ಮೋದಿಗೆ ಪಾಕ್ ಪ್ರಧಾನಿಯಿಂದ ಮತ್ತೆ ಶಾಂತಿ ಸಂದೇಶ

Update: 2019-06-08 04:30 GMT

ಇಸ್ಲಾಮಾಬಾದ್: ಉಭಯ ರಾಷ್ಟ್ರಗಳ ನಡುವೆ ದ್ವಿಪಕ್ಷೀಯ ಮಾತುಕತೆಯನ್ನು ಪುನರಾರಂಭಿಸುವಂತೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹಾಗೂ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಶಾ ಮೊಹ್ಮದ್ ಖುರೇಷಿ ಭಾರತಕ್ಕೆ ಮತ್ತೆ ಮನವಿ ಮಾಡಿದ್ದಾರೆ.

ರಾಜತಾಂತ್ರಿಕ ರೂಢಿಯಂತೆ ಭಾರತಕ್ಕೆ ಈ ಸಂಬಂಧ ಪತ್ರ ಬರೆಯಲಾಗಿದೆ ಎಂದು ಉನ್ನತ ಅಧಿಕಾರಿಗಳು ಹೇಳಿದ್ದಾರೆ.

ನರೇಂದ್ರ ಮೋದಿಯವರು ಎರಡನೇ ಬಾರಿ ಪ್ರಧಾನಿಯಾದ ಬಳಿಕ ಪಾಕಿಸ್ತಾನದ ಉಭಯ ಮುಖಂಡರು ಭಾರತದ ಜತೆ ಮಾತುಕತೆ ನಡೆಸುತ್ತಿರುವುದು ಇದು ಎರಡನೇ ಬಾರಿ. ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ ಮೋದಿಯವರನ್ನು ಅಭಿನಂದಿಸಲು ಪಾಕಿಸ್ತಾನಿ ಪ್ರಧಾನಿ ಹಾಗೂ ವಿದೇಶಾಂಗ ಸಚಿವರು ಜೂನ್ 2ರಂದು ಕರೆ ಮಾಡಿದ್ದರು.

ಈ ಬಾರಿ ಪಾಕಿಸ್ತಾನ ಪತ್ರದ ಮೂಲಕ ತನ್ನ ಅಭಿಪ್ರಾಯವನ್ನು ಭಾರತಕ್ಕೆ ಸ್ಪಷ್ಟಪಡಿಸಿದೆ. "ದಕ್ಷಿಣ ಏಷ್ಯಾದಲ್ಲಿ ಧೀರ್ಘಾವಧಿ ಶಾಂತಿ ಹಾಗೂ ಸ್ಥಿರತೆಯನ್ನು ಸಾಧಿಸಲು ಹಾಗೂ ಶಾಂತಿಯುತ ನೆರೆಹೊರೆಯ ಸಂಬಂಧವನ್ನು ಉತ್ತೇಜಿಸಲು ಜತೆಯಾಗಿ ಕಾರ್ಯನಿರ್ವಹಿಸಲು ಸಿದ್ಧ" ಎಂದು ಪಾಕಿಸ್ತಾನ ಪ್ರಧಾನಿ ಹೇಳಿದ್ದಾಗಿ ಮಾಧ್ಯಮಗಳು ವರದಿ ಮಾಡಿವೆ.

2016ರ ಜನವರಿಯಲ್ಲಿ ಭಾರತದ ಪಠಾಣ್‌ಕೋಟ್ ವಾಯುನೆಲೆಯ ಮೇಲೆ ಉಗ್ರರ ದಾಳಿ ನಡೆದ ಬಳಿಕ ದ್ವಿಪಕ್ಷೀಯ ಮಾತುಕತೆ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿತ್ತು.

ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೊಹ್ಮದ್ ಖುರೇಶಿ, ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ಪತ್ರ ಬರೆದು, ಎಲ್ಲ ಪ್ರಮುಖ ವಿಷಯಗಳ ಬಗ್ಗೆ ಮಾತುಕತೆ ಆರಂಭಿಸಲು ಕೋರಿದ್ದಾರೆ. ಈ ಭಾಗದಲ್ಲಿ ಶಾಂತಿಯನ್ನು ಸ್ಥಾಪಿಸುವ ಪ್ರಯತ್ನಗಳಿಗೆ ಪಾಕಿಸ್ತಾನ ಬದ್ಧವಾಗಿದೆ ಎಂದು ಖುರೇಷಿ ತಮ್ಮ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾಗಿ ಮಾಧ್ಯಮಗಳು ಹೇಳಿವೆ. ಈ ಎರಡೂ ಪತ್ರಗಳನ್ನು ಭಾರತಕ್ಕೆ ಕಳುಹಿಸಿರುವುದನ್ನು ವಿದೇಶಾಂಗ ಸಚಿವಾಲಯದ ಉನ್ನತ ಅಧಿಕಾರಿಗಳು ದೃಢಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News