಾಗಿದೆ: ನಗರದಲ್ಲಿ ರುದ್ರಭೂಮಿಗೆ ಅವಕಾಶ ಸಿಗದೇ ಇದ್ದುದರಿಂದ ನಗರದ ಹೊರಭಾಗದಲ್ಲಿ ಜಾಗ ಹುಡುಕಲಾಗಿದೆ. ಶಿವಪುರ, ಉಲ್ಲೇನಹಳ್ಳಿಯಲ್ಲಿ ತಲಾ 2 ಎಕರೆ, ಬಾಗಲೂರಿನಲ್ಲಿ 1 ಎಕರೆ ಮೀಸಲಿಡಲಾಗಿದೆ. ಅಲ್ಲಿ ಫೆನ್ಸಿಂಗ್ ಅಳವಡಿಕೆ ಸೇರಿದಂತೆ ಹಲವು ಮೂಲ ಸೌಕರ್ಯಗಳ ಅಭಿವೃದ್ಧಿಗೆ ಶೀಘ್ರದಲ್ಲಿಯೇ ಚಾಲನೆ ಸಿಗಲಿದೆ ಎಂದು ಪಾಲಿಕೆ ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News