ಜೂಜಾಡುತ್ತಿದ್ದ ವ್ಯಕ್ತಿಯ ಬಂಧನ: 1.60 ಲಕ್ಷ ರೂ. ನಗದು ಜಪ್ತಿ
Update: 2019-06-08 22:28 IST
ಬೆಂಗಳೂರು, ಜೂ.8: ಹಣವನ್ನು ಪಣವಾಗಿ ಕಟ್ಟಿಕೊಂಡು ಜೂಜಾಟ ಆಡುತ್ತಿದ್ದ ಆರೋಪ ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು, ಓರ್ವನನ್ನು ಬಂಧಿಸಿ 1.60 ಲಕ್ಷ ರೂ. ನಗದು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ನಗರದ ಗಾಣಿಗರ ಪಾಳ್ಯದ ಜ್ಞಾನಾಕ್ಷಿ ರೆಸಿಡೆನ್ಸಿ ಫ್ಲಾಟ್‌ನಲ್ಲಿ ಸೂರಜ್ ಎಂಬಾತ ಬಂಧಿತ ಆರೋಪಿ ಎಂದು ಸಿಸಿಬಿ ಡಿಸಿಪಿ ಎಸ್.ಗಿರೀಶ್ ತಿಳಿಸಿದ್ದಾರೆ.
ಜೂ.7ರಂದು ನಡೆದ ಶ್ರೀಲಂಕಾ ಮತ್ತು ಪಾಕಿಸ್ತಾನ ತಂಡಗಳ ನಡುವೆ ನಡೆಯುವ ಐಸಿಸಿ ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿಗೆ ಸಂಬಂಧಪಟ್ಟಂತೆ ತಂಡಗಳ ಸೋಲು ಮತ್ತು ಗೆಲುವಿನ ಬಗ್ಗೆ ಸಾರ್ವಜನಿಕರಿಂದ ಮೊಬೈಲ್ ಆಪ್ ಮೂಲಕ ಬೆಟ್ಟಿಂಗ್ ನಡೆಸುತ್ತಿದ್ದ. ಈ ಸಂಬಂಧ ಮಾಹಿತಿ ಸಂಗ್ರಹಿಸಿ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಬಂಧಿತ ಆರೋಪಿಯಿಂದ 1.60 ಲಕ್ಷ ರೂ.ನಗದು, 2 ಮೊಬೈಲ್ ಜಪ್ತಿ ಮಾಡಿ, ಇಲ್ಲಿನ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.