ಉಕ್ಕಿನ ಮೇಲ್ಸೇತುವೆ ಪ್ರಶ್ನಿಸಿ ಪಿಐಎಲ್: ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್

Update: 2019-06-08 17:35 GMT

ಬೆಂಗಳೂರು, ಜೂ.8: ನಗರದ ಬಸವೇಶ್ವರ ವೃತ್ತ- ಹೆಬ್ಬಾಳ ನಡುವೆ ಉಕ್ಕಿನ ಷಟ್ಪಥ ಮೇಲ್ಸೇತುವೆ ಯೋಜನೆ ಯನ್ನು ಪ್ರಶ್ನಿಸಿ ನಮ್ಮ ಬೆಂಗಳೂರು ಪ್ರತಿಷ್ಠಾನ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಜೂ.10ಕ್ಕೆ ಮುಂದೂಡಿದೆ.

ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಪಿ.ಎಸ್.ದಿನೇಶ್‌ಕುಮಾರ್ ಅವರಿದ್ದ ವಿಭಾಗೀಯ ಪೀಠದ ಮುಂದೆ ಬಂದಿತ್ತು. ಅರ್ಜಿ ಸಂಬಂಧ ಸರಕಾರದ ಪರವಾಗಿ ಅಡ್ವೋಕೇಟ್ ಜನರಲ್ ಅಥವಾ ಹೆಚ್ಚುವರಿ ಅಡ್ವೋಕೇಟ್ ಜನರಲ್ ಸೋಮವಾರ ವಾದ ಮಂಡಿಸಲಿದ್ದಾರೆ. ಹೀಗಾಗಿ, ವಿಚಾರಣೆ ಸೋಮವಾರಕ್ಕೆ ಮುಂದೂಡಬೇಕು ಎಂದು ಬಿಡಿಎ ಪರ ವಕೀಲರು ಕೋರಿದರು. ಇದರಿಂದ ನ್ಯಾಯಾಲಯವು ಅರ್ಜಿ ವಿಚಾರಣೆಯನ್ನು ಜೂ.10ಕ್ಕೆ ಮುಂದೂಡಿತು.

ನಗರದ ಬಸವೇಶ್ವರ ವೃತ್ತದಿಂದ ಹೆಬ್ಬಾಳ ಮೇಲ್ಸೇತುವೆವರೆಗೆ ಉಕ್ಕಿನ ಷಟ್ಪಥ ಮೇಲ್ಸೇತುವೆ ನಿರ್ಮಾಣ ಯೋಜನೆಗೆ 2016ರಲ್ಲಿ ಕಾಂಗ್ರೆಸ್ ಸರಕಾರ ಅನುಮೋದನೆ ನೀಡಿತ್ತು. ಈ ಯೋಜನೆಗೆ 1,800 ಕೋಟಿ ರೂ.ವ್ಯಯಿಸಲು ಉದ್ದೇಶಿಸಲಾಗಿತ್ತು. ಯೋಜನೆ ಪ್ರಶ್ನಿಸಿ ನಮ್ಮ ಬೆಂಗಳೂರು ಪ್ರತಿಷ್ಠಾನ ಪಿಐಎಲ್ ಸಲ್ಲಿಸಿದೆ. ಯೋಜನೆಗೆ ಸಾರ್ವಜನಿಕರಿಂದ ಸಲಹೆ ಹಾಗೂ ಅಹವಾಲು ಸ್ವೀಕರಿಸಿಲ್ಲ. ಮುಖ್ಯವಾಗಿ ಕಾಮಗಾರಿಗೆ ಪರಿಸರ ಇಲಾಖೆಯಿಂದ ಅನುಮತಿ ಪಡೆದಿಲ್ಲ ಎಂದು ಆಕ್ಷೇಪಿಸಿದ್ದ ಅರ್ಜಿದಾರರು, ಯೋಜನೆ ಕೈಬಿಡುವಂತೆ ಸರಕಾರ ಹಾಗೂ ಬಿಡಿಎಗೆ ನಿರ್ದೇಶಿಸಬೇಕು ಎಂದು ಕೋರಿತ್ತು. ಈ ಮಧ್ಯೆ ಪ್ರಕರಣವು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ (ಎನ್‌ಜಿಟಿ) ಮೆಟ್ಟಿಲೇರಿತ್ತು ಪರಿಸರ ಇಲಾಖೆ ಹಾಗೂ ಮಾಲಿನ್ಯ ನಿಯಂತ್ರಣ ಇಲಾಖೆ ಸೇರಿದಂತೆ ಸಕ್ಷಮ ಪ್ರಾಧಿಕಾರಗಳಿಂದ ಅನುಮತಿ ಪಡೆಯದೇ ಉಕ್ಕಿನ ಸೇತುವೆ ನಿರ್ಮಾಣ ಕಾಮಗಾರಿ ನಡೆಸುವಂತಿಲ್ಲ ಎಂದು ರಾಜ್ಯ ಸರಕಾರಕ್ಕೆ ನಿರ್ದೇಶಿಸಿ 2017ರ ಮಾರ್ಚ್‌ನಲ್ಲಿ ಎನ್‌ಜಿಟಿ ಆದೇಶಿಸಿತ್ತು ಇದರಿಂದ, ಸರಕಾರವು ಈ ಯೋಜನೆಯನ್ನು ಸ್ಥಗಿತಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News