ಈ ಸಾದಾ ರಸ ನಿಮ್ಮ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್‌ನ್ನು ತಗ್ಗಿಸುತ್ತದೆ

Update: 2019-06-08 13:05 GMT

 ಅಧಿಕ ರಕ್ತದೊತ್ತಡ ಮತ್ತು ಹೆಚ್ಚಿನ ಕೊಲೆಸ್ಟ್ರಾಲ್ ಮಟ್ಟ ಇಂದಿನ ದಿನಗಳಲ್ಲಿ ಸಾಮಾನ್ಯ ಸಮಸ್ಯೆಗಳಾಗಿವೆ. ಇಂದಿನ ಜೀವನ ಶೈಲಿ ಮತ್ತು ಅನಾರೋಗ್ಯಕರ ಆಹಾರ ಸೇವನೆ ಈ ಸಮಸ್ಯೆಗೆ ಕಾರಣಗಳಲ್ಲಿ ಸೇರಿವೆ. ಔಷಧಿಗಳ ಸೇವನೆ ಈ ಸ್ಥಿತಿಗೆ ಪರಿಣಾಮಕಾರಿ ಚಿಕಿತ್ಸೆ ನೀಡುವಲ್ಲಿ ನೆರವಾಗುವುದಿಲ್ಲ. ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಈ ಸಮಸ್ಯೆಯನ್ನು ಎದುರಿಸಲು ನೈಸರ್ಗಿಕ ಪರಿಹಾರಗಳು ಮತ್ತು ಆರೋಗ್ಯಕರ ಪರಿಪಾಠಗಳು ಅತ್ಯುತ್ತಮ ಮಾರ್ಗವಾಗಿವೆ.

ಉಪ್ಪುರಹಿತ ಟೊಮೆಟೊ ರಸವು ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟಗಳನ್ನು ತಗ್ಗಿಸುವಲ್ಲಿ ನೆರವಾಗುತ್ತದೆ ಎಂದು ಇತ್ತೀಚಿನ ಅಧ್ಯಯನವೊಂದು ಹೇಳಿದೆ. ಹೃದಯನಾಳೀಯ ರೋಗಗಳ ಹೆಚ್ಚಿನ ಅಪಾಯವನ್ನು ಎದುರಿಸುತ್ತಿರುವ ವಯಸ್ಕರಿಗೆ ಟೊಮೆಟೊ ರಸದ ಸೇವನೆಯು ಲಾಭಕಾರಿಯಾಗಿದೆ.

ಜಪಾನಿನ ಟೋಕಿಯೊ ಮೆಡಿಕಲ್ ಆ್ಯಂಡ್ ಡೆಂಟಲ್ ವಿವಿಯ ಸಂಶೋಧಕರು ನಡೆಸಿದ ಅಧ್ಯಯನದ ವರದಿಯು ಜರ್ನಲ್ ಆಫ್ ಫುಡ್ ಸೈನ್ಸ್ ಆ್ಯಂಡ್ ನ್ಯೂಟ್ರಿಷನ್‌ನಲ್ಲಿ ಪ್ರಕಟಗೊಂಡಿದೆ.

 ಅಧ್ಯಯನಕ್ಕಾಗಿ ಪುರುಷರು ಮತ್ತು ಮಹಿಳೆಯರು ಸೇರಿದಂತೆ 500 ವ್ಯಕ್ತಿಗಳನ್ನು ಸಮೀಕ್ಷೆಗೊಳಪಡಿಸಲಾಗಿತ್ತು. ಈ ಎಲ್ಲರೂ ನಿಯಮಿತವಾಗಿ ಉಪ್ಪುರಹಿತ ಟೊಮೆಟೊ ರಸವನ್ನು ಸೇವಿಸುವಂತೆ ಮಾಡಲಾಗಿತ್ತು. ಅಧ್ಯಯನದ ಅವಧಿಯಲ್ಲಿ ಈ ಪೈಕಿ ಚಿಕಿತ್ಸೆಗೊಳಗಾಗದ 94 ಅಧಿಕ ರಕ್ತದೊತ್ತಡ ಪೂರ್ವ ಮತ್ತು ಅಧಿಕ ರಕ್ತದೊತ್ತಡ ರೋಗಿಗಳಲ್ಲಿ ರಕ್ತದೊತ್ತಡದಲ್ಲಿ ಗಮನೀಯ ಇಳಿಕೆ ಕಂಡು ಬಂದಿತ್ತು. ಸಿಸ್ಟೋಲಿಕ್ ಅಂದರೆ ಸಂಕೋಚನ ಒತ್ತಡವು ಸರಾಸರಿ 141.2ರಿಂದ 137 ಎಂಎಂಎಚ್‌ಜಿಗೆ ಮತ್ತು ಡಯಸ್ಟೋಲಿಕ್ ಅಂದರೆ ವ್ಯಾಕೋಚನ ಒತ್ತಡವು 83.3ರಿಂದ 80.9 ಎಂಎಂಎಚ್‌ಜಿಗೆ ಇಳಿದಿದ್ದವು.

 ಇದೇ ರೀತಿ 125 ರೋಗಿಗಳಲ್ಲಿ ಕೊಲೆಸ್ಟ್ರಾಲ್ ಮಟ್ಟವು ಸರಾಸರಿ 155ರಿಂದ 149 ಎಂಜಿ/ಡಿಎಲ್‌ಗೆ ಇಳಿದಿತ್ತು. ಹೀಗಾಗಿ ಅಧಿಕ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟಗಳನ್ನು ಇಳಿಸುವಲ್ಲಿ ಟೊಮೆಟೊ ರಸವು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತದೆ ಎನ್ನುವುದು ದೃಢಪಟ್ಟಿದೆ. ಎಲ್ಲ ವಯೋಗುಂಪುಗಳ ಪುರುಷರು ಮತ್ತು ಮಹಿಳೆಯರಲ್ಲಿ ಸಮಾನ ಫಲಿತಾಂಶಗಳು ಕಂಡು ಬಂದಿವೆ ಎಂದೂ ವರದಿಯು ತಿಳಿಸಿದೆ.

ಅಧಿಕ ರಕ್ತದೊತ್ತಡವನ್ನು ನಿಭಾಯಿಸಲು ಇತರ ಸರಳ ಕ್ರಮಗಳನ್ನೂ ಅನುಸರಿಸಬಹುದಾಗಿದೆ. ಓಡಾಟ ಸೇರಿದಂತೆ ದಿನವಿಡೀ ಹೆಚ್ಚಿನ ಚಟುವಟಿಕೆ, ಶರೀರದ ತೂಕದ ನಿಯಂತ್ರಣ,ಮದ್ಯಪಾನ ವರ್ಜನೆ ಅಥವಾ ಸೀಮಿತ ಸೇವನೆ, ಕಡಿಮೆ ಉಪ್ಪು ಸೇವನೆ,ಕೆಫೀನ್‌ನ ಕಡಿಮೆ ಮತ್ತು ಹಣ್ಣುಗಳ ಹೆಚ್ಚು ಸೇವನೆ,ಒತ್ತಡ ನಿಯಂತ್ರಣ ಇವುಗಳಲ್ಲಿ ಸೇರಿವೆ.

ಇದೇ ರೀತಿ ಹೆಚ್ಚು ನಾರು ಇರುವ ಆಹಾರಗಳ ಸೇವನೆ,ಧೂಮ್ರಪಾನ ಮತ್ತು ಮದ್ಯಪಾನ ವರ್ಜನೆ,ಆಹಾರದಲ್ಲಿ ಗ್ರೀನ್ ಟೀ,ತಾಜಾ ತರಕಾರಿಗಳು ಮತ್ತು ಹಣ್ಣುಗಳು ಇತ್ಯಾದಿಗಳ ಸೇರ್ಪಡೆಯ ಮೂಲಕ ಕೊಲೆಸ್ಟ್ರಾಲ್ ಮಟ್ಟಗಳನ್ನು ತಗ್ಗಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News