ಜಿಂದಾಲ್ ಗೆ ಸರಕಾರಿ ಭೂಮಿ ಹಸ್ತಾಂತರ: ಕೆ.ಜೆ.ಜಾರ್ಜ್-ಎಚ್.ಕೆ.ಪಾಟೀಲ್ ನಡುವಿನ ಸಂಧಾನ ಸಭೆ ವಿಫಲ

Update: 2019-06-08 16:29 GMT

ಬೆಂಗಳೂರು, ಜೂ.8: ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಜಿಂದಾಲ್ ಸಂಸ್ಥೆಗೆ 3666 ಎಕರೆ ಭೂಮಿಯನ್ನು ಲೀಸ್ ಕಂ ಸೇಲ್ ಕ್ರಯ ಮಾಡಲು ಒಪ್ಪಿಗೆ ನೀಡಿರುವ ಸರಕಾರದ ಕ್ರಮವನ್ನು ಬಹಿರಂಗವಾಗಿ ವಿರೋಧಿಸಿದ ಹಿರಿಯ ಕಾಂಗ್ರೆಸ್ ನಾಯಕ ಎಚ್.ಕೆ.ಪಾಟೀಲ್ ಜೊತೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಧ್ಯಸ್ಥಿಕೆಯಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್ ನಡೆಸಿದ ಸಂಧಾನ ಸಭೆ ವಿಫಲವಾಗಿದೆ.

ಶನಿವಾರ ಸಂಜೆ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ದಿನೇಶ್ ಗುಂಡೂರಾವ್ ಉಭಯ ಮುಖಂಡರ ನಡುವೆ ಸಂಧಾನ ಏರ್ಪಡಿಸಲು ಸಭೆಯನ್ನು ಆಯೋಜಿಸಿದ್ದರು. ಆದರೆ, ಸರಕಾರ ಭೂಮಿ ನೀಡಿರುವ ಕ್ರಮವನ್ನು ವಿರೋಧಿಸುವ ತನ್ನ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಎಚ್.ಕೆ.ಪಾಟೀಲ್ ತಮ್ಮ ಪಟ್ಟನ್ನು ಸಡಿಲಿಸದೇ ಇದ್ದುದ್ದರಿಂದ ಸಂಧಾನ ಸಭೆ ವಿಫಲವಾಯಿತು.

ಜಿಂದಾಲ್ ಸಂಸ್ಥೆಗೆ ಭೂಮಿ ನೀಡುವ ನಿರ್ಧಾರವನ್ನು ಸರಕಾರ ಹಿಂಪಡೆಯಬೇಕು, ಜಮೀನು ನೀಡುವುದಾದರೆ ಪ್ರತಿ ಎಕರೆ ಭೂಮಿಗೆ ಕಡಿಮೆ ದರ ನಿಗದಿ ಮಾಡಿರುವುದೇಕೆ? ಮೈಸೂರು ಮಿನರಲ್ಸ್ ಗೆ ಜಿಂದಾಲ್ ಸಂಸ್ಥೆ ನೀಡಬೇಕಿರುವ ಬಾಕಿ ಹಣವನ್ನು ಮೊದಲು ಪಾವತಿಸಲಿ, ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿದೆ ಎಂಬ ಆರೋಪ ಹೊತ್ತಿರುವ ಕಂಪೆನಿಗೆ 3666 ಎಕರೆ ಭೂಮಿ ನೀಡುವ ಕ್ರಮ ಸರಿಯೇ? ಎಂದು ಎಚ್.ಕೆ.ಪಾಟೀಲ್ ಸಭೆಯಲ್ಲಿ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಸಚಿವ ಸಂಪುಟ ಸಭೆ ನಡೆಯುವ ಮುನ್ನವೇ ನಾನು ಮುಖ್ಯಮಂತ್ರಿಗೆ ಈ ವಿಚಾರದ ಕುರಿತು ಪತ್ರ ಬರೆದಿದ್ದೆ. ಆದರೂ, ಸಚಿವ ಸಂಪುಟ ಸಭೆಯಲ್ಲಿ ಜಿಂದಾಲ್ ಸಂಸ್ಥೆಗೆ ಭೂಮಿ ನೀಡುವ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಎಚ್.ಕೆ.ಪಾಟೀಲ್ ಸಭೆಯಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಜಿಂದಾಲ್ ಸಂಸ್ಥೆಯು ಮೈಸೂರು ಮಿನರಲ್ಸ್‌ಗೆ ಬಾಕಿ ಹಣ ನೀಡಬೇಕಿದೆ. ಆದರೆ, ಸಚಿವ ಕೆ.ಜೆ.ಜಾರ್ಜ್, ಜಿಂದಾಲ್ ಸಂಸ್ಥೆಯಿಂದ ಯಾವುದೇ ಬಾಕಿ ಬರಬೇಕಿಲ್ಲ ಎಂದು ಪತ್ರಿಕಾಗೋಷ್ಠಿ ಕರೆದು ಹೇಳಿಕೆ ನೀಡಿದ್ದು ಏಕೆ? ಎಂದು ಅವರು ಸಭೆಯಲ್ಲಿ ಪ್ರಶ್ನಿಸಿದ್ದಾರೆ ಎಂದು ಹೇಳಲಾಗಿದೆ.

ಈ ವೇಳೆ ಮಧ್ಯಪ್ರವೇಶಿಸಿದ ದಿನೇಶ್ ಗುಂಡೂರಾವ್, ಈ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಹಾಗೂ ಕೆ.ಜೆ.ಜಾರ್ಜ್, ಮುಖ್ಯಮಂತ್ರಿ ಕುಮಾರಸ್ವಾಮಿ ಜೊತೆ ಚರ್ಚೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಎಚ್.ಕೆ.ಪಾಟೀಲ್, ನಾಡಿಗೆ ಒಳಿತಾಗುವ ತೀರ್ಮಾನ ಮಾಡಿ ಎಂದು ತಿಳಿಸಿದ್ದಾರೆ.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜೊತೆ ನಾಳೆ ಮಾತುಕತೆ ನಡೆಸುತ್ತೇವೆ. ಅವರ ಜೊತೆ ಚರ್ಚೆ ನಡೆಸಿದ ಬಳಿಕ ರಾಜ್ಯ ಸರಕಾರವು ತನ್ನ ಅಂತಿಮ ನಿರ್ಧಾರ ಪ್ರಕಟಿಸಲಿದೆ.

-ಕೆ.ಜೆ.ಜಾರ್ಜ್, ಬೃಹತ್ ಮತ್ತು ಕೈಗಾರಿಕಾ ಸಚಿವ

ನನ್ನ ಅಭಿಪ್ರಾಯವನ್ನು ಸಚಿವ ಕೆ.ಜೆ.ಜಾರ್ಜ್ ಎದುರು ಹೇಳಿದ್ದೇನೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೂ ತಿಳಿಸಿದ್ದೇನೆ. ಜಾರ್ಜ್ ಕೂಡ ತಮ್ಮ ಅಭಿಪ್ರಾಯವನ್ನು ಹೇಳಿದ್ದಾರೆ. ರಾಜ್ಯದ ಹಿತವನ್ನು ಗಮನದಲ್ಲಿಟ್ಟುಕೊಂಡು, ಸಮ್ಮಿಶ್ರ ಸರಕಾರ ನಿರ್ಧಾರ ಕೈಗೊಳ್ಳಲಿದೆ. ಈ ವಿಚಾರದ ಕುರಿತು ನಾಳೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜೊತೆ ಚರ್ಚೆ ನಡೆಯಲಿದ್ದು, ಅವರು ಅಂತಿಮ ತೀರ್ಮಾನ ಕೈಗೊಳ್ಳುತ್ತಾರೆ.

-ಎಚ್.ಕೆ.ಪಾಟೀಲ್, ಮಾಜಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News