ನಿಲ್ದಾಣದಲ್ಲಿ ಬಸ್ ನಿಲ್ಲಿಸದ ಬಿಎಂಟಿಸಿ ಚಾಲಕರು: ಸಾರ್ವಜನಿಕರ ಆಕ್ರೋಶ

Update: 2019-06-08 16:37 GMT

ಬೆಂಗಳೂರು, ಜೂ.8: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಬಿಎಂಟಿಸಿ ಬಸ್‌ಗಳನ್ನು ನಿಲ್ಲಿಸಲು ಬಸ್ ನಿಲ್ದಾಣಗಳನ್ನು ನಿರ್ಮಾಣ ಮಾಡಿದೆ. ಆದರೆ ಬಹುತೇಕ ಬಿಎಂಟಿಸಿ ಚಾಲಕರು ಬಸ್ ನಿಲ್ದಾಣಗಳಲ್ಲಿ ಬಸ್‌ಗಳನ್ನು ನಿಲ್ಲಿಸದೆ ಪ್ರಯಾಣಿಕರನ್ನು ಕರೆದೊಯ್ದತ್ತಾರೆ ಎಂದು ಸಾರ್ವಜನಿಕರಿಂದ ಆರೋಪಗಳು ಕೇಳಿಬರುತ್ತಿವೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿರುವ ಬಸ್ ನಿಲ್ದಾಣಗಳು ಹೆಸರಿಗೆ ಮಾತ್ರ ಇದ್ದು ಅದರ ಪ್ರಯೋಜನವಾಗುತ್ತಿಲ್ಲ. ನಗರದಲ್ಲಿ ಸಂಚಾರ ದಟ್ಟಣೆ ಆಗಬಾರದು ಎಂಬ ಕಾರಣಕ್ಕಾಗಿ ನೃಪತುಂಗ ರಸ್ತೆ, ಮಿಲ್ಲರ್ ರಸ್ತೆ ಸೇರಿದಂತೆ ಹಲವು ಪ್ರಮುಖ ರಸ್ತೆಗಳಲ್ಲಿ ಬಿಬಿಎಂಪಿಯು ಬಿಎಂಟಿಸಿ ಬಸ್‌ಗಳನ್ನು ನಿಲ್ಲಿಸಲು ಬಸ್ ನಿಲ್ದಾಣಗಳನ್ನು ನಿರ್ಮಾಣ ಮಾಡಿದೆ. ಆದರೆ ಬಹುತೇಕ ಬಿಎಂಟಿಸಿ ಚಾಲಕರು ಬಸ್ ನಿಲ್ದಾಣಗಳಲ್ಲಿ ಬಸ್‌ಗಳನ್ನು ನಿಲ್ಲಿಸುವುದೇ ಇಲ್ಲ. ರಸ್ತೆಯಲ್ಲೇ ನಿಲ್ಲಿಸಿ ಪ್ರಯಾಣಿಕರನ್ನು ಕರೆದೊಯ್ದತ್ತಾರೆ.

ಬಸ್ ನಿಲ್ದಾಣಗಳಲ್ಲಿ ಬಸ್‌ಗಳನ್ನು ನಿಲ್ಲಿಸದೆ ರಸ್ತೆಯಲ್ಲಿ ನಿಲ್ಲಿಸುವುದರಿಂದ ಸಂಚಾರ ದಟ್ಟಣೆ ಎದುರಾಗುತ್ತಿದೆ. ಈ ಬಗ್ಗೆ ಪ್ರಯಾಣಿಕರಿಂದ ದೂರುಗಳು ಕೇಳಿ ಬಂದಾಗಲೆಲ್ಲಾ ನೆಪ ಮಾತ್ರಕ್ಕೆ ಬಿಎಂಟಿಸಿ ಸಂಸ್ಥೆಯ ಸಾರಥಿ ವಾಹನಗಳು ಬಸ್ ಬಳಿ ನಿಂತು ಚಾಲಕರು ಕಟ್ಟುನಿಟ್ಟಾಗಿ ಬಸ್ ಗಳನ್ನು ನಿಲ್ಲಿಸುವಂತೆ ಸೂಚನೆ ನೀಡಿ, ವಾಪಸ್ ಆಗುತ್ತಾರೆ.

ಬಹುತೇಕ ಬಸ್ ನಿಲ್ದಾಣಗಳಲ್ಲಿ ಬಿಎಂಟಿಸಿ ಬಸ್‌ಗಳು ನಿಲ್ಲುವುದೇ ಇಲ್ಲ. ಹಾಗಾಗಿ ಇದರ ಪ್ರಯೋಜನವನ್ನು ಆಟೋ ಚಾಲಕರು ಗೂಡ್ಸ್ ವಾಹನಗಳ ಮಾಲಕರು ಹಾಗೂ ಕೆಟ್ಟು ಹೋದ ವಾಹನಗಳನ್ನು ನಿಲ್ಲಿಸಲು ಧಾರಾಳವಾಗಿ ಬಳಸಿಕೊಳ್ಳಲಾಗುತ್ತಿದೆ.

ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿರುವ ಬಸ್ ನಿಲ್ದಾಣಗಳನ್ನು ಪ್ರಯೋಜನವಾಗುವಂತೆ ಮಾಡುವಲ್ಲಿ ಬಿಎಂಟಿಸಿ ಮತ್ತು ಬಿಬಿಎಂಪಿ ಒಟ್ಟಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದಿದ್ದಲ್ಲಿ ಬಸ್ ನಿಲ್ದಾಣಗಳು ತುಕ್ಕು ಹಿಡಿಯುವ ಕಾಲ ಬರಲಿದೆ. ಬಸ್ ನಿಲ್ದಾಣಗಳ ಸದ್ಬಳಕೆ ಆಗುತ್ತಿಲ್ಲ ಎಂಬುದಕ್ಕೆ ಮೈಸೂರು ರಸ್ತೆಯಲ್ಲಿರುವ ಗೋಪಾಲನ್ ಮಾಲ್ ಎದುರು ಇರುವ ಬಸ್ ಬೇ ತಾಜಾ ಸಾಕ್ಷಿ. ಇಲ್ಲಿ ಬಸ್ ನಿಲ್ದಾಣಗಳು ನಿರ್ಮಾಣವಾದ ಬಳಿಕ ಬಿಎಂಟಿಸಿ ಬಸ್‌ಗಳು ಬಂದು ನಿಲ್ಲುತ್ತಿದ್ದವು. ಆದರೆ ಕೆಲವು ತಿಂಗಳ ನಂತರ ಚಾಲಕರು ಈ ಬಸ್ ನಿಲ್ದಾಣಗಳಲ್ಲಿ ಬಸ್ ಅನ್ನು ನಿಲ್ಲಿಸುವುದನ್ನು ಬಿಟ್ಟಿದ್ದಾರೆ. ಕಾರಣ ಕೇಳಿದರೆ ಬಸ್ ನಿಲ್ದಾಣಗಳಲ್ಲಿ ಆಟೋಗಳು, ಗೂಡ್ಸ್ ವಾಹನಗಳು, ಸದಾ ನಿಲ್ಲುತ್ತಿರುತ್ತವೆ. ನಾವು ಹೇಗೆ ಬಸ್ ನಿಲ್ದಾಣಗಳಲ್ಲಿ ಬಸ್ ಅನ್ನು ನಿಲ್ಲಿಸುವುದು ಮರು ಪ್ರಶ್ನಿಸುತ್ತಾರೆ.

ಒಂದು ವೇಳೆ ಬಸ್ ನಿಲ್ದಾಣಗಳಲ್ಲಿ ನಿಂತಿರುವ ಆಟೋಗಳು ಮತ್ತು ಇತರ ವಾಹನಗಳನ್ನು ತೆಗೆಯಿರಿ ಎಂದು ಕೇಳಿದರೆ ಸ್ಥಳೀಯರು ನಮ್ಮನ್ನೇ ದಬಾಯಿಸುತ್ತಾರೆ ಎಂದು ಹೇಳುತ್ತಾರೆ. ಬಿಎಂಟಿಸಿ ಮತ್ತು ಬಿಬಿಎಂಪಿ ಮತ್ತು ಸಂಚಾರ ಪೊಲೀಸರು ಜಂಟಿಯಾಗಿ ಕಾರ್ಯನಿರ್ವಹಿಸಿ ಈ ಬಸ್ ನಿಲ್ದಾಣಗಳಲ್ಲಿ ಹಗಲು- ರಾತ್ರಿ ನಿಲ್ಲುವ ವಾಹನಗಳನ್ನು ತೆರವುಗೊಳಿಸದಿದ್ದಲ್ಲಿ ಮುಂದೊಂದು ದಿನ ಇಲ್ಲೊಂದು ಬಸ್ ನಿಲ್ದಾಣ ಇತ್ತು ಎಂಬುದನ್ನೇ ಜನ ಮರೆತುಬಿಡುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News