ಜಿಂದಾಲ್ ಗೆ ಭೂಮಿ ಮಾರಾಟ ಮಾಡಲು ಸಿಎಂ ಕಿಕ್‌ಬ್ಯಾಕ್ ಪಡೆದಿದ್ದಾರೆ: ಯಡಿಯೂರಪ್ಪ ಆರೋಪ

Update: 2019-06-08 16:18 GMT

ಕೊಪ್ಪಳ, ಜೂ. 8: ಮುಖ್ಯಮಂತ್ರಿ ಕುಮಾರಸ್ವಾಮಿ ಕಿಕ್‌ಬ್ಯಾಕ್ ಪಡೆದು ಜಿಂದಾಲ್ ಕಂಪೆನಿಗೆ ಸರಕಾರಿ ಭೂಮಿ ಮಾರಾಟ ಮಾಡಲು ಮುಂದಾಗಿದ್ದಾರೆ ಎಂದು ವಿಪಕ್ಷ ನಾಯಕರೂ ಆಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆರೋಪಿಸಿದ್ದಾರೆ.

ಶನಿವಾರ ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, 2007ರಲ್ಲೆ ಜಿಂದಾಲ್ ಕಂಪೆನಿಗೆ 7 ಸಾವಿರ ಎಕರೆ ಭೂಮಿ ನೀಡಲಾಗಿತ್ತು. ಇದೀಗ ಪುನಃ ಭೂಮಿ ನೀಡಲು ಮುಂದಾಗಿದ್ದು, ಇದರಲ್ಲಿ ಹಗರಣ ನಡೆದಿದೆ ಎಂದು ದೂರಿದರು.

ಕಂಪೆನಿಗೆ ಭೂಮಿ ನೀಡಲು ಬಿಜೆಪಿ ವಿರೋಧ ವ್ಯಕ್ತಪಡಿಸಿದ್ದರಿಂದ ಆ ಭೂಮಿಯಲ್ಲಿ ಅದಿರು ತೆಗೆಯಲು ಅವಕಾಶ ನೀಡುವುದಿಲ್ಲ ಎಂದು ಸಂಪುಟ ತೀರ್ಮಾನ ಕೈಗೊಂಡಿದೆ. ಇಂತಹ ಷರತ್ತುಗಳನ್ನು ಅವರು ಪಾಲಿಸಲು ಸಾಧ್ಯವೆ ಎಂದು ಯಡಿಯೂರಪ್ಪ ಪ್ರಶ್ನಿಸಿದರು.

ರೈತರ ಸಾಲಮನ್ನಾ ವಿಳಂಬ, ಜಿಂದಾಲ್‌ಗೆ ಭೂಮಿ, ಬರ ಪರಿಹಾರ ಕಾರ್ಯಗಳಲ್ಲಿ ಸರಕಾರದ ವೈಫಲ್ಯಗಳನ್ನು ಖಂಡಿಸಿ ಜೂ.13ರಿಂದ ಎರಡು ದಿನಗಳ ಕಾಲ ಮೈತ್ರಿ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದ ಯಡಿಯೂರಪ್ಪ, ಜಿಂದಾಲ್ ಯಾವುದೇ ಕಾರಣಕ್ಕೂ ಭೂಮಿ ನೀಡಬಾರದು ಎಂದು ಆಗ್ರಹಿಸಿದರು.

ಕನಕಗಿರಿ ಕ್ಷೇತ್ರದ ಶಾಸಕ ಬಸವರಾಜ ದಡೇಸೂಗೂರು ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ. ಅವರು ಪಕ್ಷ ತ್ಯಜಿಸಲಿದ್ದಾರೆ ಎಂಬುದು ಕೇವಲ ಗಾಳಿ ಸುದ್ದಿ. ಕಾಂಗ್ರೆಸ್‌ನ ಹತ್ತಕ್ಕೂ ಹೆಚ್ಚು ಶಾಸಕರು ಅತೃಪ್ತರಾಗಿದ್ದು, ಅವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ಸಚಿವ ಸಂಪುಟದಲ್ಲಿ ಪಕ್ಷೇತರ ಶಾಸಕರಿಗೆ ಸಚಿವ ಸ್ಥಾನ ನೀಡಿದರೆ ಮೈತ್ರಿ ಸರಕಾರದಲ್ಲಿ ಬೆಂಕಿ ಹೊತ್ತಿಕೊಳ್ಳಲಿದೆ. ಮೈತ್ರಿ ಸರಕಾರದಲ್ಲಿ ಸಚಿವ ಸ್ಥಾನ ಸಿಗಲಿದೆ ಎಂಬ ಬಹಳಷ್ಟು ಮಂದಿ ಕಾದುಕೂತಿದ್ದು, ಇವರ ಜಗಳದಿಂದಲೇ ಮೈತ್ರಿ ಸರಕಾರ ಬೀಳಲಿದೆ’

-ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News