ನೆನಪಿನ ಕಡೆಗೋಲಲ್ಲಿ ಮನಸ್ಸನ್ನು ಕಡೆದಾಗ...

Update: 2019-06-08 18:31 GMT

ಇತ್ತೀಚೆಗೆ ಒಂದು ದೊಡ್ಡ ಬಟ್ಟೆ ಮಳಿಗೆಯಲ್ಲಿ ಬಟ್ಟೆ ಖರೀದಿಸಿದಾಗ ನಮಗೆ ಸ್ಟೀಲ್‌ನ ಚಂದದ ಪಾತ್ರೆ ಗಿಫ್ಟ್ ಸಿಕ್ಕಿತು. ನಮ್ಮ ಸೇಹಿತ ದಂಪತಿ ಬೇರೆ ಬೇರೆ ಬಿಲ್ ಹಿಡಿದು, ಬೇರೆಯೇ ಸಮಯದಲ್ಲಿ ಹೋಗಿದ್ದರೂ ಪತಿ-ಪತ್ನಿ ಇಬ್ಬರಿಗೂ ವಿಪ್ಪಿಂಗ್ ಮೆಷಿನ್ ಉಡುಗೊರೆ ಸಿಕ್ಕಿತು. ಇಬ್ಬರೂ ಕುಳಿತು ಮೊಸರು ಕಡೆಯಿರಿ ಎಂದು ಎಲ್ಲರೂ ಅವರನ್ನು ಲೇವಡಿ ಮಾಡಿದರು. ನಾನು ಮನೆಯಲ್ಲಿ ಮಿಕ್ಸಿಯಲ್ಲಿ ಮೊಸರು ಕಡೆಯುತ್ತಿದ್ದೆ. ಒಮ್ಮಿಮ್ಮೆ ದೊಡ್ಡ ಬಾಟಲಿಯಲ್ಲಿ ಹಾಕಿದ ಮೊಸರನ್ನು ಕುಲುಕುತ್ತಾ ಬೆಣ್ಣೆ ತೆಗೆಯುತ್ತಿದ್ದೆ. ಇವರಿಗೆ ಸಿಕ್ಕಿದ ವಿಪ್ಪಿಂಗ್ ಮೆಷಿನ್ ನೋಡಿದಾಗ ನಮ್ಮನೆಯಲ್ಲೂ ಇದು ಇದೆಯಲ್ಲ. ನಾನು ಮೊಸರು ಕಡೆಯಲು ಅದನ್ನು ಬಳಸಿಯೇ ಇರಲಿಲ್ಲ ಎಂಬುದು ನೆನಪಾಯ್ತು. ಮುಂದಿನ ಸಲ ಮೊಸರು ಕಡೆಯಲು ವಿಪ್ಪಿಂಗ್ ಮೆಷಿನ್ ಬಳಸಿದೆ.(ಇಂಗ್ಲಿಷ್‌ನಲ್ಲಿ ಕಡೆಗೋಲಿಗೆ churn, dasher ಇತ್ಯಾದಿ ಹೆಸರುಗಳಿವೆ. ವಿಪ್ಪಿಂಗ್ ಮೆಷಿನ್ ಕೇಕ್ ಇತ್ಯಾದಿಗಳ ಹಿಟ್ಟು ಮಿಶ್ರ ಮಾಡಲು ಹೆಚ್ಚಾಗಿ ಬಳಸುತ್ತಾರೆ. ಕನ್ನಡದಲ್ಲಿ ಕಡೆಗೋಲಿಗೆ 'ಮಂತು' ಎಂಬ ಹೆಸರೂ ಇದೆ.)ನನಗೆ ಕಡೆಗೋಲಿನ ನೆನಪಾಯ್ತು. ಮಡಕೆಯಲ್ಲಿರುವ ಮೊಸರನ್ನು ಅಮ್ಮ ಕಡೆಗೋಲಿನಿಂದ ಕಡೆಯುತ್ತಿದ್ದ ದೃಶ್ಯ ಕಣ್ಣ ಮುಂದೆ ಸುಳಿಯಿತು. (ಅಸುರರು ಮತ್ತು ದೇವತೆಗಳು ಮಂದರ ಪರ್ವತವನ್ನು ಕಡೆಗೋಲು ಮಾಡಿ, ವಾಸುಕಿಯನ್ನು ಹಗ್ಗ ಮಾಡಿ ಕ್ಷೀರ ಸಾಗರ ಮಥನ ಮಾಡಿದ ಪೌರಾಣಿಕ ಕತೆಯೂ ನೆನಪಾಯ್ತು) ಅದೇನೇ ಇರಲಿ, ಕೆಲವು ಕಡೆ ಹಗ್ಗ ಇರುವ ಕಡೆಗೋಲು ಬಳಸಿದರೆ ಕೆಲವು ಕಡೆ ಹಗ್ಗ ಇಲ್ಲದೇ ಅಂಗೈಯಲ್ಲಿ ಹಗ್ಗ ಹೊಸೆದಂತೆ ಕಡೆಗೋಲಿನ ಕೋಲನ್ನೇ ಹೊಸೆದು ಮೊಸರು ಕಡೆಯುತ್ತಾರೆ. ನಮ್ಮ ಮನೆಯಲ್ಲಿದ್ದುದು ಹಗ್ಗ ಇಲ್ಲದ ಕಡೆಗೋಲು.

 ನನ್ನ ತವರು ಮನೆಯಲ್ಲಿ ದನಗಳನ್ನು ಸಾಕುತ್ತಿದ್ದ ಕಾರಣ ಮನೆಯಲ್ಲಿ ಹಾಲೂ ಮೊಸರೂ ಯಾವಾಗಲೂ ಇರುತ್ತಿತ್ತು. ಮಧ್ಯಾಹ್ನ ಊಟದ ಹೊತ್ತಿಗೆ ಅಪ್ಪನಿಗೂ ತೋಟದ ಕೆಲಸದಾಳುಗಳಿಗೂ ಅಮ್ಮ ಮಜ್ಜಿಗೆ ನೀಡುತ್ತಿದ್ದರು. ಅದಕ್ಕಾಗಿ ಅಡುಗೆ ಕೆಲಸ ಮುಗಿಸಿದ ಬಳಿಕ ಅಮ್ಮ ಮಂಥನಕ್ಕೆ (ಮೊಸರು ಕಡೆಯಲು) ಕುಳಿತುಕೊಳ್ಳುತ್ತಿದ್ದರು. ನಾನು ಅಮ್ಮನ ಮೊಸರು ಕಡೆಯುವ ಕಾಯಕ ನೋಡುತ್ತಾ ಕುಳಿತಿರುತ್ತಿದ್ದೆ. ಮೊದಮೊದಲು ಬಿಳಿ ನೊರೆಯಾಗಿ ಬೆಣ್ಣೆ ಕಾಣುವಾಗ ''ಅಮ್ಮಾ ಅದು ಆಯ್ತು, ತೆಗಿ'' ಎಂದು ಪೀಡಿಸತೊಡಗುತ್ತಿದ್ದೆ. ''ಇನ್ನೂ ಆಗಿಲ್ಲ. ಅದು ತಿಳಿ ಹಳದಿ ಬಣ್ಣದ ಉಂಡೆಯಾಗುವವರೆಗೂ ಹೀಗೇ ಕಡೆಗೋಲಿಂದ ಕಡೆಯಬೇಕು' ಎನ್ನುತ್ತಿದ್ದರು. ಯಾವುದೋ ಅರ್ಜೆಂಟ್ ಕೆಲಸದ ನಿಮಿತ್ತ ಕಡೆಗೋಲನ್ನು ನನ್ನ ಕೈಗಿತ್ತು ಕಡೆಯಲು ಹೇಳಿ ಅಮ್ಮ ಅತ್ತ ಹೋದರೆ ನಾನು ಮೊದಲು ಸ್ವಲ್ಪ ಹೊತ್ತು ಖುಷಿಯಿಂದ ಕಡೆಯುತ್ತಿದ್ದೆ. ಆದರೆ ನಂತರ ಅಂಗೈಯೆಲ್ಲಾ ನೋವಾದಂತೆ ಸಿಟ್ಟಿನಿಂದ ಹೇಗ್ಹೇಗೋ ಕಡೆಯುತ್ತಿದ್ದೆ. ಮಡಕೆಯ ಹೊರಗೂ ನನ್ನ ಮೇಲೂ ಮಜ್ಜಿಗೆಯ ಸಿಂಚನವಾಗುತ್ತಿತ್ತು. ಕೊನೆಗೆ ನನ್ನ ಸಹವಾಸ ಬೇಡ ಎಂದು ಅಮ್ಮನೇ ಆ ಕೆಲಸ ಮುಂದುವರಿಸುತ್ತಿದ್ದರು. ನೀರು ಸೇರಿಸದೇ ದಪ್ಪ ಮಜ್ಜಿಗೆ ಕುಡಿಯಲು ನನಗೆ ಆಸೆ. ಒಂದು ಲೋಟ ಹಿಡಿದು ಮೊಸರು ಕಡೆಯುವುದು ಮುಗಿಯುವುದನ್ನೇ ಕಾಯುತ್ತಿದ್ದೆ. ಉಪ್ಪು ಕೂಡಾ ಹಾಕದೇ ಹಾಗೇ ಅದನ್ನು ಕುಡಿದಾಗ ನನಗೆ ಅವರ್ಣನೀಯ ಆನಂದ. ಬೆಕ್ಕಿನ ಹಾಗೆ ಮೊಸರಿನ ಮಡಕೆಯ ಹತ್ತಿರ ಕುಳಿತ ನನ್ನನ್ನು ಅಮ್ಮ ಹಲಸಿನ ಎಲೆ ಆರಿಸಿ ತರಲು ಕಳುಹಿಸುತ್ತಿದ್ದರು. ಮಡಕೆಯಿಂದ ಬೆಣ್ಣೆ ತೆಗೆದು ಬೇರೆ ಪಾತ್ರೆಗೆ ಹಾಕಲು ಸ್ಪೂನ್‌ನ ಬದಲು ಅಮ್ಮ ಹಲಸಿನ ಎಲೆ ಬಳಸುತ್ತಿದ್ದರು. ಒಂದೇ ಉಸಿರಿಗೆ ಹಲಸಿನ ಮರದ ಬುಡಕ್ಕೆ ಓಡುವ ನಾನು ಅತ್ಯಂತ ಚಂದದ, ಸ್ವಚ್ಛ ಹಾಗೂ ದೊಡ್ಡದಾದ ಹಣ್ಣೆಲೆಯೊಂದನ್ನು ಹುಡುಕಿ ತರುತ್ತಿದ್ದೆ. ಪುನಃ ಮಡಕೆಯ ಬಳಿ ಆಸೆಗಣ್ಣಿಂದ ಕುಳಿತುಕೊಳ್ಳುತ್ತಿದ್ದೆ. ಪುಟ್ಟ ಪಾತ್ರೆಯಲ್ಲಿ ಅಮ್ಮ ತೆಗೆದಿಡುವ ಬೆಣ್ಣೆಯ ಮೇಲೆ ಈಗ ನಾನು ಕಣ್ಣು ಹಾಕುತ್ತಿದ್ದೆ. ಕೊನೆಗೆ ಅಮ್ಮ ನನ್ನ ಅಂಗೈಯಲ್ಲಿ ಒಂದಿಷ್ಟು ಬೆಣ್ಣೆ ಕೊಡುತ್ತಿದ್ದರು. ಅದನ್ನು ನೆಕ್ಕುತ್ತಾ ಲೋಟದಲ್ಲಿ ದೊರೆತ ಮಜ್ಜಿಗೆ ಹೀರುತ್ತಾ ಇರಬೇಕಾದರೆ ನನಗೆ ಸಂಪೂರ್ಣ ತೃಪ್ತಿಯಾಗುತಿತ್ತು. ಅಮ್ಮನ ಕಡೆಯುವ ಕೆಲಸ ಮುಗಿದಾಗ ಆ ಹಲಸಿನ ಎಲೆ ಹಾಗೂ ಕಡೆಗೋಲನ್ನೂ ನಾನು ಪಡೆಯುತ್ತಿದ್ದೆ. ಅದರಲ್ಲಿ ಅಂಟಿದ ಬೆಣ್ಣೆಯನ್ನೂ ತೆಗೆದು ನೆಕ್ಕಿದ ಮೇಲೆ ಖುಷಿಯಿಂದ ಆಟವಾಡಲು ಹೋಗುತ್ತಿದ್ದೆ. ನನ್ನ ಸಹೋದರರು ನನ್ನ ಹಾಗೆ ಆಸೆ ಬುರುಕ ರಾಗಿರಲಿಲ್ಲ ಅನಿಸ್ತದೆ. ಏಕೆಂದರೆ ಪ್ರತಿಸಲವೂ ನಾನೇ ಹಲಸಿನ ಎಲೆ ತರುತ್ತಿದ್ದೆ. ನಾನೊಬ್ಬಳೇ ಮೊಸರು ಕಡೆಯುವಾಗ ಅಮ್ಮನ ಬಳಿ ಕುಳಿತಿರುತ್ತಿದ್ದೆ. ಒಮ್ಮಿಮ್ಮೆ ಮೊಸರು ಕಡೆಯುತ್ತಲೂ ಇದ್ದೆ. ನನ್ನ ಮನೆಯಲ್ಲಿ ಈಗ ಕಡೆಗೋಲು ಇಲ್ಲ. ನನ್ನ ತವರು ಮನೆಯಲ್ಲಿ ಮರದ ಕಡೆಗೋಲು ಇದ್ದರೂ ಅವರೂ ಹೆಚ್ಚಾಗಿ ಮಿಕ್ಸಿಯಲ್ಲಿ ಮೊಸರು ಕಡೆಯುತ್ತಾರೆ. ವಿದ್ಯುತ್ ಕೈಕೊಟ್ಟಾಗ ಒಮ್ಮಾಮ್ಮೆ ಅವರು ಕಡೆಗೋಲು ಬಳಸುವುದಿದೆ. ಬಹುಶಃ ಮುಂದಿನ ತಲೆಮಾರಿಗೆ ಅಪರಿಚಿತವಾಗುವ ವಸ್ತುಗಳಲ್ಲಿ ಕಡೆಗೋಲೂ ಒಂದಾಗಬಹುದು. ಪ್ರಾಚೀನ ವಸ್ತುಗಳ ಮ್ಯೂಸಿಯಂನಲ್ಲಿ ಅವನ್ನು ಕಾಣುವ ಕಾಲ ದೂರವಿಲ್ಲ. ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪ ತಯಾರಿಸುವುದು ಹೇಗೆಂದೇ ತಿಳಿಯದ ತಲೆಮಾರು ನಿರ್ಮಾಣವಾಗುತ್ತಿರುವಾಗ ಇಂತಹ ವಸ್ತುಗಳಿಗೆ ಮಹತ್ವ ನೀಡುವವರಾದರೂ ಯಾರು?

Writer - ಜೆಸ್ಸಿ ಪಿ.ವಿ. ಪುತ್ತೂರು

contributor

Editor - ಜೆಸ್ಸಿ ಪಿ.ವಿ. ಪುತ್ತೂರು

contributor

Similar News