ಸಾಧನೆಗೈಯಲು ವಿದ್ಯಾರ್ಥಿಗಳು ಶ್ರಮ ವಹಿಸಬೇಕು: ಸಾಹಿತಿ ಪ್ರೊ.ಗುರುರಾಜ ಕರಜಗಿ

Update: 2019-06-08 16:42 GMT

ಬೆಂಗಳೂರು, ಜೂ. 8: ವಿದ್ಯಾರ್ಥಿಗಳು ಸಾಧನೆ ಮಾಡಲು ಸರಿಯಾದ ಮಾರ್ಗದ ಆಯ್ಕೆ ಮಾಡಿಕೊಳ್ಳಲು ಪೋಷಕರು ಹಾಗೂ ಶಿಕ್ಷಕರು ನೆರವಾಗಬೇಕು. ವಿದ್ಯಾರ್ಥಿಗಳು ವೃತ್ತಿಯಲ್ಲಿ ಉನ್ನತ ಮಟ್ಟದಲ್ಲಿ ಸಾಧನೆ ಮಾಡಿರುವ ವ್ಯಕ್ತಿಗಳನ್ನು ಗುರುವಾಗಿ ಸ್ವೀಕರಿಸಿ ಅವರಿಗಿಂತ ಹೆಚ್ಚು ಸಾಧನೆ ಮಾಡಲು ಶ್ರಮಿಸಬೇಕೆಂದು ಸಾಹಿತಿ ಪ್ರೊ. ಗುರುರಾಜ ಕರಜಗಿ ಸಲಹೆ ಮಾಡಿದ್ದಾರೆ.

ಶನಿವಾರ ಬೆಂಗಳೂರು ವಿವಿ ಜ್ಞಾನಭಾರತಿ ಆವರಣದ ಸಮಾಜಶಾಸ್ತ್ರ ವಿಭಾಗದಿಂದ ಪ್ರೊ.ಎಚ್.ಎನ್.ಸಭಾಂಗಣದಲ್ಲಿ ಹಿರಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಜೀವನದಲ್ಲಿ ಮಾನವ ತನ್ನ ಶಕ್ತಿಯನ್ನು ತಿಳಿದುಕೊಳ್ಳಬೇಕು ಎಂದರು.

ಇಂದು ಮನುಷ್ಯನ ಮೂಲ ಅಪೇಕ್ಷಗಳು ಬದಲಾಗಿಲ್ಲ. ಅಂದು ಆದಿಮಾನವ ಕಾಲದಲ್ಲಿ ಮನುಷ್ಯನಿಗೆ ಇದ್ದ ಆಸೆಗಳು ಇನ್ನೂ ಹಾಗೆಯೇ ಇವೆ. ಮನುಷ್ಯನಿಗೆ ಚಿರಂಜೀವಿಯಾಗಿ ಇರಬೇಕು ಎಂಬುದು ಸದಾ ಕಾಲ ಆಸೆ, ಜೀವನದಲ್ಲಿ ಸಂತೋಷವನ್ನು ಹುಡುಕಬೇಕು ಎಂದರು.

ಸಮಾಜಕ್ಕೆ ಒಳ್ಳೆಯದನ್ನು ಮಾಡಿರುವ ವ್ಯಕ್ತಿಗಳನ್ನು ನಾವು ಮರೆಯಬಾರದು. ಹಾಗೆಯೇ ನಾವು ಸಮಾಜಕ್ಕೆ ಏನನ್ನು ಮಾಡಿದ್ದೇವೆ ಎಂಬುದನ್ನು ಅರಿಯಬೇಕು. ನಮ್ಮ ಜೀವನದಲ್ಲಿ ಬರುವ ಎಲ್ಲರೂ ನಮಗೆ ಒಂದು ಪಾಠವನ್ನು ಕಲಿಸುತ್ತಾರೆ. ಅದನ್ನು ತಿಳಿದು ಸಮಾಜವನ್ನು ಕಟ್ಟಬೇಕು ಎಂದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡಿದ್ದ ಸಂಸ್ಕೃತ ವಿವಿ ಕುಲಪತಿ ಪ್ರೊ. ಪದ್ಮಾಶೇಖರ್ ಮಾತನಾಡಿ, ಮಹಿಳಾ ವಿದ್ಯಾರ್ಥಿಗಳು ಮಾಡುತ್ತಿರುವ ಸಾಧನೆಗಳು ಅಪಾರ ಅವರಿಗೆ ರಾಜ್ಯದ ಎಲ್ಲ ವಿವಿಗಳಿಂದ ಸಿಗುತ್ತಿರುವ ಪ್ರೋತ್ಸಾಹವೇ ಕಾರಣ ಎಂದರು.

ಕಾರ್ಯಕ್ರಮದಲ್ಲಿ ಸಿಂಡಿಕೇಟ್ ಸದಸ್ಯೆ ಡಾ.ಸುಕನ್ಯಾ ಹೆಗಡೆ, ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ.ಸಮತಾ ಬಿ.ದೇಶಮಾನೆ, ಪ್ರಾಧ್ಯಾಪಕ ಡಾ.ರಾಜೇಶ್, ನಿವೃತ್ತ ಪ್ರಾಧ್ಯಾಪಕಿ ಪ್ರೊ.ಬಿ.ಎಂ.ಜಯಶ್ರೀ ಉಪಸ್ಧಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News