ಹಾರುವ ಹಕ್ಕಿ ಮತ್ತು ಇರುವೆ ಸಾಲು

Update: 2019-06-09 10:27 GMT

ಭೈರಪ್ಪನ ಹಸು ಈಯುವ ಲಕ್ಷಣ ತೋರಿಸಲು ಶುರು ಮಾಡಿದಾಗ ಹೊತ್ತು ಮಧ್ಯಾಹ್ನ ಮೀರಿತ್ತು. ಕೂಡಲೇ ಗೋ ಆಸ್ಪತ್ರೆಗೆ ದೌಡಾಯಿಸಿದ ಭೈರಪ್ಪನಿಗೆ ಡಾಕ್ಟರು ಸಿಗಲಿಲ್ಲ. ಅವರು ತುರ್ತು ಚಿಕಿತ್ಸೆ ನೀಡಲು ಬೇರೆ ಹಳ್ಳಿಗೆ ಹೋಗಿದ್ದರು. ಹಸು ಅಡ್ಡ ಮಲಗಿ ಕಾಲುಗಳನ್ನು ಒದರುತ್ತ ಮುಸುಗರೆಯುತ್ತಿತ್ತು. ಹಸುವಿನ ಕಟ್ಟುಸಿರು ದೂರಕ್ಕೆ ಕೇಳುತ್ತಿತ್ತು. ಭೈರಪ್ಪನ ಹೆಂಡತಿ ಶಾಂತಕ್ಕ ಹಲವಾರು ದೇವರುಗಳಿಗೆ ತರಾವರಿ ಹರಕೆ ಹೊರುತ್ತ ಹಸುಗೇನಾದರೂ ದೆವ್ವ ಮೆಟ್ಟಿರಬಹುದೇ ಎಂದು ಅನುಮಾನಿಸಿ ಚಿಂತಾಕ್ರಾಂತಳಾಗಿದ್ದಳು. ಯಾಕೆಂದರೆ ಹಸು ಕಣ್ಣುಗಳನ್ನು ಮೆಡ್ಡರಿಸಿಕೊಂಡು ಶೂನ್ಯದಲ್ಲಿ ದೃಷ್ಟಿ ನೆಟ್ಟು ಉಸಿರು ಹೊಡೆಯುತ್ತಿತ್ತು. ಮಂದಿ ಮನುಷ್ಯರೆನ್ನದೆ, ಗೂಟ ಗೊಂತು ಎನ್ನದೆ, ಗುಂಡಿ ಗೊಟ್ರ ಎನ್ನದೆ ಹುಚ್ಚು ಹಿಡಿದಂತೆ ಎತ್ತೆತ್ತಲೋ ಜಗ್ಗುತ್ತಿತ್ತು ಮತ್ತು ನುಗ್ಗುತ್ತಿತ್ತು. ಕೊನೆಗೊಮ್ಮೆ ಶಾಂತಕ್ಕ ‘ಈ ಹಸುವಿನ ಕಷ್ಟ ನೋಡಕಾಯ್ತೆ ಇಲ್ಲ. ಆ ಎಣ್ಣೆ ಅಣ್ಣಪ್ಪನ್ನ ಕರಕೊಂಡು ಬಾ’ ಎಂದು ಗಂಡನಿಗೆ ಸೂಚಿಸಿದಳು.

ಅಣ್ಣಪ್ಪ ಹಸು ಎಮ್ಮೆಗಳು ಈಯುವಾಗ ಕರು ಅಡ್ಡ ಸಿಗಿಹಾಕಿಕೊಂಡರೆ ಕೈಹಾಕಿ ಹೊರ ತೆಗೆಯುವುದರಲ್ಲಿ ನಿಷ್ಣಾತನಾಗಿದ್ದ. ಅವನು ಬಂದವನೇ ಹಸುವನ್ನು ಪರೀಕ್ಷಿಸಿ ‘ಊ ಕಣಕ್ಕೋ, ಹಸು ಈಯ್ಲೋಗೈತೆ’ ಎಂದು ಯೋನಿದ್ವಾರದಲ್ಲಿ ಕೈಹಾಕಿದವನಿಗೆ ತಲೆಬುಡ ಅರ್ಥ ವಾಗಲಿಲ್ಲ. ಅವನ ಕೈ ಯೋನಿದ್ವಾರದಲ್ಲಿ ಒಂದಡಿಗಿಂತ ಹೆಚ್ಚು ಒಳಹೋಗಲಿಲ್ಲ. ಕರು ಈಚೆ ಬರಲು ಮಾರ್ಗವೇ ಇರದಿದ್ದದ್ದು ಅವನಲ್ಲಿ ಗಾಬರಿ ಹುಟ್ಟಿಸಿತ್ತು. ಈ ಥರ ಕೇಸನ್ನು ಅವನು ಜನ್ಮದಲ್ಲಿಯೇ ನೋಡಿರಲಿಲ್ಲ. ‘ಎಲಾ ಭೈರ, ಹಸಾನ ಈಗಿಂದೀಗ್ಲೆ ಸುಭಾನ್ ಡಾಕ್ಟರ್‌ತಾವ ತಗಂಡೋಗಿ ತೋರಿಸು. ಇದೇನೋ ಯಡವಟ್ಟು ಕೇಸು. ಅವರನ್ನು ಬಿಟ್ಟು ಬ್ಯಾರೆೆ ಯಾರಿಗೂ ತೋರಿಸ್‌ಬ್ಯಾಡ. ಉಷಾರಾದ್ರೆ ನಿಮ್ಮ ಅದೃಷ್ಟ ಅಷ್ಟೇಯ’ ಎಂದು ಅಸಹಾಯಕತೆ ವ್ಯಕ್ತಪಡಿಸಿದ.

ಬಡವನಾದ ಭೈರಪ್ಪನ ಮನೆ ಸಣ್ಣ ಓಣಿಯಲ್ಲಿತ್ತು. ದನಕ್ಕೆ ಚಿಕಿತ್ಸೆ ನೀಡಲು ಸಹ ಅಲ್ಲಿ ಜಾಗ ಇರಲಿಲ್ಲವಾದ್ದರಿಂದ ಹಸುವನ್ನು ಹಿಡಿದುಕೊಂಡು ಮೆಲ್ಲನೆ ಪಶುವೈದ್ಯರ ಮನೆಯತ್ತ ಹೊರಟ. ಅಂದು ಊರಿನಲ್ಲಿ ಗ್ರಾಮದೇವತೆ ಉಡಿಸಲಮ್ಮನ ಜಾತ್ರೆ. ಸುತ್ತಲ ಹಳ್ಳಿಯ ಅನೇಕರು ತಮ್ಮ ತಮ್ಮ ನೆಂಟರಿಷ್ಟರ ಮನೆಗೆ ಬಂದಿದ್ದರು. ಪ್ರತಿ ಮನೆಯಲ್ಲಿಯೂ ಸ್ವಂತದ್ದೋ ಸಾಲದ್ದೋ ಮರಿ ಹೊಡೆದಿದ್ದರು. ನೂರಾರು ಕುರಿ ಮೇಕೆಗಳು ಬಲಿಯಾಗಿದ್ದವು. ಎಲ್ಲೋ ಕೈಲಾಗದ ಕೆಲವರು ಮಾತ್ರ ಕೋಳಿಗಳ ಕುಯ್ದಿದ್ದರು ಅಥವಾ ಕೆಜಿ ಲೆಕ್ಕದಲ್ಲಿ ಮಾಂಸ ಕೊಂಡಿದ್ದರು. ಸಸ್ಯಾಹಾರಿಗಳಾಗಿದ್ದ ಬೆರಳೆಣಿಕೆಯಷ್ಟು ಮಂದಿ ಮನೆಯಲ್ಲಿ ಮಾತ್ರ ತರಕಾರಿ ಸಾರು ಬೇಯುತ್ತಿತ್ತು. ಇನ್ನುಳಿದಂತೆ ಶೇ.90 ಮನೆಗಳಲ್ಲಿ ಬಾಡು ಕುದಿಯುತ್ತಿತ್ತು. ಸಸ್ಯಾಹಾರಿ ಮನೆಯ ಅನೇಕ ಹುಡುಗರು ಮನೆಯವರಿಗೆ ಗೊತ್ತಾಗದಂತೆ ಕಳ್ಳತನದಲ್ಲಿಯೋ, ಗೊತ್ತಾಗಿದೆ ಬಿಡು ಎಂಬ ನಿರ್ಭಿಡೆಯಿಂದಲೋ ತಮ್ಮ ಸ್ನೇಹಿತರ ಮನೆಗಳಿಗೆ ಬಾಡೂಟಕ್ಕೆ ಸಿದ್ಧವಾಗುತ್ತಿದ್ದರು. ಎಲ್ಲರ ಮನೆಗಳಲ್ಲಿಯೂ ನೆಂಟರು ತುಂಬಿ ತುಳುಕುತ್ತಿದ್ದರು. ಮನೆಯೊಳಗೆ ಜಾಗ ಸಾಲದೆ ಹೊರಗಡೆ ರಸ್ತೆಯಲ್ಲಿದ್ದರು, ಕಟ್ಟೆಗಳ ಮೇಲೆ ಕುಳಿತಿದ್ದರು, ಅಂಗಡಿ ಮುಂಗಟ್ಟುಗಳಲ್ಲಿ ನಿಂತಿದ್ದರು. ಮಾತಿನಲ್ಲಿ, ಧೂಮಪಾನದಲ್ಲಿ, ನಗು, ಕ್ಯಾಕೆ, ಸೀಟಿ, ನೆನಪುಗಳಲ್ಲಿ, ಚಪ್ಪಾಳೆಗಳಲ್ಲಿ ಮುಳುಗಿದ್ದರು. ಅದರಲ್ಲನೇಕರು ಬಂದ ನೆಂಟರಿಷ್ಟರುಗಳಿಗೆ ಎಣ್ಣೆ ಹಾಕಿಸುವುದರಲ್ಲಿ, ಅದೇ ನೆಪದಲ್ಲಿ ತಾವೂ ಕುಡಿಯುವುದರಲ್ಲಿ ತಲ್ಲೀನರಾಗಿದ್ದರು. ಕುಡಿದಾದವರು ತಮ್ಮ ಸಂತೋಷವನ್ನು, ದುಃಖವನ್ನು, ಸಿಟ್ಟನ್ನು, ಶಕ್ತಿಯನ್ನು, ಧಾರಾಳ ತನವನ್ನು, ನಿರ್ಭಯವನ್ನು ಹತ್ತಾರು ಜನರಿಗೆ ಪ್ರದರ್ಶಿಸುವ ಹುಮ್ಮಸ್ಸಿನಲ್ಲಿದ್ದರು. ಮೈಕಿನ ಅಬ್ಬರ, ಬ್ಯಾಂಡ್‌ಸೆಟ್ಟಿನವರ ಅಬ್ಬರ, ಗ್ರಾಮದೇವತೆಯ ಗುಡಿಯ ಬಳಿ ಸಿಡಿಯಾಡುವಲ್ಲಿ ಗಲಾಟೆ ಭರ್ಜರಿಯಾಗಿತ್ತು. ಅಲ್ಲೊಬ್ಬ ದೇಶದ ಬಗ್ಗೆ, ದೇಶಭಕ್ತಿಯ ಬಗ್ಗೆ, ಧರ್ಮ, ಸಂಸ್ಕೃತಿ, ಸಂಪ್ರದಾಯ, ಗೋಮಾತೆ ಬಗ್ಗೆ ಭಾಷಣ ಬಿಗಿಯುತ್ತಿದ್ದ. ಕೆಲವರಂತೂ ಎಣ್ಣೆ ಮತ್ತು ಅದಕ್ಕಿಂತ ಶಕ್ತಿಶಾಲಿಯಾಗಿದ್ದ ಭಾಷಣ ಕೇಳಿ ಉನ್ಮಾದಗೊಂಡಿದ್ದರು.

ಇಂತಹ ಗಲಾಟೆಯಲ್ಲಿ ಇನ್ನೂ ಗಾಬರಿ ಬಿದ್ದು ಹಸು ಮುನ್ನಡೆಯುವುದೇ ಕಷ್ಟವಾಗಿ ಭೈರಪ್ಪನಿಗೆ ಪೀಕಲಾಟಕ್ಕಿಟ್ಟುಕೊಂಡಿತು. ಇದ್ದುದರಲ್ಲಿ ಊರ ಹಬ್ಬದ ಗದ್ದಲದಲ್ಲಿದ್ದರೂ ಯಾವುದೇ ಜವಾಬ್ದಾರಿಯಿಲ್ಲದೆ ಹಗುರವಾಗಿದ್ದವರು ಇಸ್ಮಾಯೀಲ್ ಮತ್ತು ಇಬ್ರಾಹೀಂ ಮಾತ್ರ. ‘‘ಎಲಾ ಇಸ್ಮು, ಇಬ್ರಿ ಬರ್ರಲಾ ಈ ಹಸಾನ ಆ ದನಿನ ಡಾಕ್ಟರತಾವ ಹಿಡ್ಕೊಂಡು ಹೋಗಾನ’’ ಅಂದ. ನಿರುದ್ದೇಶದಿಂದ ಅಲಿಯುತ್ತಿದ್ದ ಅವರಿಬ್ಬರಿಗೆ ಒಂದು ಗುರುತರವಾದ ಕಾರ್ಯ ದೊರಕಿದಂತಾಗಿ ಮತ್ತು ನೆರೆತ ನೂರಾರು ಮಂದಿಗೆ ದನ ಹಿಡಿದು ತಹಬಂದಿಗೆ ತರುವಲ್ಲಿ ತಮ್ಮ ಕಲೆಗಾರಿಕೆಯನ್ನು ತೋರಿಸುವ ಅವಕಾಶ ಒದಗಿದ್ದಕ್ಕಾಗಿ ಸಂತೋಷದಿಂದಲೇ ಭೈರಪ್ಪನ ಸಹಾಯಕ್ಕೆ ಒಪ್ಪಿ ಬಂದರು. ಅವರಿಬ್ಬರು ದನದ ಲಾಳ ಕಟ್ಟುವ ವೃತ್ತಿಯವರೇ ಆಗಿದ್ದುದು ಭೈರಪ್ಪ ಮತ್ತು ಶಾಂತಕ್ಕನಿಗೆ ಶುಭ ಶಕುನದಂತೆ ಕಾಣಿಸಿತು. ‘‘ಈಯ್ಲಿಗೆ ಬಂದೈತೆ ಕಣಿರ್ಲೆ. ಯಾಕೊ ಕರ ಈಚಿಕ್ಕೆ ಬರ್ತಾ ಇಲ್ಲ. ಎಣ್ಣೆ ಅಣ್ಣಪ್ಪ ಬ್ಯಾರೆ ಕಷ್ಟ ಅಂತ ಹೇಳವ್ನೆ. ಏನ್ ತೊಂದ್ರೇನೋ ಏನೋ? ಡಾಕ್ಟ್ರು ಕರ ಹೊರಕ್ಕೆಳೆಯೋತಂಕ ಎಲ್ಲೂ ಹೋಗ್‌ಬ್ಯಾಡ್ರಪ್ಪ’’ ಅಂದ ಭೈರಪ್ಪ. ಭೈರಪ್ಪನ ಮನೆ ಸಾಲಿನಲ್ಲಿಯೇ ಅವರಿಬ್ಬರ ಮನೆಗಳಿದ್ದವು. ಇತ್ತಿತ್ತಲಾಗೆ ಊರಲ್ಲಿ ದನಗಳು ಕಡಿಮೆಯಾಗಿ ಅವರಿಗೆ ದುಡಿಮೆ ಕಡಿಮೆಯಾಗಿತ್ತು.

ಹಸುವನ್ನು ಮಧ್ಯದಲ್ಲಿ ಬಿಟ್ಟುಕೊಂಡು ಭೈರಪ್ಪ, ಶಾಂತಕ್ಕ ಮುಂದೆ, ಇಸ್ಮು, ಇಬ್ರಿ ಹಿಂದೆ ನಡೆದುಕೊಂಡು ಡಾಕ್ಟರ ಮನೆ ಹತ್ತಿರ ಬಂದಾಗ ಆಗಲೇ ನಾಲ್ಕು ಗಂಟೆ. ಇನ್ನೂ ಡಾಕ್ಟರು ಹಳ್ಳಿಯಿಂದ ಬಂದಿರ್ಲಿಲ್ಲ. ಅಲ್ಲೇ ಮನೆ ಮುಂದೆ ಒಂದು ತೆಂಗಿನ ಗಿಡಕ್ಕೆ ಹಸು ಕಟ್ಟಿಹಾಕಿ ಎಲ್ಲರಿಗೂ ಒಂದೊಂದು ಬೀಡಿ ಎಸೆದು ತಾನೂ ಒಂದು ಹಚ್ಚಿದ ಭೈರಪ್ಪ. ಬಿಸಿಲು ಹಣ್ಣಾಗುತ್ತಿತ್ತು. ಬಿಸಿಲಲ್ಲಿ ದಿನವಿಡೀ ನಿಂತು ಮರಗಳೆಲ್ಲ ತನ್ನಂತೆಯೇ ಸೋತಿವೆ ಎನಿಸಿತು ಶಾಂತಕ್ಕನಿಗೆ. ಕರು ಅಡ್ಡ ಸಿಕ್ಕಂಡು ಹಸು ಒದ್ದಾಡ್ತಾ ಇರುದು ಶಾಂತಕ್ಕನಿಗೆ ಸಹಿಸಲಾಗಲಿಲ್ಲ. ಕಣ್ಣೀರು ಬಂದವು. ಹಸು ಒಮ್ಮೆ ಬಡ್ ಎಂದು ಹತ್ತಿರದ ಸೀಬೆಮರಕ್ಕೆ ಕಾಲು ಝಾಡಿಸಿತು. ಝಾಡಿಸಿದ ರಭಸಕ್ಕೆ ಕಾಲಿನ ಚರ್ಮ ಕಿತ್ತು ರಕ್ತ ಹನಿಯತೊಡಗಿತು. ‘‘ಥತ್ ಸುಮ್ನೆ ಬಿದ್ಕಳೆ ಮುಂಡೆ’’ ಎಂದ ಭೈರಪ್ಪ ಸಿಟ್ಟಲ್ಲಿ. ‘‘ಊ ಅದುರ ಬಂಧನ ಅದುಕ್ಕೆ. ನೀನೇನು ಬಲ್ಲೆ ಹೇಳು ಹೆರಿಗೆ ನೋವು’’ ಎಂದ ಶಾಂತಕ್ಕ ಹಸುವನ್ನು ತೂಬರಿಸುತ್ತ ರಕ್ತ ಹನಿದ ಜಾಗವನ್ನು ತನ್ನ ಸೆರಗಿನಿಂದ ಒರೆಸಿದಳು.

ಅಷ್ಟರಲ್ಲಿ ಸುಭಾನ್ ಡಾಕ್ಟರು ಬಂದ್ರು. ವಿಷಯ ತಿಳಿದದ್ದೇ ಮನೆಯೊಳಗೆ ಹೋಗಿ ನಿಕ್ಕರು ಟೀ ಶರ್ಟಿನಲ್ಲಿ ಬಂದು ಹಸುವನ್ನು ವಿವರವಾಗಿ ಪರೀಕ್ಷಿಸತೊಡಗಿದರು. ಯೋನಿದ್ವಾರದಲ್ಲಿ ಕೈ ಹಾಕಿ ಪರೀಕ್ಷಿಸುತ್ತಿದ್ದಾಗ ಎಣ್ಣೆ ಅಣ್ಣಪ್ಪ ಪರೀಕ್ಷೆ ಮಾಡಿದ್ದನ್ನು ಶಾಂತಕ್ಕ ಹೇಳಿದಳು. ಭೈರಪ್ಪ, ಇಸ್ಮು, ಇಬ್ರಿ ಹಸುವನ್ನು ಹಿಡಿದುಕೊಂಡು ಕೂತಿದ್ದರು. ಹಸು ಮಲಗಿ ಸೆಟೆದುಕೊಂಡು ಕಾಲುಗಳ ಚಿಮ್ಮುತ್ತಿತ್ತು.

ಡಾಕ್ಟರ್ ಸುಭಾನುಲ್ಲ ಏನೋ ಹೇಳಲು ತೊಡಗಿದ. ಆದರೆ ಅಷ್ಟರಲ್ಲಿ ಅವರ ಮನೆಯಿದ್ದ ತೋಟಕ್ಕೆ ಹತ್ತಿಪ್ಪತ್ತು ಜನ ನುಗ್ಗಿ ಬಂದರು. ಜನರು ಒಳಬರುವಷ್ಟರಲ್ಲಿ ಒಂದು ಜೀಪು, ನಾಲ್ಕೈದು ಬೈಕುಗಳು ಬಂದು ನಿಂತವು. ಬಂದ ಜನರೆಲ್ಲ ಹಸು, ಡಾಕ್ಟರು, ಭೈರಪ್ಪ, ಶಾಂತಕ್ಕ, ಇಸ್ಮು, ಇಬ್ರಿ ಇದ್ದ ಜಾಗದ ಸುತ್ತ ಅಡ್ಡಾದಿಡ್ಡಿ ನಿಂತರು. ಊಟ ಮುಗಿಸಿಕೊಂಡು ಬಂದಿದ್ದ ಸುಭಾನರ ಸಹಾಯಕ ಪುಟ್ಟಯ್ಯ ಡಾಕ್ಟರಿಗೆ ಸಹಾಯ ಮಾಡಲು ಸೇರಿಕೊಂಡ.

ಗುಂಪಿನಲ್ಲಿ ಇದ್ದ ಒಬ್ಬ ಉದ್ದ ನಾಮದವನು ‘‘ಏಯ್ ಏನ್ಮಾಡ್ತಿದೀರ ನೀವು ನೀವ್ನೀವೇ ಸೇರ್ಕೊಂಡು’’ ಎಂದು ಕೂಗಿ ನುಗ್ಗಿ ಹತ್ತಿರ ಬಂದು ನಿಂತನು. ಡಾಕ್ಟ್ರು, ಇಸ್ಮು ಇಬ್ರಿಗೆ ಹೊಡೆಯಲೆಂಬಂತೆ ಕೈ ಕೈ ಮಿಲಾಯಿಸಿದನು. ಕಡಿಮೆ ಮಾತಿನ ಸುಭಾನುಲ್ಲ ಮಾತನಾಡಲಿಲ್ಲ. ಇಸ್ಮು, ಇಬ್ರಿಯರಿಬ್ಬರೂ ನೀವ್ನೀವೇ ಸೇರ್ಕೊಂಡು ಎಂಬ ಮಾತಿನ ಅರ್ಥ ಹೊಳೆದವರಂತೆ ಬೆವರತೊಡಗಿದರು. ಭೈರಪ್ಪನಿಗೆ ಸೋಲು ಬಂದಂತಾಗಿ ಮಾತೆ ಹೊರಡಲಿಲ್ಲ. ಶಾಂತಕ್ಕ ಮಾತ್ರ ‘‘ಏನಪ್ಪ ನೀವ್ನೀವೇ ಸೇರ್ಕೊಂಡು ಅಂದ್ರೇನು? ನಮ್ಮ ಹಸು ಈಯಕಾಗ್ದೆ ಒದ್ದಾಡ್ತಾ ಐತೆ. ಅದನ್ನ ಟೆಸ್ಟ್ ಮಾಡ್ತದರೆ ಡಾಕ್ಟ್ರು. ಈ ಇಸ್ಮು, ಇಬ್ರಿ ದನಾನಿಡ್ಕಂಡು ಬರಾಕೆ, ಹಿಡ್ಕಣಕೆ ಸಹಾಯ ಮಾಡ್ತದರೆ. ಊರಾಗೆ ಜಾತ್ರೆ. ಒಂದು ಸೂಜಿ ಹಾಕಿದರೆ ನೆಲಕ್ಕೆ ಬೀಳದಂಗೆ ಜನ ನೆರ್ದೈತೆ. ದನ ಗಾಬ್ರಿ ಬಿದ್ದು ಕರ ಹಾಕ್ದೇ ಹೋದಾತು ಅಂತ ಡಾಕ್ಟ್ರ ಮನಿಗೆ ಬಂದ್ರೆ ಇಲ್ಲಿಗೇ ಬಂದಿದೀರಲ್ಲ! ಏನೇಳ್ರಿ ಗಡಗಡ’’ ಎಂದು ಸವಾಲು ಹಾಕಿದಂತೆ ಮಾತಾಡಿದಳು. ಅವಳು ಸ್ತ್ರೀ ಶಕ್ತಿ ಗುಂಪಿನ ಮುಖಾಂತರ ಬ್ಯಾಂಕಿನ ಸಾಲ ಪಡೆದು ಹಸು ಖರೀದಿಸಿದ್ದಳು. ಮಂಜೂರಾದ ಸಾಲದ ಮೊತ್ತ ಕಡಿಮೆಯಾಗಿದ್ದರಿಂದ ತನ್ನ ಕೈಯಿಂದ ಹತ್ತು ಸಾವಿರ ಹಾಕಿಕೊಂಡಿದ್ದಳು. ಅಕಸ್ಮಾತ್ ಹಸು ಸತ್ತರೆ ಅವಳ ಮನೆಯೇ ಮುಳುಗಿಹೋಗುತ್ತಿತ್ತು. ಆ ಸಂಕಟದಲ್ಲಿದ್ದಳು ಶಾಂತಕ್ಕ.

ಸುಭಾನ್ ಡಾಕ್ಟ್ರು ಏನೋ ಹೇಳಲು ಹೊರಟ್ರು. ಅವರಿಗೆ ಮಾತಾಡಲು ಬಿಡದೆ ಕೇಸರಿ ಟವಲ್ಲು ಹೆಗಲ ಮೇಲೆ ಹಾಕಿಕೊಂಡವನೊಬ್ಬ ‘‘ಏನವ್ವ ನಮ್ಮನ್ನೇ ಹೆದರಿಸೋಹಂಗೆ ಮಾತಾಡ್ತಿದ್ದೀಯಲ್ಲ. ನಮಗೆ ಸುದ್ದಿ ಬಂದಿದೆ. ಈ ಮನೆಗೆ ದಿನವೂ ಹಸುಗಳು ಬರುತ್ತವಂತೆ. ಒಂದೊಂದು ದಿನ ಹತ್ತಿಪ್ಪತ್ತು ಹಸುಗಳೂ ಬರುವುದುಂಟಂತೆ. ಅದರಲ್ಲಿ ಕೆಲವು ವಾಪಸ್ಸು ಹೋಗುವುದಿಲ್ಲಂತೆ. ಇದು ದನಗಳ ಕಸಾಯಿಖಾನೆಯಾಗಿರುವ ಸುದ್ದಿ ಬಂದಿದ್ದರಿಂದಲೇ ನಾವೆಲ್ಲರೂ ಬಂದಿದ್ದೇವೆ. ಇಲ್ಲಿ ವೈದ್ಯರು ಸುಭಾನುಲ್ಲ. ಇಲ್ಲಿರುವ ಇನ್ನಿಬ್ಬರು ಇಸ್ಮಾಯೀಲ್, ಇಬ್ರಾಹೀಂ. ಇವರೆಲ್ಲರೂ ನಿಮ್ಮಂತಹ ಮುಗ್ಧರಿಗೆ ಮಂಕುಬೂದಿ ಎರಚಿ ಗೋಮಾತೆಯ ಹತ್ಯೆ ಮಾಡುತ್ತಿದ್ದಾರೆ. ನನ್ನ ಕರೆಗೆ ಓಗೊಟ್ಟು ದೇಶ, ಗೋಮಾತೆಯ ರಕ್ಷಣೆಗಾಗಿ ಇಲ್ಲಿರುವ ಬಂಧುಗಳೇ ಎಲ್ಲವೂ ನಿಮ್ಮ ಕಣ್ಣೆದುರೇ ಇದೆ. ಮಾಂಸಕ್ಕಾಗಿ ಹಸುವನ್ನು ಕೊಲ್ಲುವ ಇವರಿಗೆ ಏನು ಮಾಡಲೂ ಬಿಡಬೇಡಿ’’.

ಊರಕಡೆಯಿಂದ ತೋಟಕ್ಕೆ ಜನ ಬಂದು ಸೇರಿಕೊಳ್ಳುತ್ತಲೇ ಇದ್ದರು. ಊರಿನ ಯಜಮಾನರಾದ ಜಯದೇವಮೂರ್ತಿ, ತೋಂಟಾರಾಧ್ಯ, ಹಿರಿಯಣ್ಣ, ಶಿವಾನಂದಪ್ಪ, ತೋಟದ ಯಜಮಾನರಾದ ರಾಜಣ್ಣ ಮುಂತಾದವರು ಆಗಮಿಸಿದರು.

ಹಸುವನ್ನು ಹಿಡಿದುಕೊಂಡು ಕೂತಿದ್ದ ಭೈರಪ್ಪ, ಇಸ್ಮು, ಇಬ್ರಿ, ಶಾಂತಕ್ಕ ಮಾತುಗಳ ಕೇಳುತ್ತ ಕೈಸಡಿಲ ಬಿಟ್ಟ ಕೂಡಲೇ ಹಸು ನಾಲ್ಕು ಕಾಲುಗಳನ್ನೂ ಝಾಡಿಸುತ್ತ ಒದ್ದಾಡ ತೊಡಗಿತು. ಡಾಕ್ಟರು ನಾಲ್ವರಿಗೂ ಹಸುವನ್ನು ಬಿಗಿ ಹಿಡಿಯುವಂತೆ ಹೇಳಿ ಜನರತ್ತ ತಿರುಗಿ ನೋಡಿ ‘‘ನಾನು ಪಶುವೈದ್ಯ. ಆಸ್ಪತ್ರೆಗೆ ದಿನವೂ ಹತ್ತಿಪ್ಪತ್ತು ದನಗಳು ಬರುತ್ತವೆ. ನಾನು ಬಾಡಿಗೆಗೆ ವಾಸವಿರುವ ಈ ಮನೆಗೂ ಹಸು, ಎಮ್ಮೆ, ಕುರಿ, ಮೇಕೆಗಳೆಲ್ಲ ಬರುತ್ತವೆ. ನಾನಾ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುತ್ತವೆ, ವಾಪಸು ಹೋಗುತ್ತವೆ. ಇದು ಕಸಾಯಿಖಾನೆಯೆಂಬುದು ಶುದ್ಧ ಸುಳ್ಳು. ಈ ಮನೆಯ ಯಜಮಾನರಾದ ರಾಜಣ್ಣ ರವರು ಸಸ್ಯಾಹಾರಿಗಳೇ. ನೋಡಿ ಅವರೇ ಬಂದರು. ಅವರನ್ನೇ ಕೇಳಿ’’ ಎಂದು ಮತ್ತೆ ಮುಂದುವರಿದು ‘‘ನೋಡಿ ನಮಗೀಗ ಸಮಯವಿಲ್ಲ. ಹಸು ಈಯುವ ಲಕ್ಷಣ ತೋರಿಸಿ ಬಹಳ ಹೊತ್ತಾಗಿದೆ. ಈ ಹಸುವಿನ ಗರ್ಭಚೀಲ ಒಳಗಡೆ ನುಲಿದುಕೊಂಡಿದೆ. ಕೂಡಲೇ ಗರ್ಭಚೀಲವನ್ನು ಸರಿಪಡಿಸಿ ನೇರಗೊಳಿಸದಿದ್ದರೆ ಕರು ಈಚೆ ಬರಲು ದಾರಿಯೇ ಇರುವುದಿಲ್ಲ. ಕರು ಮತ್ತು ಹಸು ಎರಡೂ ಸಾಯುತ್ತವೆ’’ ಎಂದು ನೊಂದು ನುಡಿದ.

ಅಷ್ಟು ಹೊತ್ತಿಗೆ ಸುಧಾರಿಸಿಕೊಂಡಿದ್ದ ಭೈರಪ್ಪ ‘‘ಅಣ್ಣಗುಳ್ರ, ಅಪ್ಪಗುಳ್ರ ಅಂತ ಕೆಲಸ ಮಾಡಬೇಡ್ರಿ. ಕೈ ಮುಗಿತಿನಿ, ಸುಮ್ಮನೆ ಹೋಗ್ಬಿಡ್ರಿ. ಶಾಂತಕ್ಕ ಇಲ್ಲಿ ನೆರೆತಿರೋರಲ್ಲಿ ಹೆಚ್ಚಿನವರು ಯಾರೋ ನನಗ್ಗೊತ್ತಿಲ್ಲ. ಬ್ಯಾರೆ ಊರಿಂದ ಬಂದಿರೋಹಂಗೆ ಕಾಣ್ತೀರ. ಊರ ಜಾತ್ರೆಗೆ ಬಂದಿದೀರೋ ಅಥವಾ ಇನ್ಯಾತಕ್ಕೋ ನನಗ್ಗೊತ್ತಿಲ್ಲ. ಆದರೆ ನಾನು ಈ ಊರವಳು. ಇವ್ರ ನಮ್ಮೂರ ಡಾಕ್ಟ್ರು. ಈಗಾಗ್ಲೆ ಬಾಳ ವರ್ಷದಿಂದ ನಾವಿವರನ್ನ ನೋಡ್ತಿದೀವಿ. ನೀವೇಳ್ದಂಗೆ ಆಸ್ಪತ್ರೆಗೆ, ಮನೆಗೆ ಬಂದ ದನಗಳನ್ನು ಕಡಿದು ತಿನ್ನೊ ಆಸಾಮಿ ಅಲ್ಲ ಇದು. ಈ ಡಾಕ್ಟರೆಂದ್ರೆ ಒಂದು ಘನತೆ, ಗೌರವ. ಅವ್ರಲ್ಲಿ ನಮಗೆ ಸಂಪೂರ್ಣ ನಂಬಿಗೆ ಐತೆ. ಅವ್ರೇನಾರ ಮಾಡ್ಕಳ್ಳಿ. ನೀವು ನಮ್ಮ ಹಸು ತಂಟೆಗೆ ಬರಬ್ಯಾಡ್ರಿ’’.

ಜಾತ್ರೆಯಲ್ಲಿ ಭಾಷಣ ಕೇಳಿ ಉದ್ರೇಕಗೊಂಡಿದ್ದ ಹಲವರು ಇಷ್ಟು ಹೊತ್ತಿಗೆ ಶಾಂತವಾಗಿದ್ದರು. ಎದುರಿಗೇ ಇದ್ದ ರೈತ ಮತ್ತು ದನಗಳನ್ನು ನೋಡಿ ವಾಸ್ತವ ಸಂಗತಿಗಳ ಅರಿವು ಮೂಡಿತು. ವಿವೇಕ ವಿವೇಚನೆಗಳು ಮರಳಿದ್ದವು. ಅವರು ವಿನಾಕಾರಣ ಗಲಿಬಿಲಿಗೊಂಡಿದ್ದಕ್ಕೆ ಬೇಸರಿಸಿಕೊಂಡು ಅಲ್ಲಿಯೇ ಮರಗಳ ಕೆಳಗೆ ಕುಳಿತುಕೊಂಡರು. ಅದು ಇಳಿಜಾರಾಗಿದ್ದ ಜಾಗವಾಗಿದ್ದರಿಂದ ನೂರಾರು ಜನ ಕುಳಿತುಕೊಂಡು ನಾಟಕ ನೋಡುವಂತೆ ಮುಂದಿನ ದೃಶ್ಯಾವಳಿಗಳನ್ನು ನೋಡತೊಡಗಿದರು.

ಇತ್ತ ಡಾಕ್ಟರ ಸೂಚನೆಯಂತೆ ಸ್ವಲ್ಪ ಇಳಿಜಾರಾದ ಮರಳು ಹಾಕಿದ್ದ ಜಾಗಕ್ಕೆ ಹಸುವನ್ನು ಸಾಗಿಸಿದರು. ಜಗಳ ಮಾಡಲು ಬಂದವರಲ್ಲಿ ಕೆಲವರು ಹಸು ಸಾಗಿಸಲು ಸಹಾಯ ಮಾಡಿದರು. ಅವರ ನಾಯಕ ಅಸಹಾಯಕವಾಗಿ ನೋಡುತ್ತ ನಿಂತ.

ಈಗ ಡಾಕ್ಟರು ಹಸುವಿನ ಗುದದ್ವಾರದಲ್ಲಿ ಕೈ ಹಾಕಿ ಹಸುವನ್ನು ಬಲಗಡೆಗೆ ಉರುಳಿಸಲು ಹೇಳಿದ. ಸಹಾಯಕ್ಕಿದ್ದ ಶಾಂತಕ್ಕ ಹಸುವಿನ ತಲೆಯನ್ನು ಮೇಲಕ್ಕೆತ್ತಿ ಹಿಡಿದಿದ್ದಳು. ಅದರ ಮುಖಕ್ಕೆ ಅಂಟಿದ್ದ ಮಣ್ಣನ್ನು ತನ್ನ ಸೆರಗಿನಿಂದ ಒರೆಸಿದಳು. ಹಸುವಿನ ಕಟ್ಟುಸಿರು ದೂರದೂರಕ್ಕೆ ಕೇಳುತ್ತಿತ್ತು. ಆಗ ಅಲ್ಲಿಗೆ ಪೊಲೀಸ್ ಅಧಿಕಾರಿ ತನ್ನ ಎಂಟು ಹತ್ತು ಪೊಲೀಸರೊಂದಿಗೆ ಜೀಪಲ್ಲಿ ಆಗಮಿಸಿದರು. ನೂರಾರು ಜನ ನೆರೆತಿದ್ದ ಅಲ್ಲಿ ಗಲಾಟೆಯಾಗದಂತೆ ನೋಡಿಕೊಳ್ಳುವುದು ಅವರ ಕರ್ತವ್ಯವಾಗಿತ್ತು. ಅವರು ಯಾರನ್ನೂ ಮಾತನಾಡಿಸದೆ ವೈದ್ಯರು ಮಾಡುವುದನ್ನು ನೋಡುತ್ತ, ಜನರನ್ನು ಗಮನಿಸುತ್ತ ನಿಂತರು. ಮಿಕ್ಕ ಪೊಲೀಸರು ಗುಂಪಿನಲ್ಲಿ ಚದುರಿ ಅಲ್ಲೊಬ್ಬರು ಇಲ್ಲೊಬ್ಬರಂತೆ ನಿಂತು ಅಪರಿಚಿತರ ಮೇಲೆ ಕಣ್ಣಿಟ್ಟು ಕಾಯತೊಡಗಿದರು.

ಡಾಕ್ಟರ್‌ನ ಸೂಚನೆಯಂತೆ ಸಹಾಯಕರೆಲ್ಲ ಹಸುವನ್ನು ಉರುಳಿಸತೊಡಗಿದರು. ಆಸ್ಪತ್ರೆ ಸಹಾಯಕನಾದ ಪುಟ್ಟಯ್ಯ, ಭೈರಪ್ಪ ಸಾಕಾಗಿ ಹಿಂದೆ ಸರಿದರು. ಇಬ್ಬರ ಬದಲಿಗೆ ಬೇರೆ ನಾಲ್ಕು ಜನ ರೈತರು ಸಹಾಯಕ್ಕೆ ಬಂದು ಸೇರಿಕೊಂಡರು. ಬಂದವರೇ ಹಸುವನ್ನು ಮುಟ್ಟಿ ಕಣ್ಣಿಗೊತ್ತಿಕೊಂಡು ಡಾಕ್ಟರ ಆದೇಶದಂತೆ ವರ್ತಿಸತೊಡಗಿದರು. ಉರುಳಿಸಿದಾಗ ಹಸುವಿನ ಚರ್ಮ ತರಚದಂತೆ ನಾಲ್ಕಾರು ರೈತರು ಅಲ್ಲಿ ಇಲ್ಲಿ ಓಡಿ ಒಣಹುಲ್ಲನ್ನು ತಂದು ಹಾಕಿ ಜಾಗ ವನ್ನು ಮೆತ್ತಗೆ ಹಾಸಿಗೆಯಂತೆ ಮಾಡಿದರು. ಶಾಂತಕ್ಕನನ್ನು ಪಕ್ಕಕ್ಕೆ ಕೂರಿಸಿ ತಾನೇ ಹಸುವಿನ ತಲೆಯೆತ್ತಿ ಹಿಡಿದ ಮತ್ತೊಬ್ಬ ತನ್ನ ಟವಲ್ಲಿನಿಂದ ಹಸುವಿನ ಜೊಲ್ಲು, ಗೊಣ್ಣೆಯನ್ನು ಒರೆಸಿದ.

ಅದುವರೆಗೆ ಸುಮ್ಮನಿದ್ದ ನಾಮಧಾರಿಯು ತನ್ನ ಗುಂಪಿಗೆ ಸೂಚನೆ ಕೊಟ್ಟನು. ಅವರಲ್ಲಿ ನಾಲ್ಕೈದು ಜನ ಡಾಕ್ಟರಿಗೆ ಸಹಾಯ ಮಾಡುತ್ತಿದ್ದ ಇಬ್ರಿ, ಇಸ್ಮು ಮತ್ತು ಪುಟ್ಟಯ್ಯನನ್ನು ಎಳೆದಾಡತೊಡಗಿದರು. ಆದರೆ ಅಲ್ಲಿಯೇ ಇದ್ದ ಊರ ಯಜಮಾನರಾದ ಜಯದೇವಮೂರ್ತಿಗಳು ಮುಂದೆ ಬಂದು ‘‘ಏಯ್ ಯಾರ್ರೋ ನೀವು. ಯಾರ ತಂಟೆಗೂ ಹೋಗದ ಇವರನ್ನೇಕೆ ಎಳೆದಾಡುತ್ತಿದ್ದೀರಿ. ಇಲ್ಲೇ ಇರೊ ಪೊಲೀಸ್‌ನವರಿಗೆ ಹೇಳ್ಬೇಕಾಗುತ್ತೆ. ಹಿಂದಕ್ಕೆ ಸರೀರೋ’’ ಎಂದು ಅವಾಜ್ ಹಾಕಿದ ಕೂಡಲೇ ಹಿಂದಕ್ಕೆ ಸರಿದರು. ಆದರೆ ಜನರನ್ನು ಗುಂಪುಕಟ್ಟಿಕೊಂಡು ಬಂದಿದ್ದ ನಾಯಕ ‘‘ಪಾಚಿಗೆ ಪಾಚಿ ಶತ್ರು, ಮೀನಿಗೆ ಮೀನು ಶತ್ರು ಅಂದಂಗೆ ನಮಗೆ ನಮ್ಮೋವ್ರೇ ಶತ್ರುಗಳು. ರೀ, ಊರಿಗೇ ಯಜಮಾನ್ರು ಅಂತೀರಿ ಇಲ್ಲಿ ನೋಡಿದರೆ ದವಾಖಾನೇನೆ ಕಸಾಯಿಖಾನೆ ಮಾಡ್ಕಂಡಿದಾನೆ ಡಾಕ್ಟರು’’ ಎಂದು ಕೂಗಿದ.

ಸಜ್ಜನರಾದ ಯಜಮಾನ್ ಜಯದೇವಮೂರ್ತಿಗಳಿಗೆ ಹಾಗೆ ಒರಟಾಗಿ ಮಾತನಾಡಿದ್ದಕ್ಕೆ ಅಲ್ಲಿ ನೆರೆತಿದ್ದ ಗ್ರಾಮದ ಜನ ಗುಸಗುಸ ಮಾತು ಆರಂಭಿಸಿದರು. ಅಲ್ಲಿಯೇ ಮರಕ್ಕೆ ಕಟ್ಟಿಹಾಕಿ ಗಲಾಟೆಕೋರರನ್ನು ತದುಕಲು ಗ್ರಾಮಸ್ಥರ ಒಂದು ಗುಂಪು ರೆಡಿಯಾಗಿತ್ತು. ಆದರೆ ಯಜಮಾನರ ಮಾತಿಗೆ ಬೆಲೆ ಕೊಟ್ಟು ಸುಮ್ಮನಾದರು. ಸುತ್ತಮುತ್ತ ಹಳ್ಳಿಗಳಲ್ಲೆಲ್ಲ ಜನಾನುರಾಗಿಯಾಗಿದ್ದ ವೈದ್ಯರನ್ನು ಮತ್ತು ಊರ ಆಸ್ಪತ್ರೆಯನ್ನು ಕಸಾಯಿಖಾನೆಯೆಂದು ಹಿಯಾಳಿಸಿದ್ದು ಅವರೆಲ್ಲ ಕೆರಳುವಂತೆ ಮಾಡಿತ್ತು. ಜಯದೇವಮೂರ್ತಿ ‘‘ಸಿಟ್ಟು, ಅವಿವೇಕದ ಕೈಗೆ ಬುದ್ಧಿ ಕೊಡಬ್ಯಾಡ್ರೋ’’ ಎಂದು ನುಡಿದರು. ಇಷ್ಟು ಹೊತ್ತು ಸುಮ್ಮನಿದ್ದ ಪೊಲೀಸರು ಒಂದೊಂದು ಹೆಜ್ಜೆ ಮುಂದೆ ಬಂದರು. ಬೇರೆ ಊರಿಂದ ಗಲಾಟೆ ಮಾಡಲು ಬಂದಿದ್ದವರು ಒಂದೊಂದೆ ಹೆಜ್ಜೆ ಹಿಂದೆ ಸರಿದರು.

ಹಿಂದೆ ಸರಿಯುತ್ತಲೇ ನಾಮಧಾರಿ ಮತ್ತೊಮ್ಮೆ ಅರಚಿದ. ‘‘ನೋಡ್ರೋ ಅವ್ನ ಗೋಮಾತೇನ ಉರುಳಿಸಿ ಉರುಳಿಸಿ ಸಾಯಿಸ್ತಾನೆ ನಿಲ್ಲಿಸ್ರೋ’’ ಎಂದು ಕೂಗಿದ. ಆಗ ಅಲ್ಲೇ ಇದ್ದು ಇದನ್ನೆಲ್ಲ ಗಮನಿಸುತ್ತಿದ್ದ ಎಣ್ಣೆ ಅಣ್ಣಪ್ಪ ‘‘ಆಯ್ತಪ್ಪ ನೀನು ಸರಿ ಮಾಡೋದಾದ್ರೆ ಜಲ್ದಿ ಬಂದು ಕರು ತಕ್ಕೊಡು’’ ಅಂದು ಚಾಲೆಂಜ್ ಮಾಡಿದ.

ಜನರ ಗುಂಪಿನಿಂದ ಥರಾವರಿ ಮಾತು ಕೇಳಿಬಂದವು.

‘‘ಅವನನ್ನು ನೋಡಿದ್ರೆ ಅವನೆಂದೂ ಹಸಾನೇ ಮುಟ್ಟಿಲ್ಲ ಬಿಡು’’

‘‘ಅವನ ಕೈಯಲ್ಲೆಲ್ಲಾಕ್ತತೆ ಬಿಡ್ಲೆ’’

‘‘ಪಂಚೆ ಶರ್ಟು ಬಿಚ್ಚಿ ಒಂದು ಕೈ ನೋಡಣ್ಣ, ಗೋಮಾತಾಕಿ ಜೈ’’.

ಆಸ್ಪತ್ರೆ ಸಹಾಯಕ ಪುಟ್ಟಯ್ಯ ನಾಮಧಾರಿಗೆ ‘‘ಸ್ವಾಮಿ ಅದೇನ್ಮಾಡ್ತೀರೊ ಮಾಡಿ. ಇಲ್ದಿದ್ರೆ ನಮ್ಮುನ್ನಾರ ಬಿಡಿ ಕರು ತೆಗಿಯಕೆ’’ ಅಂದ.

‘‘ಅವ್ನೇನಾರ ಕರು ತಕ್ಕೊಟ್ರೆ ನಾನು ಎಣ್ಣೆ ಹಾಕದ್ನೆ ಬಿಟ್ಬಿಡ್ತೀನಿ’’. ಉಡುಸಲಮ್ಮನ ಆಣೆ ಕೂಗಿದ ಎಣ್ಣೆ ಅಣ್ಣಪ್ಪ.

ತಾನು ಕರೆತಂದಿದ್ದ ಹಿಂಬಾಲಕರೆಲ್ಲ ಒಬ್ಬೊಬ್ಬರೇ ಜಾಗ ಖಾಲಿ ಮಾಡಿದ್ದರಿಂದ ನಾಮಧಾರಿ ಹಿಂದೇಟು ಹಾಕತೊಡಗಿದ. ಅವನ ಜೊತೆ ಬಂದಿದ್ದ ಕೆಲವರು ಪಕ್ಷಾಂತರ ಮಾಡಿ ಭೈರಪ್ಪ, ಎಣ್ಣೆ ಅಣ್ಣಪ್ಪನ ಪರ ಮಾತಾಡತೊಡಗಿದರು. ಅವರಿಗೆ ಮಿಶ್ರತಳಿ ಗಂಡು ಸಂತಾನ ಮತ್ತು ಮುದಿ ಹಸು ಎತ್ತುಗಳನ್ನು ಸುಕಾಸುಮ್ಮನೆ ಸಾಕಿ ಸಾಕಾಗಿ ಹೋಗಿತ್ತು. ಇದುವರೆಗೆ ದುಡ್ಡು ಕೊಟ್ಟು ಕೊಳ್ಳುತ್ತಿದ್ದ ದನದ ವ್ಯಾಪಾರಿಗಳು, ದಲ್ಲಾಳಿಗಳು ಈಗ ದನಗಳನ್ನು ಕಂಡ ಕೂಡಲೇ ದಿಕ್ಕಾಪಾಲಾಗಿ ಓಡಿ ಹೋಗುತ್ತಿದ್ದರು.

ಎಲ್ಲರೂ ಮಾತಾಡುವುದನ್ನು ಬಿಟ್ಟು ಡಾಕ್ಟರು, ಹಸುವಿನ ಒದ್ದಾಟವನ್ನು ನೋಡುತ್ತ ಇಡೀ ಜಗತ್ತನ್ನು ಮರೆತಾಗ ನಾಮಧಾರಿ ಸದ್ದಿಲ್ಲದೆ ಜಾಗ ಖಾಲಿ ಮಾಡಿದ.

ಡಾಕ್ಟರು ‘‘ಈ ಹಸುನಲ್ಲಿ ಗರ್ಭಚೀಲ ನುಲಿದುಕೊಂಡಿದೆ. ಒಮ್ಮಮ್ಮೆ ಗರ್ಭದ ಹಸು ಎಮ್ಮೆಗಳಲ್ಲಿ ಹೀಗಾಗುತ್ತದೆ. ಹಸುವನ್ನು ಉರುಳಿಸಿದಾಗ ಅದು ತನ್ನಷ್ಟಕ್ಕೆ ತಾನೇ ಸರಿಹೋಗುತ್ತದೆ. ಒಮ್ಮೆಮ್ಮೆ ಬಹಳ ಸಲ ಉರುಳಿಸಬೇಕಾಗಬಹುದು’’ ಎಂದರು. ಜಯದೇವಮೂರ್ತಿ

Writer - ಮಿರ್ಝಾ ಬಶೀರ್

contributor

Editor - ಮಿರ್ಝಾ ಬಶೀರ್

contributor

Similar News