ಅರಳುವ ಮಕ್ಕಳ ಹೆಗಲಲ್ಲಿ ದುಡಿಮೆಯ ಭಾರ

Update: 2019-06-09 13:27 GMT

ಭಾರತದ ನಿರುದ್ಯೋಗ ಸಮಸ್ಯೆಯ ಬಗ್ಗೆ ಪರಿಣಾಮಕಾರಿಯಾಗಿ ವರದಿಗಳನ್ನು ರಚಿಸಲಾಗಿದೆ. ಆದರೆ ನಿರುದ್ಯೋಗ ಎನ್ನುವುದು ಭಾರತದ ಉದ್ಯೋಗ ರಂಗ ಎದುರಿಸುತ್ತಿರುವ ಸವಾಲಿನ ಒಂದು ಆಯಾಮವಷ್ಟೇ. ಅದರ ಇನ್ನೊಂದು ಆಯಾಮವೇ ಬಾಲ ಕಾರ್ಮಿಕ ಪದ್ಧತಿಯಾಗಿದ್ದು ನಿರುದ್ಯೋಗಕ್ಕಿಂತಲೂ ಹೆಚ್ಚು ಚಿಂತೆಗೀಡುಮಾಡುವಂತಾಗಿದೆ. 2011ರ ಗಣತಿಯ ಪ್ರಕಾರ ಭಾರತದ ವಿವಿಧ ರಾಜ್ಯಗಳಲ್ಲಿ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ 1.01 ಕೋಟಿ ಮಕ್ಕಳು ಕಾರ್ಮಿಕರಾಗಿ ದುಡಿಯುತ್ತಿದ್ದಾರೆ.

ಮಿಂಟ್, ಗಣತಿಯ ಅಂಕಿಅಂಶಗಳ ಜಿಲ್ಲಾವಾರು ವಿಶ್ಲೇಷಣೆ ನಡೆಸಿದಾಗ ಭಾರತಾದ್ಯಂತ ಮಕ್ಕಳನ್ನು ದುಡಿಸಲಾಗುತ್ತಿದ್ದರೂ ಕೆಲವೊಂದು ರಾಜ್ಯಗಳಲ್ಲಿ ಬಾಲಕಾರ್ಮಿಕ ಸಮಸ್ಯೆ ಅತ್ಯಂತ ಹೆಚ್ಚಾಗಿದೆ ಮತ್ತು ಉದ್ಯೋಗಗಳ ಸ್ವರೂಪ ಗಮನಾರ್ಹವಾಗಿ ಬದಲಾಗುತ್ತಿದೆ. 2011ರಲ್ಲಿ ಭಾರತಾದ್ಯಂತ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಶೇ.3.9 ಮಕ್ಕಳು ಬಾಲಕಾರ್ಮಿಕತೆಯಲ್ಲಿ ತೊಡಗಿದ್ದರು. ಈ ಅನುಪಾತವು ನಾಗಾಲ್ಯಾಂಡ್ (ಶೇ.13.2), ಹಿಮಾಚಲ ಪ್ರದೇಶ (ಶೇ.10.3) ಮತ್ತು ಸಿಕ್ಕಿಂ (ಶೇ.8.5) ಮುಂತಾದ ರಾಜ್ಯಗಳಲ್ಲಿ ಅತೀಹೆಚ್ಚಾಗಿದೆ.

ರಾಷ್ಟ್ರೀಯವಾಗಿ ಬಾಲಕಾರ್ಮಿಕರ ಪ್ರಮಾಣ 2001ರ ಶೇ.5ರಿಂದ 2011ರಲ್ಲಿ ಶೇ.3.9ಕ್ಕೆ ಕುಸಿದಿದೆ. ಆದರೆ ಬಹುದೊಡ್ಡ ಬದಲಾವಣೆಯಾಗಿರುವುದು ಉದ್ಯೋಗದ ಸ್ವರೂಪದಲ್ಲಿ. ಜಗತ್ತಿನಾದ್ಯಂತ ಬಾಲಕಾರ್ಮಿಕತೆ ಅತೀಹೆಚ್ಚಾಗಿರುವುದು ಕೃಷಿಕ್ಷೇತ್ರದಲ್ಲಿ ಮತ್ತು ಇದು ಭಾರತದ ವಿಷಯದಲ್ಲೂ ನಿಜವಾಗಿದ್ದು ನಮ್ಮ ದೇಶದಲ್ಲಿ ದುಡಿಯುವ ಮಕ್ಕಳಲ್ಲಿ ಶೇ.60 ಕೃಷಿ ಸಂಬಂಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಆದರೆ ಭಾರತದಲ್ಲಿ ಕೃಷಿಯೇತರ ಕ್ಷೇತ್ರಗಳಲ್ಲಿ ದುಡಿಯುವ ಮಕ್ಕಳಲ್ಲಿ ಏರಿಕೆಯಾಗಿರುವ ಪರಿಣಾಮ ಕೃಷಿ ವಲಯದಲ್ಲಿ ದುಡಿಯುವ ಮಕ್ಕಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ. 2001 ಮತ್ತು 2011ರ ಮಧ್ಯೆ ಕೃಷಿಯೇತರ ವಲಯಗಳಲ್ಲಿ ದುಡಿಯುವ ಮಕ್ಕಳ ಪ್ರಮಾಣ ಶೇ.40ಕ್ಕೆ ತಲುಪಿದ್ದು ದುಪ್ಪಟ್ಟುಗೊಂಡಿದೆ. ಕೃಷಿಯೇತರ ಕ್ಷೇತ್ರಗಳಲ್ಲಿ ದುಡಿಯುವ ಮಕ್ಕಳು ದೊಡ್ಡ ನಗರಗಳಲ್ಲಿ ಹೆಚ್ಚಾಗಿದ್ದಾರೆ ಎನ್ನುವುದರಲ್ಲಿ ಆಶ್ಚರ್ಯವೇನೂ ಇಲ್ಲದಿದ್ದರೂ ಕೃಷಿ ಪ್ರಧಾನ ರಾಜ್ಯಗಳಾದ ಪಂಜಾಬ್ ಮತ್ತು ಹರ್ಯಾಣದಲ್ಲೂ ಇವರ ಸಂಖ್ಯೆ ಹೆಚ್ಚಾಗಿದೆ. ಪಶ್ಚಿಮ ಬಂಗಾಳ, ಕೇರಳ ಮತ್ತು ತಮಿಳುನಾಡು ಮುಂತಾದ ರಾಜ್ಯಗಳಲ್ಲೂ ಕೃಷಿಯೇತರ ವಲಯಗಳಲ್ಲಿ ದುಡಿಯುವ ಮಕ್ಕಳ ಪ್ರಮಾಣ ಹೆಚ್ಚಾಗಿದೆ. 2001 ಮತ್ತು 2011ರ ಮಧ್ಯೆ ಕೃಷಿಯೇತರ ಕ್ಷೇತ್ರಗಳಲ್ಲಿ ದುಡಿಯುವ ಮಕ್ಕಳ ಪ್ರಮಾಣದಲ್ಲಿ ಗಣನೀಯವಾಗಿ ಏರಿಕೆಯಾದ ಪ್ರದೇಶಗಳೆಂದರೆ ಪೂರ್ವ ಉತ್ತರ ಪ್ರದೇಶ, ದಿಲ್ಲಿಯ ಸುತ್ತಮುತ್ತ ಹಾಗೂ ಜಮ್ಮು ಮತ್ತು ಕಾಶ್ಮೀರ. ಕೃಷಿಯೇತರ ವಲಯಗಳ ಪೈಕಿ ಸೇವಾ ಕ್ಷೇತ್ರದಲ್ಲಿ ಅತೀಹೆಚ್ಚು ಮಕ್ಕಳು ದುಡಿಯುತ್ತಿದ್ದಾರೆ. ಮನೆ ಕೆಲಸಗಳು, ಆತಿಥ್ಯ ಮತ್ತು ಮನರಂಜನೆ ಇತ್ಯಾದಿ ಕ್ಷೇತ್ರಗಳಲ್ಲಿ ಅತೀಹೆಚ್ಚು ಮಕ್ಕಳು ದುಡಿಯುತ್ತಿದ್ದಾರೆ. ಕೃಷಿಯೇತರ ವಲಯಗಳಲ್ಲಿ ದುಡಿಯುವ ಶೇ.30 ಮಕ್ಕಳು ಈ ಕ್ಷೇತ್ರಗಳಲ್ಲಿದ್ದರೆ ಉತ್ಪಾದನಾ ಕ್ಷೇತ್ರದಲ್ಲಿ ಶೇ.6 ಮತ್ತು ನಿರ್ಮಾಣ ಕ್ಷೇತ್ರದಲ್ಲಿ ಶೇ.2 ಬಾಲಕಾರ್ಮಿಕರು ತೊಡಗಿಕೊಂಡಿದ್ದಾರೆ. 2001ರಲ್ಲಿ ಸೇವೆಗಳು ಮತ್ತು ಉತ್ಪಾದನಾ ಕ್ಷೇತ್ರಗಳಲ್ಲಿ ದುಡಿಯುವ ಮಕ್ಕಳ ಪ್ರಮಾಣ ಸಮಾನವಾಗಿತ್ತು. ಯುನಿಸೆಫ್ ಪ್ರಕಾರ, ಭಾರತದಲ್ಲಿ ಬಾಲಕಾರ್ಮಿಕತೆ ಕಾರ್ಖಾನೆಗಳಿಂದ ಉದ್ಯೋಗಿಯ ಮನೆಗಳಿಗೆ ವರ್ಗಾವಣೆಗೊಂಡಿದ್ದು ಮಕ್ಕಳು ಈಗಲೂ ಬೀಡಿ ಮತ್ತು ಪಟಾಕಿ ತಯಾರಿಕೆಯಂತಹ ಅಪಾಯಕಾರಿ ಉದ್ಯಮಗಳಲ್ಲಿ ತೊಡಗಿಕೊಂಡಿದ್ದಾರೆ. ಅನೌಪಚಾರಿಕ ಗೃಹ ಆಧಾರಿತ ಕ್ಷೇತ್ರಕ್ಕೆ ಆಗಿರುವ ವರ್ಗಾವಣೆಯಿಂದ ಬಾಲಕಾರ್ಮಿಕರನ್ನು ಪತ್ತೆಹಚ್ಚಲು ಕಷ್ಟವಾಗುತ್ತಿದೆ. ಈ ಸಮಸ್ಯೆಯನ್ನು ಸರಿಪಡಿಸಲು ಕೇಂದ್ರ ಸರಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಉದಾಹರಣೆಗೆ, 2016ರಲ್ಲಿ ಸರಕಾರ ದುಡಿಯುವ ಕನಿಷ್ಠ ವಯಸ್ಸನ್ನು 14 ವರ್ಷಕ್ಕೇರಿಸಿತು. ಆದರೆ ಬಡವರ್ಗಕ್ಕೆ ಸೇರಿದ ಮಕ್ಕಳು ತಮ್ಮ ಕುಟುಂಬದ ಉದ್ಯಮದಲ್ಲಿ ದುಡಿಯಬಹುದು ಎಂಬ ನಿಬಂಧನೆಯನ್ನು ಸೇರಿಸಿತು. ಮಕ್ಕಳ ಹಕ್ಕುಗಳ ಹೋರಾಟಗಾರರ ಪ್ರಕಾರ ಈ ನಿಬಂಧನೆಯಿಂದಾಗಿ ಉದ್ಯಮಿಗಳು ಮಕ್ಕಳನ್ನು ತಮ್ಮ ಸಂಬಂಧಿಕರು ಎಂದು ಸುಳ್ಳು ಹೇಳಿ ಕೆಲಸಕ್ಕೆ ನಿಯೋಜಿಸುವ ಮತ್ತು ಆ ಮೂಲಕ ದೇಶದಲ್ಲಿ ಬಾಲಕಾರ್ಮಿಕತೆ ಶಾಶ್ವತವಾಗಿರುವಂತೆ ಮಾಡುವ ಸಾಧ್ಯತೆಯಿದೆ. ರಾಜ್ಯಗಳು ಬಾಲಕಾರ್ಮಿಕತೆಯನ್ನು ಪತ್ತೆಹಚ್ಚುವ ಅವಕಾಶವನ್ನು ಬಾಲಕಾರ್ಮಿಕ ಕಾಯ್ದೆ ನೀಡುತ್ತದೆ. 2015ರಿಂದ 2017ರ ವರೆಗೆ ಈ ಕಾಯ್ದೆಯಡಿಯಲ್ಲಿ ಭಾರತಾದ್ಯಂತ 4,466 ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಅಂಕಿಅಂಶಗಳನ್ನು , ಬಾಲಕಾರ್ಮಿಕ ಪದ್ಧತಿಯನ್ನು ಹೋಗಲಾಡಿಸಲು ರಾಜ್ಯಗಳು ಯಾವ ಮಟ್ಟಿಗೆ ಇಚ್ಛೆ ಹೊಂದಿದೆ ಎನ್ನುವುದನ್ನು ಅಳೆಯುವ ಕ್ರಮದಂತೆ ಬಳಸಿದಾಗ, ಈ ರಾಜ್ಯಗಳ ಇಚ್ಛಾಶಕ್ತಿಯ ಬಗ್ಗೆ ನಮಗೆ ಅರಿವಾಗುತ್ತದೆ. ಉದಾಹರಣೆಗೆ, ರಾಜಸ್ಥಾನ, ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳದಲ್ಲಿ ಅತೀಹೆಚ್ಚು ಬಾಲಕಾರ್ಮಿಕತೆಯಿದ್ದರೂ ಈ ರಾಜ್ಯಗಳಲ್ಲಿ ಅತ್ಯಂತ ಕಡಿಮೆ ಪ್ರಕರಣಗಳು ದಾಖಲಾಗಿವೆ. ಸರಕಾರ, ರಾಷ್ಟ್ರೀಯ ಬಾಲಕಾರ್ಮಿಕ ಯೋಜನೆಯ ಮೂಲಕವೂ ಬಾಲಕಾರ್ಮಿಕತೆಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ. ಈ ಯೋಜನೆಯಲ್ಲಿ ಬಾಲಕಾರ್ಮಿಕರನ್ನು ಪತ್ತೆಹಚ್ಚು ಅವರಿಗೆ ಪುನರ್ವಸತಿ ಒದಗಿಸಲಾಗುತ್ತದೆ. 2017-18ರಲ್ಲಿ 50,000 ಬಾಲಕಾರ್ಮಿಕರನ್ನು ರಕ್ಷಿಸಿ ಪುನರ್ವಸತಿ ಒದಗಿಸಲಾಗಿದೆ. ಆದರೆ ಒಟ್ಟಾರೆ ಅಸ್ತಿತ್ವದಲ್ಲಿರುವ ಬಾಲಕಾರ್ಮಿಕತೆಗೆ ಹೋಲಿಸಿದರೆ ಈ ಸಂಖ್ಯೆ ಬಹಳ ಕಡಿಮೆಯಾಗಿದೆ. ಬಾಲಕಾರ್ಮಿಕತೆ ಎನ್ನುವುದು ಕೇವಲ ಭಾರತಕ್ಕೆ ಸೀಮಿತವಾದ ಸಮಸ್ಯೆಯಲ್ಲ. ಜಗತ್ತಿನಾದ್ಯಂತ 16.8 ಕೋಟಿ ಮಕ್ಕಳು ದುಡಿಯುತ್ತಿದ್ದಾರೆ. ಇದರಲ್ಲಿ ಭಾರತದ ಪ್ರಮಾಣ ಶೇ.6. ದಕ್ಷಿಣ ಏಶ್ಯಾದಲ್ಲಿ ಭಾರತ ಅತೀಕಡಿಮೆ ಬಾಲಕಾರ್ಮಿಕ ದರವನ್ನು ಹೊಂದಿದೆ. ನೇಪಾಳದಲ್ಲಿ ಅತೀಹೆಚ್ಚು ಶೇ.42 ಬಾಲಕಾರ್ಮಿಕತೆಯಿದೆ. ಜಾಗತಿಕವಾಗಿ ಅಂತರ್‌ರಾಷ್ಟ್ರೀಯ ಕಾರ್ಮಿಕ ಸಂಘಟನೆ ಮತ್ತು ಯುನಿಸೆಫ್ ಬಾಲಕಾರ್ಮಿಕತೆಯನ್ನು ತೊಡೆದುಹಾಕಲು ಕಾನೂನಿನ ಪರಿಣಾಮಕಾರಿ ಅನುಷ್ಠಾನ, ಹೆಚ್ಚಿನ ಜಾಗೃತಿ ಮತ್ತು ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವುದು ಹೀಗೆ ಹಲವು ಕ್ರಮಗಳನ್ನು ತೆಗೆದುಕೊಳ್ಳಲು ಸಲಹೆ ನೀಡುತ್ತದೆ. ಭಾರತವೂ ಇದನ್ನು ಅನುಸರಿಸುವ ಅಗತ್ಯವಿದೆ.

Writer - ಶ್ರೀಹರ್ಷ ದೇವುಲಪಳ್ಳಿ

contributor

Editor - ಶ್ರೀಹರ್ಷ ದೇವುಲಪಳ್ಳಿ

contributor

Similar News