ಶಾಲೆ: ಹೀಗೊಂದು ನೆನಪಿನ ಹಾಳೆ

Update: 2019-06-08 18:11 GMT

ಬೇಸಿಗೆ ರಜೆ ಕಳೆದು ಶಾಲೆಯ ತರಗತಿ ಗಳು ಆರಂಭವಾಗಿದೆ. ಪುಟ್ಟ ಮಕ್ಕಳು ಹೊಸ ಹುರುಪಿನಿಂದ ಸಮವಸ್ತ್ರ ಧರಿಸಿ ಶಾಲೆಯತ್ತ ಹೆಜ್ಜೆ ಹಾಕುತ್ತಿದ್ದಾರೆ. ಕಳೆ ದೆರಡು ತಿಂಗಳುಗಳಿಂದ ಜೀವ ಕಳೆದು ಕೊಂಡಂತೆ ಇದ್ದ ಶಾಲೆಯ ವಠಾರ ಇಂದು ಮಕ್ಕಳ ಕಲರವದಿಂದ ನಳನಳಿಸುತ್ತಿದೆ.

ಶಾಲೆಗೆ ಹೊರಟ ಈ ಪುಟಾಣಿಗಳನ್ನು ನೋಡುತ್ತಿದ್ದರೆ ನಮ್ಮ ಬಾಲ್ಯದ ಶಾಲಾ ದಿನಗಳ ನೆನಪು ಒಮ್ಮೆಲೆ ಸ್ಮತಿಪಟಲದ ಮುಂದೆ ಹಾದುಹೋಗು ತ್ತದೆ. ನನ್ನ ಶಾಲಾ ದಿನಗಳ ಬಗ್ಗೆ ಹೇಳುವುದಾದರೆ ನಾನು ಒಂದನೇ ತರಗತಿ ಯಿಂದ ಐದನೇ ತರಗತಿಯ ತನಕ ಕಲಿತದ್ದು ನಮ್ಮ ಮನೆಯ ಪಕ್ಕದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ. ಅಲ್ಲಿ ಕಳೆದ ಆ ಐದು ವರ್ಷಗಳು ಎಂದಿಗೂ ಮರೆಯಲಾಗದ್ದು. ಒಂದನೇ ತರಗತಿಗೆ ದಾಖಲಾದಾಗ ಅನುಭವಿಸಿದ್ದ ಆ ಸಂಭ್ರಮ ವರ್ಣಿಸಲಾಗದ್ದು.

ಶಾಲೆ ಆರಂಭದ ಹೊತ್ತಿಗೆ ಸರಿಯಾಗಿ ಮಳೆಗಾಲ ಶುರುವಾಗುತ್ತಿದ್ದ ಅಂದಿನ ಕಾಲದಲ್ಲಿ ಹೊಸ ಕೊಡೆ, ಹೊಸ ಬ್ಯಾಗು, ಹೊಸ ಪುಸ್ತಕಗ ಳೊಂದಿಗೆ ಶಾಲೆಗೆ ತೆರಳುವ ಹುಮ್ಮಸ್ಸೇ ಬೇರೆ...!

ಆದರೆ ಈ ಸಡಗರ ಕೆಲವು ದಿನಗಳು ಮಾತ್ರ ಎಂದು ಅರಿವಾದದ್ದು ಶಾಲೆಯಲ್ಲಿ ತರಗತಿಗಳು ಸರಿಯಾಗಿ ಆರಂಭವಾದ ಮೇಲೆ...!!

ಆದರೆ ಈಗಿನ ಮಕ್ಕಳಂತೆ ಮಣಭಾರದ ಪುಸ್ತಕಗಳು ಹಾಗೂ ಬರೆದಷ್ಟೂ ಮುಗಿಯದ ಹೋಂವರ್ಕ್ಸ್ ಆಗ ಇರಲಿಲ್ಲ. ಹೆಚ್ಚಿನ ಓದು ಬರವಣಿಗೆ ತರಗತಿಯ ಅವಧಿಗಳಲ್ಲೇ ಮುಗಿದು ಶಾಲೆ ಬಿಟ್ಟ ನಂತರ ಆಟವಾಡಲು ಧಾರಾಳ ಸಮಯ ಸಿಗುತ್ತಿತ್ತು. ಮನೆಯ ಪಕ್ಕದಲ್ಲೇ ಶಾಲೆ ಇದ್ದುದರಿಂದ ಮಧ್ಯಾಹ್ನದ ಊಟಕ್ಕೆ ಬುತ್ತಿ ಕೊಂಡುಹೋಗುವ ಪ್ರಮೇಯ ಬರುತ್ತಿರಲಿಲ್ಲ. ಕಾಲು ನೋವು, ಹೊಟ್ಟೆನೋವು ಎಂದು ಕುಂಟು ನೆಪ ಹೇಳಿ ರಜೆ ಮಾಡುವ ಅವಕಾಶವೂ ಇರಲಿಲ್ಲ. ಶಾಲೆಗೆ ಹೋಗದೇ ಇದ್ದರೆ ಮುಖ್ಯೋಪಾಧ್ಯಾಯರು ಸೀದಾ ಮನೆಗೆ ಬರುತ್ತಿದ್ದರು. ಶಾಲೆಯಲ್ಲಿ ಎರಡನೇ ತರಗತಿಗೆ ದಾಟುವ ಹೊತ್ತಿಗೆನಾನು ಮತ್ತು ನನ್ನ ಓರಗೆಯ ಗೆಳೆಯರಿಬ್ಬರು ಸವಣೂರು ಮದ್ರಸಕ್ಕೆ ಒಂದನೇ ತರಗತಿಗೆ ದಾಖಲಾಗಿದ್ದೆವು. ದಿನಾ ಬೆಳಗ್ಗೆ ಆರು ಗಂಟೆಗೆ ಎದ್ದು ಒಂದು ಮೈಲಿ ದೂರದ ಮದ್ರಸಕ್ಕೆ ಕಾಲ್ನಡಿಗೆಯಲ್ಲಿ ತೆರಳಿ, ಮದ್ರಸದ ತರಗತಿ ಮುಗಿಸಿ ಮನೆಗೆ ಮರಳುವಷ್ಟರಲ್ಲಿ ಶಾಲೆಯಲ್ಲಿ ಪ್ರಾರ್ಥನೆ ಶುರುವಾಗುತ್ತಿತ್ತು. ಪ್ರಾರ್ಥನೆಗೆ ಮುಂಚೆಯೇ ಎಲ್ಲಾ ವಿದ್ಯಾರ್ಥಿಗಳು ಹಾಜರಾಗ ಬೇಕಾಗಿದ್ದರೂ, ನಮ್ಮನ್ನು ಸ್ವಲ್ಪ ತಡವಾದರೂ ತರಗತಿಗೆ ಸೇರಿಸಿಕೊಳ್ಳುತ್ತಿದ್ದರು. ಕೆಲವೊಮ್ಮೆ ಮಳೆ ಗಾಲದ ದಿನಗಳಲ್ಲಿ ನಾವು ಬೇಕಂತಲೇ ತಡಮಾಡುತ್ತಿದ್ದೆವು. ಆದರೂ ಶಾಲೆಗೆ ರಜೆ ಮಾಡಲು ಆಗುತ್ತಲೇ ಇರಲಿಲ್ಲ.

ನಮ್ಮ ಶಾಲೆಗೆ ಹತ್ತಿರದ ಕೈ ಪಂಪಿನಿಂದ ನೀರು ತರಬೇಕಾಗಿತ್ತು.ಹೂವಿನ ಗಿಡಗಳಿಗೆ ನೀರು ಹಾಕಬೇಕಾಗುತ್ತಿತ್ತು. ತರಗತಿಗಳನ್ನು ವಿದ್ಯಾರ್ಥಿಗಳೇ ಗುಡಿಸಬೇಕಾಗಿತ್ತು. ಈ ಕೆಲಸಗಳೆಲ್ಲವೂ ಸರದಿಯ ಪ್ರಕಾರ ಒಬ್ಬೊಬ್ಬರ ಪಾಲಿಗೆ ಬರುತ್ತಿತ್ತು. ಆದರೆ ನಮಗೆ ಶುಕ್ರವಾರದ ದಿವಸ ಮಾತ್ರ ಮದ್ರಸಕ್ಕೆ ರಜೆ ಇರುತ್ತಿದ್ದುದರಿಂದ ಆ ದಿವಸದ ಕೆಲಸಗಳು ನಮ್ಮ ಪಾಲಿಗೆ ಖಾಯಂ ಆಗುತ್ತಿತ್ತು. ನಮ್ಮ ಶಾಲೆ ಹಳ್ಳಿ ಪ್ರದೇಶದ ಕಿರಿಯ ಪ್ರಾಥಮಿಕ ಶಾಲೆ ಯಾಗಿದ್ದುದರಿಂದ ಶೌಚಾಲಯ ಮೊದಲಾದ ಮೂಲಭೂತ ಸೌಕರ್ಯಗಳೂ ಇರಲಿಲ್ಲ. ನಾವು ಮೂತ್ರ ವಿಸರ್ಜನೆಗೆ ಶಾಲೆಯ ತೋಟದಲ್ಲಿ ಹೇರಳವಾಗಿ ಬೆಳೆದಿದ್ದ ಗಾಳಿ ಮರಗಳ ಬುಡಗಳನ್ನು ಆಶ್ರಯಿಸುತ್ತಿ ದ್ದೆವು. ಒಂದೊಂದು ಮರದ ಬುಡಗಳು ಒಬ್ಬೊಬ್ಬರಿಗೆ ಮೀಸಲಿರಿಸ ಲಾಗಿತ್ತು. ಆ ಮರದ ಬುಡದಲ್ಲಿ ಇನ್ನೊಬ್ಬ ಮೂತ್ರ ಮಾಡಿದರೆ ಆಗಲೇ ಗಲಾಟೆ ಶುರುವಾಗುತ್ತಿತ್ತು. ಪೀರಿಯಡ್‌ಗಳ ನಡುವಿನ ನಿಗದಿತ ಅವಧಿ ಯಲ್ಲಿ, ಅಲ್ಲದೆ ಪಾಠ ನಡೆಯುತ್ತಿರುವಾಗಲೂ ಸುಮ್ಮನೆ ಮೂತ್ರ ಮಾಡುವ ನೆಪದಲ್ಲಿ ಹೊರಹೋಗುತ್ತಿದ್ದೆವು. ಟೀಚರ್ ಪಾಠ ಮಾಡು ವಾಗ ಮಧ್ಯದಲ್ಲಿ ಎದ್ದು ನಿಂತು ‘ಟೀಚರ್ ಒಂದಕ್ಕೆ’ ಎಂದು ಕಿರು ಬೆರಳು ಎತ್ತಿ ತೋರಿಸುತ್ತಿದ್ದೆವು. ಹೊರ ಹೋಗಲು ಬಿಡದಿದ್ದರೆ ಕೊಠಡಿ ಯಲ್ಲೇ ಮೂತ್ರ ಮಾಡಬಹುದು ಎಂಬ ಭಯದಿಂದ ಟೀಚರ್‌ಹೊರಹೋಗಲು ಸಮ್ಮತಿಸುತ್ತಿದ್ದರು. ಆದರೆ ಒಮ್ಮೆ ಒಬ್ಬನನ್ನು ಮಾತ್ರ ಹೊರಗೆ ಬಿಡುತ್ತಿದ್ದರಿಂದ ಆ ಹೊರಹೋಗುವಿಕೆ ಯೂ ವ್ಯರ್ಥವಾಗುತ್ತಿತ್ತು. ಶಾಲೆಯಲ್ಲಿ ಆಗ ಧಾರಾಳವಾಗಿ ಬೆತ್ತ ದೇಟುಗಳು ನಮ್ಮ ಬೆನ್ನೇರುತ್ತಿದ್ದವು. ಗಾಳಿ ಮರದ ಕೋಲುಗಳೇ ಟೀಚರ್‌ರ ಆಯುಧ ಗಳಾಗಿದ್ದವು. ದೊಡ್ಡ ಮಟ್ಟದ ಕೀಟಲೆ ಮಾಡಿದವರಿಗೆ ಮೂರ್ನಾಲ್ಕು ಬೆತ್ತಗಳನ್ನು ಒಟ್ಟುಗೂಡಿಸಿ ಹೊಡೆಯುತ್ತಿದ್ದರು.

ನಮ್ಮ ಶಾಲೆಯಲ್ಲಿ ಆಟದ ಮೈದಾನವಿತ್ತು. ಆದರೆ ಆಟಕ್ಕೆ ಬೇಕಾದ ಪರಿಕರಗಳೂ, ದೈಹಿಕ ಶಿಕ್ಷಣದ ಶಿಕ್ಷಕರೂ ಇರಲಿಲ್ಲ.ಆದ್ದರಿಂದ ನಾವು ಆಡಿದ್ದೇ ಆಟವಾಗುತ್ತಿದ್ದವು. ಈ ಆಟಗಳ ನಡುವೆ ಆಗಾಗ ಗುಂಪು ಗಲಾಟೆಗಳು ನಡೆಯುತ್ತಿದ್ದವು. ಹೊಡೆದಾಟ ಬಡಿದಾಟಗಳಲ್ಲಿ ನಿರತ ರಾದ ನಮ್ಮನ್ನು ಬಿಡಿಸುವುದೇ ಟೀಚರರಿಗೆ ಪ್ರಯಾಸದ ಕೆಲಸ ವಾಗಿತ್ತು. ನಾವು ಕಲಿಯುವ ಸಂದರ್ಭದಲ್ಲಿ ವಿನಯಾ ಎಂಬ ಟೀಚರ್ ನಮ್ಮ ಮುಖ್ಯೋಪಾಧ್ಯಾಯಿನಿ ಆಗಿದ್ದರು. ಚಂದ್ರಶೇಖರ್ ಎಂಬ ಸಹ ಅಧ್ಯಾಪಕರು ಮತ್ತು ಪ್ರೇಮಾ ಎಂಬ ಹೆಸರಿನ ನಮ್ಮೂರಿನ ಮಹಿಳೆಯೊಬ್ಬರು ಗೌರವ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. ವಿನಯಾ ಟೀಚರ್ ನಮ್ಮ ಪಾಲಿಗೆ ಭಯಂಕರ ಜೋರಿನವರಾಗಿದ್ದರೂ, ನಮ್ಮನ್ನು ಸ್ವಂತ ಮಕ್ಕಳಂತೆ ವಾತ್ಸಲ್ಯದಿಂದ ನೋಡಿಕೊಳ್ಳುತ್ತಿದ್ದರು. ಚಂದ್ರಶೇಖರ ಮೇಷ್ಟ್ರು ಮೃದು ಸ್ವಭಾವದವರು ಮತ್ತು ಮಕ್ಕಳಿಗೆ ಹೊಡೆಯುತ್ತಿ ರಲಿಲ್ಲ. ನಾವು ಏನೇ ತಪ್ಪು ಮಾಡಿದರೂ ವಿನಯಾ ಟೀಚರರ ಕೈಯಿಂದ ಗಾಳಿ ಬೆತ್ತದ ರುಚಿ ಉಣ್ಣುತ್ತಿದ್ದೆವು. ಪ್ರೇಮಾ ಟೀಚರ್ ಊರಿನ ವರಾದದ್ದರಿಂದ ಸ್ವಲ್ಪ ಹೆಚ್ಚು ಸಲುಗೆ ಬೆಳೆಸಿ ಕೊಂಡಿದ್ದೆವು.

ನಮ್ಮ ಶಾಲೆಯಿಂದ ಹೊರಗಿನ ಶಾಲೆಗಳಿಗೆ ಸ್ಪರ್ಧೆಗಳಿಗೆ, ಪಂದ್ಯಾವಳಿಗೆ ಹೋಗುವ ಪರಿಪಾಠವೇ ಇರಲಿಲ್ಲ. ಆದರೆ ನಾವು ಐದನೇ ತರಗತಿಯಲ್ಲಿದ್ದ ಸಮಯ ಸವಣೂರಿನಲ್ಲಿ ನಡೆದ ಪ್ರತಿಭಾ ಕಾರಂಜಿಯಲ್ಲಿ ಒಂದಷ್ಟು ಮಂದಿ ವಿದ್ಯಾರ್ಥಿಗಳು ಭಾಗ ವಹಿಸಿದ್ದೆವು.ಅದರಲ್ಲಿ ರಸಪ್ರಶ್ನೆ ವಿಭಾಗದಲ್ಲಿ ನಾನು ಕ್ಲಸ್ಟರ್ ಮಟ್ಟದಿಂದ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದೆ. ಅದು ನನಗೆ ಸ್ಪರ್ಧೆಯೊಂದರಲ್ಲಿ ಭಾಗವಹಿಸಿ ವಿಜಯಿಯಾದ ಮೊದಲ ಅನುಭವ. ನಾನಾದರೋ ಆಗ ರಾಷ್ಟ್ರಪ್ರಶಸ್ತಿ ಪಡೆದವನ ಹಾಗೆ ಶಾಲೆಯಲ್ಲಿ ಫೋಸು ಕೊಟ್ಟಿದ್ದೆ. ನಂತರ ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಸೋತು ತುಂಬಾ ಹತಾಶೆೆೆಯಿಂದ ಹಿಂದಿರುಗಿದ್ದೆ.

ಆಗ ಶಾಲೆಯಲ್ಲಿ ಬಿಸಿಯೂಟದ ವ್ಯವಸ್ಥೆ ಇರಲಿಲ್ಲ. ಪ್ರತೀ ತಿಂಗಳು ಪ್ರತಿಯೊಬ್ಬ ವಿದ್ಯಾರ್ಥಿಗೆ ಸಮೀಪದ ಪಡಿತರ ಅಂಗಡಿಯಿಂದ ಮೂರು ಕೆಜಿಗಳಂತೆ ಅಕ್ಕಿ ಸಿಗುತ್ತಿತ್ತು. ಅದಕ್ಕೆ ಪಡಿತರ ಚೀಟಿ ರೂಪದ ಕಾರ್ಡೊಂದರಲ್ಲಿ ಶಾಲೆಯಿಂದ ಬರೆದುಕೊಡಬೇಕಾಗಿತ್ತು. ಪಡಿತರ ಅಂಗಡಿಯಲ್ಲಿ ಅಕ್ಕಿ ಪಡೆದುಕೊಂಡ ಬಗ್ಗೆ ಪೋಷಕರು ಸಹಿ ಹಾಕಬೇಕಾಗಿತ್ತು. ನನ್ನ ಪಾಲಿನ ಪಡಿತರ ಅಕ್ಕಿ ಪಡೆಯಲು ನನ್ನ ಅಜ್ಜ ಸೊಸೈಟಿಗೆ ಹೋಗುತ್ತಿದ್ದರು. ಕನ್ನಡ ಬರೆಯಲು ಬಾರದ ನನ್ನಜ್ಜ ಅರೆಬಿಕ್ ಭಾಷೆಯ ಮೂರು ಅಕ್ಷರಗಳನ್ನು ಬಳಸಿ ಸಹಿ ಮಾಡುತ್ತಿದ್ದರು.ಬೇರೆ ಎಲ್ಲಾ ಕಾರ್ಡುಗಳಿಂದ ವ್ಯತಿರಿಕ್ತವಾಗಿ ಅಜ್ಜ ಸಹಿ ಮಾಡಿರುತ್ತಿದ್ದ ನನ್ನ ಕಾರ್ಡಿನ ಚಿತ್ರಣ ಈಗಲೂ ನನ್ನ ಕಣ್ಣ ಮುಂದೆ ಮೂಡಿ ಬರುತ್ತಿದೆ.

ಮಳೆಗಾಲದಲ್ಲಿ ಎಲ್ಲರ ಬಳಿಯೂ ಕೊಡೆಗಳಿರುತ್ತಿದ್ದವು. ಆಗ ಬಣ್ಣದ ಕೊಡೆಗಳು ಹೊಸದಾಗಿ ಮಾರುಕಟ್ಟೆಗೆ ಕಾಲಿಟ್ಟ ಸಮಯ. ಬಣ್ಣಬಣ್ಣದ ಚಿತ್ತಾರಗಳ ಹೊದಿಕೆ ಮತ್ತು ಕೊಡೆಯ ಹಿಡಿಯೊಂದಿಗೆ ಸೀಟಿ ಇದ್ದಿದ್ದ ಅವುಗಳನ್ನು ನೋಡಿ ನಾನು ತುಂಬಾ ಆಸೆಪಡುತ್ತಿದ್ದೆ. ಆದರೆ ಆ ಕೊಡೆಗಳು ಹೆಚ್ಚು ಸಮಯ ಬಾಳ್ವಿಕೆ ಬರುತ್ತಿರಲಿಲ್ಲ. ನಾವು ಮದ್ರಸಕ್ಕೆ ತುಂಬಾ ದೂರ ನಡೆದು ಹೋಗಬೇಕಾದ್ದರಿಂದ ಅಂತಹ ಕೊಡೆಗಳನ್ನು ಬಳಸುವಂತಿರಲಿಲ್ಲ. ಬಲಿಷ್ಠವಾಗಿದ್ದ ತಾವರೆಯಾಕೃತಿಯ ಕಡ್ಡಿಗಳಿದ್ದ ಕೊಡೆಗಳು ಮಾತ್ರ ನಮಗೆ ಸರಿಹೊಂದುತ್ತಿದ್ದವು. ಈ ತಾವರೆ ಕೊಡೆಗಳು ಎಂತಹ ಗಾಳಿ ಮಳೆಗೂ ಮುರಿದು ಹೋಗುತ್ತಿರಲಿಲ್ಲ.

ನಾವು ಶಾಲೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ತಂಗೀಸಿನಿಂದ ಹೊಲಿದ ಚೀಲ ಹೆಚ್ಚಾಗಿ ಬಳಕೆಯಲ್ಲಿತ್ತು. ಈಗಿನ ಕಾಲದ ಝಿಪ್ ಇರುವ ಸ್ಕೂಲ್ ಬ್ಯಾಗುಗಳು ಇರಲಿಲ್ಲ. ಟಿಕ್ ಟಿಕ್ ರೂಪದ ಚೀಲಗಳು ಕೂಡಾ ಬಹಳ ಅಪರೂಪವಾಗಿತ್ತು. ಈಗಿನಂತೆ ಖಾಕಿ ಬೈಂಡುಗಳು ಇರಲಿಲ್ಲ. ಹಳೆಯ ಕ್ಯಾಲೆಂಡರ್ ಅಥವಾ ಪೇಪರುಗಳೇ ಬೈಂಡುಗಳಾಗಿದ್ದವು. ಮರದ ಚೌಕಟ್ಟಿನ ಸ್ಲೇಟು ಮತ್ತು ಒಂದು ರೀತಿಯ ಕಂದು ಬಣ್ಣದ ಕಡ್ಡಿಗಳನ್ನು ಬರೆಯಲು ಬಳಸುತ್ತಿದ್ದೆವು. ಆ ಮರದ ಸ್ಲೇಟುಗಳು ಆಗಾಗ ಬಿದ್ದು ಒಡೆದುಹೋಗುತ್ತಿದ್ದವು. ಆದರೆ ಮನೆಯಿಂದ ತಕ್ಷಣವೇ ಹೊಸ ಸ್ಲೇಟು ಖರೀದಿಸಿಕೊಡುತ್ತಿರಲಿಲ್ಲ. ಹಳೆ ಮುರಿದ ಸ್ಲೇಟಿನಲ್ಲೇ ಬರೆದು, ಟೀಚರರಿಂದ ಬೈಗುಳ ಹೊಡೆತ ತಿಂದ ಬಳಿಕ ಮನೆಯಲ್ಲಿ ಅತ್ತು ಕರೆದು ರಂಪ ಮಾಡಿದ ಮೇಲೆ ಹೊಸ ಸ್ಲೇಟು ಸಿಗುತ್ತಿತ್ತು. ಮನೆಯ ಆಗಿನ ಆರ್ಥಿಕ ಪರಿಸ್ಥಿತಿ ಕೂಡಾ ಹಾಗೆಯೇ ಇತ್ತು. ಕಡ್ಡಿಗಳು ಕೂಡಾ ಸೀಮಿತ ಲೆಕ್ಕದಲ್ಲಿ ಮಾತ್ರ ದೊರಕುತ್ತಿದ್ದವು.ಉಳಿದಂತೆ ಗೆಳೆಯರಿಂದ ಕಾಡಿ ಬೇಡಿ ಕಡ್ಡಿ ಪಡೆದು ಹೇಗೋ ಸಂಭಾಳಿಸುತ್ತಿದ್ದೆವು.

ಆಗಿನ ಕಾಲದಲ್ಲಿ ವಾರದಲ್ಲಿ ಎಲ್ಲಾ ದಿನಗಳಲ್ಲಿ ಸಮವಸ್ತ್ರ ಧರಿಸಬೇಕೆಂದಿರಲಿಲ್ಲ. ವಾರದಲ್ಲಿ ಒಂದೆರಡು ದಿನಗಳು ಮಾತ್ರ ಧರಿಸುತ್ತಿದ್ದೆವು. ಆ ಬಟ್ಟೆಗಳನ್ನು ಸರಕಾರದಿಂದ ಪೂರೈಸಲಾಗುತ್ತಿತ್ತು. ಅಪರೂಪಕ್ಕೊಮ್ಮೆ ಶಾಲೆಯಲ್ಲಿ ಟೂತ್‌ಪೇಸ್ಟ್, ಬ್ರಶ್ ಸಿಗುತ್ತಿದ್ದವು. ದಂತ ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಯಾವುದೋ ಅಭಿಯಾನದ ಪ್ರಯುಕ್ತ ಅವುಗಳನ್ನು ವರ್ಷಕ್ಕೊಮ್ಮೆ ವಿತರಿಸಲಾಗುತ್ತಿತ್ತು. ಕೆಂಬಣ್ಣದ ಕಬ್ಬಿಣಾಂಶದ ಮಾತ್ರೆಗಳನ್ನು ನೀಡಲಾಗುತ್ತಿತ್ತು. ವರ್ಷದಲ್ಲೊಂದು ಬಾರಿ ವೈದ್ಯರ ತಪಾಸಣೆ ನಡೆಯುತ್ತಿತ್ತು. ಸ್ವಾತಂತ್ರೋತ್ಸವದಂದೇ ನಮ್ಮ ಶಾಲೆಯ ವಾರ್ಷಿಕೋತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದವು. ಅಂದು ಶಾಲೆಯಿಂದ ಊರಿನ ಬೀದಿಗಳಲ್ಲಿ ಮೆರವಣಿಗೆ ಹೊರಡುತ್ತಿತ್ತು. ಸಿಹಿತಿಂಡಿ, ಚಾಕಲೇಟುಗಳು ಧಾರಾಳವಾಗಿ ಸಿಗುತ್ತಿತ್ತು. ಆಟೋಟಗಳಲ್ಲಿ ಭಾಗವಹಿಸಿ ವಿಜಯಿಯಾದವರಿಗೆ ಬಹುಮಾನ ದೊರಕುತ್ತಿದ್ದವು.

ಇನ್ನುಳಿದಂತೆ ಗಣರಾಜ್ಯೋತ್ಸವ, ಗಾಂಧಿ ಜಯಂತಿ, ಶಿಕ್ಷಕರ ದಿನಾಚರಣೆಗಳಿಗೆ ಅಷ್ಟು ದೊಡ್ಡ ಮಹತ್ವವೇನೂ ಇರುತ್ತಿರಲಿಲ್ಲ.

ನಮ್ಮ ಶಾಲೆಯಲ್ಲಿ ಗಂಟೆ ಬಾರಿಸಲು ಹಳೆಯ ಹಾರೆಯೊಂದನ್ನು ನೇತುಹಾಕಲಾಗಿತ್ತು. ಅದರ ಮೇಲ್ಭಾಗದ ಮರದ ಹಿಡಿ ತೂರಿಸುವ ತೂತಿನೊಳಗೆ ಕಬ್ಬಿಣದ ರಾಡ್ ಹಾಕಿ ಅಲ್ಲಾಡಿಸಿ ಸ್ಟಡಿ ಬೆಲ್ ಬಾರಿಸಬೇಕಾಗಿತ್ತು. ಈ ಬೆಲ್ ಬಾರಿಸುವ ಕಲೆ ಎಲ್ಲರಿಗೂ ಕರಗತವಾಗಿರಲಿಲ್ಲ. ಈ ರೀತಿ ಬೆಲ್ ಬಾರಿಸಲು ಕಲಿಯುವ ಸಲುವಾಗಿ ನಾವು ಶಾಲೆಗೆ ಬಿಟ್ಟ ಬಳಿಕ ಅಭ್ಯಾಸ ನಡೆಸುತ್ತಿದ್ದೆವು. ಆದರೆ ನಮ್ಮ ಈ ಕೀಟಲೆಗಳ ಕುರಿತು ಶಾಲೆಯ ಹಿಂಬದಿಯ ಮನೆಯವರು ಟೀಚರರಿಗೆ ವರದಿ ಒಪ್ಪಿಸುತ್ತಿದ್ದರು. ಮಾರನೇ ದಿವಸ ನಮ್ಮ ಅಭ್ಯಾಸಕ್ಕೆ ತಕ್ಕ ಪ್ರತಿಫಲ ಬೆತ್ತದೇಟಿನ ರೂಪದಲ್ಲಿ ದೊರಕುತ್ತಿತ್ತು. ಆಗ ಕ್ಲಾಸ್ ಲೀಡರ್ ಪಟ್ಟ ಪಡೆದುಕೊಳ್ಳುವುದು ನಮ್ಮ ಪಾಲಿಗೆ ಪ್ರತಿಷ್ಠೆಯ ವಿಷಯವಾಗಿತ್ತು. ತರಗತಿಯಲ್ಲಿ ಅಧ್ಯಾಪಕರು ಇಲ್ಲದ ವೇಳೆಯಲ್ಲಿ ಮಕ್ಕಳು ಮಾತನಾಡದೆ ಓದು ಬರಹಗಳಲ್ಲಿ ಮಗ್ನರಾಗಿರುವಂತೆ ನೋಡಿಕೊಳ್ಳುವುದು ಕ್ಲಾಸ್ ಲೀಡರ್‌ನ ಬಹುದೊಡ್ಡ ಜವಾಬ್ದಾರಿಯಾಗಿತ್ತು. ಮಾತನಾಡಿದವರ ಹೆಸರನ್ನು ಬೋರ್ಡಿನ ಮೇಲೆ ಬರೆದು, ಟೀಚರ್ ಕ್ಲಾಸಿಗೆ ಬಂದಾಗ ಆ ಪಟ್ಟಿಯಲ್ಲಿರುವವರಿಗೆ ಪೆಟ್ಟು ತಿನ್ನಿಸುವುದರಲ್ಲಿ ಏನೋ ಒಂದು ರೀತಿಯ ಖುಷಿ ಸಿಗುತ್ತಿತ್ತು. ಕೋಪಿ ಪುಸ್ತಕ, ಮನೆಲೆಕ್ಕಗಳನ್ನು ಮಾಡದೆ ಕೂಡಾ ಪೆಟ್ಟು ತಿನ್ನುತ್ತಿದ್ದೆವು. ಪೆಟ್ಟು ತಿನ್ನುವ ಸಂದರ್ಭದಲ್ಲಿ ಒಬ್ಬೊಬ್ಬರ ಹಾವಭಾವ ಒಂದೊಂದು ರೀತಿಯಲ್ಲಿರುತ್ತಿತ್ತು. ಅವುಗಳನ್ನು ನೆನಪಿಸಿಕೊಂಡರೆ ಈಗಲೂ ನಗು ಬರುತ್ತದೆ. ಆಗ ಹುಡುಗಿಯರಿಗೆ ಹುಡುಗರ ಬಗ್ಗೆ ಟೀಚರ್‌ರ ಹತ್ತಿರ ಚಾಡಿ ಹೇಳುವ ಅಭ್ಯಾಸ ಭಾರೀ ಜೋರಾಗಿತ್ತು. ಹೆಚ್ಚಿನ ಸಂದರ್ಭಗಳಲ್ಲಿ ಹುಡುಗಿಯರೇ ಕ್ಲಾಸ್ ಲೀಡರ್ ಆಗಿರುತ್ತಿದ್ದರು. ಕೆಲವು ಲೀಡರ್‌ಗಳು ನಮ್ಮನ್ನು ಬೇಕಂತಲೇ ಇಕ್ಕಟ್ಟಿನಲ್ಲಿ ಸಿಲುಕಿಸಿ, ನಾವು ಪೆಟ್ಟು ತಿನ್ನುವುದು ನೋಡಿ ಮುಸಿಮುಸಿ ನಗುತ್ತಿದ್ದರು.

ಹೌದು, ಪ್ರಾಥಮಿಕ ಶಾಲೆಯ ಬಂಗಾರದಂತಹ ದಿನಗಳ ಬಗ್ಗೆ ಬರೆದು ಮುಗಿಸಲು ಸಾಧ್ಯವಿಲ್ಲ. ಆ ರಸನಿಮಿಷಗಳ ಕುರಿತು ಬರೆದಷ್ಟೂ ಮುಗಿಯಲಿಕ್ಕೂ ಇಲ್ಲ. ಆ ಸುಂದರ ಬಾಲ್ಯದ ಸುಮಧುರ ಅನುಭವಗಳನ್ನು ಮೆಲುಕು ಹಾಕಲಷ್ಟೇ ನಮ್ಮಿಂದ ಸಾಧ್ಯ. ನೆನಪಿನ ಗಣಿಯೊಳಗೆ ಇಳಿದರೆ ಮೊಗೆದಷ್ಟೂ ಒತ್ತರಿಸಿ ಬರುವ ಗತಿಸಿಹೋದ ಆ ಅಮೂಲ್ಯ ಸವಿಗಳಿಗೆಗಳು ಇನ್ಯಾವತ್ತೂ ಮರಳಿ ಬರಲಾರವು ಎಂದು ಅರಿವಾದಾಗ ಅತೀವ ಸಂಕಟವೊಂದು ಮನದಾಳದಲ್ಲಿ ಮೂಡಲಾರಂಭಿಸುತ್ತದೆ.

Writer - ಸಫ್ವಾನ್ ಸವಣೂರು

contributor

Editor - ಸಫ್ವಾನ್ ಸವಣೂರು

contributor

Similar News