ಒಳ ಜಗಳದಿಂದ ಭೋವಿ ಸಮುದಾಯದ ಅಭಿವೃದ್ದಿ ಕುಂಠಿತ: ಸಚಿವ ವೆಂಕಟರಮಣಪ್ಪ

Update: 2019-06-08 16:44 GMT

ಬೆಂಗಳೂರು, ಜೂ.8: ಭೋವಿ ಸಮುದಾಯವು ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾ ಸಾಕಷ್ಟು ಹಿಂದೆ ಉಳಿದಿದ್ದು, ಈ ಸಮುದಾಯದ ಅಭಿವೃದ್ಧಿಗಾಗಿ ನಿಗಮ ಮಂಡಳಿಗೆ ಅನುದಾನ ತರಲು ಎಲ್ಲ ರೀತಿಯ ಪ್ರಯತ್ನಗಳನ್ನೂ ಮಾಡುತ್ತೇನೆ ಎಂದು ಕಾರ್ಮಿಕ ಸಚಿವ ವೆಂಕಟರಮಣಪ್ಪ ಹೇಳಿದ್ದಾರೆ.

ಶನಿವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಅಖಿಲ ಕರ್ನಾಟಕ ಭೋವಿ(ವಡ್ಡರ) ಯುವ ವೇದಿಕೆ ಆಯೋಜಿಸಿದ್ದ ರಾಜ್ಯಮಟ್ಟದ ಭೋವಿ ಯುವಜನ, ಮಹಿಳಾ ಮತ್ತು ಕಾರ್ಮಿಕ ಪ್ರತಿನಿಧಿಗಳ ಚಿಂತನ ಸಭೆ ಮತ್ತು ಪದಾಧಿಕಾರಿಗಳ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈ ಸಮುದಾಯದಲ್ಲಿ ಶಿಕ್ಷಣದ ಕೊರತೆ ಹೆಚ್ಚಾಗಿದೆ. ಅದೇ ರೀತಿಯಾಗಿ ಭೋವಿ ಸಮುದಾಯದ ಮುಖಂಡರಲ್ಲಿ ಒಳ ಜಗಳಗಳೂ ಇವೆ. ಈ ಸಮಸ್ಯೆಗಳನ್ನು ಬದಿಗಿಟ್ಟು ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಸರಕಾರದ ಯೋಜನೆಗಳು, ಮೀಸಲಾತಿ ಮತ್ತು ಸೌಲಭ್ಯಗಳನ್ನು ಸದ್ಭಳಕೆ ಮಾಡಿಕೊಂಡು ಸಮಾಜದ ಮುಖ್ಯ ವಾಹಿನಿಗೆ ಬರಲು ಸಾಧ್ಯವಿದೆ ಎಂದು ಹೇಳಿದರು.

ಹಿರಿಯ ಪತ್ರಕರ್ತ ಮಹದೇವ್ ಪ್ರಕಾಶ್ ಮಾತನಾಡಿ, ದೇವರಾಜ ಅರಸು ಮುಖ್ಯಮಂತ್ರಿಯಾದ ಬಳಿಕ ಹಿಂದುಳಿದ ವರ್ಗಗಳಿಗೂ ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ ದೊರೆಯಿತು. ಅದಕ್ಕೂ ಮೊದಲು ಒಕ್ಕಲಿಗ, ಲಿಂಗಾಯತ ಹಾಗೂ ಬ್ರಾಹ್ಮಣ ಸಮುದಾಯಗಳ ಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗುತ್ತಿದ್ದರು. ಅರಸು ಬಂದ ಬಳಿಕ ಹಿಂದುಳಿದ ವರ್ಗಗಳು ಕೂಡ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧ್ಯವಾಯಿತು. ನಂತರ ಹಿಂದುಳಿದ ವರ್ಗಕ್ಕೆ ಸೇರಿದ ಜನಾಂಗದವರು ಕೂಡ ಮುಖ್ಯಮಂತ್ರಿಗಳಾದರು ಎಂದು ತಿಳಿಸಿದರು.

ಭೋವಿ ಸಮಾಜಕ್ಕೆ 1931ರಲ್ಲಿಯೇ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೀಸಲಾತಿ ಕಲ್ಪಿಸಿದರು. ನಂತರ ದೇವರಾಜ ಅರಸು ಭೋವಿ ಸಮಾಜಕ್ಕೆ ರಾಜ್ಯಾದ್ಯಂತ ಮೀಸಲಾತಿ ವಿಸ್ತರಿಸಿದರು. ಪ್ರಸ್ತುತ ಲೋಕಸಭೆ ಚುನಾವಣೆಯಲ್ಲಿ ಐದು ಮೀಸಲು ಕ್ಷೇತ್ರಗಳ ಪೈಕಿ ಒಂದರಲ್ಲೂ ಸ್ಪರ್ಧಿಸಲು ಸಾಧ್ಯವಾಗಿಲ್ಲ. ತಲಾ ಎರಡು ಕ್ಷೇತ್ರಗಳಲ್ಲಿ ಛಲವಾದಿ, ಮಾದಿಗ ಹಾಗೂ ಒಂದು ಕ್ಷೇತ್ರದಲ್ಲಿ ಲಂಬಾಣಿ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಕೋಲಾರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಳಕ್ಕಿಳಿದಿದ್ದ ಶಂಕರಪ್ಪ ಕೊನೇ ಗಳಿಗೆಯಲ್ಲಿ ಟಿಕೆಟ್ ವಂಚಿತರಾದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹೈಕೋರ್ಟ್ ಹಿರಿಯ ವಕೀಲ ಶಂಕ್ರಪ್ಪ ಮಾತನಾಡಿ, ಭೋವಿ ಸಮುದಾಯವು ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಬೆಳೆಯಬೇಕಾದರೆ ಕಟ್ಟಡ ಕಾರ್ಮಿಕರ ಸಂಘಟನೆಯೊಂದನ್ನು ಕಟ್ಟುವ ಅವಶ್ಯಕತೆ ಇದೆ ಎಂದು ಹೇಳಿದರು.

ಭೋವಿ ಸಮುದಾಯದ ಮುಖಂಡರು ರಾಜಕೀಯ ಸೇರಿ ಇನ್ನಿತರ ಕ್ಷೇತ್ರಗಳಲ್ಲಿ ಬಹುದೊಡ್ಡ ಹೆಸರು ಮಾಡಿದರೆ ನಾವೆಲ್ಲರೂ ಖುಷಿ ಪಡುವುದರ ಜೊತೆಗೆ ನಮ್ಮ ಭೋವಿ ಸಮುದಾಯಕ್ಕೆ ಅನುಕೂಲತೆಗಳು ಹೆಚ್ಚಾಗುತ್ತವೆ. ಕೆಲವು ವರ್ಷಗಳ ಹಿಂದೆ ಸ್ಥಾಪನೆಯಾದ ಅಖಿಲ ಕರ್ನಾಟಕ ಭೋವಿ(ವಡ್ಡರ) ಯುವ ವೇದಿಕೆ ಈಗ ತನ್ನದೆ ಆದ ಶಕ್ತಿಯನ್ನು ಹೊಂದಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಶಿವರಾಜ್ ಎಸ್. ತಂಗಡಗಿ, ಸಿನಿಮಾ ನಿರ್ದೇಶಕ ಎಸ್.ನಾರಾಯಣ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News