ಅಸ್ಸಾಮೀ ಭಾಷೆಯನ್ನು ಮಾತೃಭಾಷೆಯನ್ನಾಗಿ ಉಲ್ಲೇಖಿಸದಂತೆ ಬಂಗಾಳಿ ಮುಸ್ಲಿಮರಿಗೆ ಆಗ್ರಹ

Update: 2019-06-09 15:25 GMT

ಗುವಾಹಟಿ,ಜೂ.9: ಅಸ್ಸಾಮಿನಲ್ಲಿ ‘‘ಚಲೋ ಪಲ್ಟಾಯಿ(ನಾವು ಬದಲಾಗೋಣ)-ಆಂದೋಲನ 2021’’ ಹೆಸರಿನ ಸಾಮಾಜಿಕ ಮಾಧ್ಯಮ ಅಭಿಯಾನವು ಸಾಕಷ್ಟು ಪ್ರತಿಭಟನೆಗಳನ್ನು ಹುಟ್ಟಿಹಾಕಿದೆ. ಹಿಂದಿನ ಜನಗಣತಿಯಲ್ಲಿ ಅಸ್ಸಾಮೀ ಭಾಷೆಯನ್ನು ತಮ್ಮ ಮಾತೃಭಾಷೆಯನ್ನಾಗಿ ನೋಂದಾಯಿಸಿದ್ದ ಬಂಗಾಳಿ ಭಾಷಿಕರನ್ನು 2021ರ ಜನಗಣತಿಯಲ್ಲಿ ಹಾಗೆ ಮಾಡದಂತೆ ಈ ಅಭಿಯಾನವು ಒತ್ತಾಯಿಸುತ್ತಿದೆ.

 ರಾಜ್ಯದಲ್ಲಿ ತಮಗೆ ಅಕ್ರಮ ವಲಸಿಗರು ಎಂಬ ಹಣೆಪಟ್ಟಿಯನ್ನು ಹಚ್ಚಲಾಗುತ್ತಿದೆ. ಅಸ್ಸಾಮೀ ಭಾಷೆಯನ್ನು ಅಪ್ಪಿಕೊಂಡಿದ್ದರೂ ಅದು ಈ ಅನ್ಯಾಯದ ವಿರುದ್ಧ ತಮಗೆ ರಕ್ಷಣೆಯನ್ನು ನೀಡಿಲ್ಲ ಎಂದು ಈ ಅಭಿಯಾನದ ಹಿಂದಿದ್ದವರು ಹೇಳಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಈ ಗಡಿರಾಜ್ಯದ ಬಂಗಾಳಿ ಭಾಷಿಕರು ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‌ಆರ್‌ಸಿ)ಯು ತಮ್ಮನ್ನು ನಿರ್ದಿಷ್ಟವಾಗಿ ಗುರಿಯಾಗಿಸಿಕೊಂಡಿದೆ ಎಂದು ಭಾವಿಸಿದ್ದಾರೆ. 1951ರ ಬಳಿಕ ಮೊದಲ ಬಾರಿಗೆ ಪರಿಷ್ಕರಿಸಲಾಗುತ್ತಿರುವ ಎನ್‌ಆರ್‌ಸಿಯು ಅಸ್ಸಾಮಿನಲ್ಲಿ ವಾಸವಿರುವ ಭಾರತೀಯ ಪ್ರಜೆಗಳನ್ನು ಅಕ್ರಮ ವಲಸಿಗರಿಂದ ಪ್ರತ್ಯೇಕಿಸಲು ಉದ್ದೇಶಿಸಿದೆ.

‘ನಮ್ಮ ಪೂರ್ವಜರು ಅಸ್ಸಾಮೀ ಮಾಧ್ಯಮ ಶಾಲೆಗಳನ್ನು ಸ್ಥಾಪಿಸಿದ್ದರು ಮತ್ತು ನಾವೆಲ್ಲರೂ ಅದೇ ಶಾಲೆಗಳಲ್ಲಿ ಓದಿದ್ದೇವೆ. ಆದರೂ ನಮ್ಮ ರಾಷ್ಟ್ರೀಯತೆಯನ್ನು ಪ್ರಶ್ನಿಸುವುದು ಮಾಮೂಲಾಗಿಬಿಟ್ಟಿದೆ ’ ಎಂದು ಅಬು ಯೂಸುಫ್ ಮುಹಮ್ಮದ್ ರೈಹಾನ್ ನೋವು ವ್ಯಕ್ತಪಡಿಸಿದರು. ಅವರು ಮಧ್ಯ ಅಸ್ಸಾಮಿನ ನಾಗಾಂವ್‌ನಿಂದ ‘ಚಲೋ ಪಲ್ಟಾಯಿ’ಫೇಸ್‌ಬುಕ್ ಪೇಜ್‌ವೊಂದನ್ನು ನಿರ್ವಹಿಸುತ್ತಿದ್ದಾರೆ.

 ಅಭಿಯಾನದ ಪರಿಣಾಮ ಡಿಜಿಟಲ್ ಜಗತ್ತಿನ ಹೊರಗೂ ಹರಡುತ್ತಿದೆ. ಮೇ 31ರಂದು ಗುವಾಹಟಿಯ ಆರ್‌ಟಿಐ ಕಾರ್ಯಕರ್ತನೋರ್ವ ಅಭಿಯಾನವನ್ನು ಬೆಂಬಲಿಸಿರುವ ಪಶ್ಚಿಮ ಬಂಗಾಳದ ತಥಾಕಥಿತ ಬುದ್ಧಿಜೀವಿ ಗಾರ್ಗಾ ಚಟರ್ಜಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾನೆ. ಇದರ ಬೆನ್ನಲ್ಲೇ ಲಖಿಂಪುರದಲ್ಲಿ ಅಸೋಮಿಯಾ ಯುವ ಮಂಚ್‌ನ ಕಾರ್ಯಕರ್ತರು ಚಟರ್ಜಿ ಮತ್ತು ಅಸ್ಸಾಮಿನ ಬಂಗಾಳಿ ಹಿಂದು ನಾಯಕರ ಪ್ರತಿಕೃತಿಗಳನ್ನು ದಹಿಸಿ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಮಾಜಿ ಅಸ್ಸಾಂ ಮುಖ್ಯಮಂತ್ರಿ ತರುಣ ಗೊಗೊಯ್ ಅವರಿಗೆ ಈಗ ಈ ಅಭಿಯಾನದಲ್ಲಿ ‘ಪಿತೂರಿ’ಯ ವಾಸನೆ ಬಡಿದಿದೆ ಮತ್ತು ಜಾಗ್ರತರಾಗಿರುವಂತೆ ಅಸ್ಸಾಮಿ ಜನರಿಗೆ ಎಚ್ಚರಿಕೆ ನೀಡಿದ್ದಾರೆ.

ಅಷ್ಟಕ್ಕೂ ಅಸ್ಸಾಮಿನ ಅಷ್ಟೆಲ್ಲ ಬಂಗಾಳಿ ಭಾಷಿಕರು ತಮ್ಮನ್ನು ಅಸ್ಸಾಮಿಗಳು ಎಂದೇಕೆ ನೋಂದಾಯಿಸಿಕೊಳ್ಳುತ್ತಿದ್ದಾರೆ? ಇದಕ್ಕೆ ಉತ್ತರವನ್ನು ಕಂಡುಕೊಳ್ಳಲು ಸರಿಸುಮಾರು ಎರಡು ಶತಮಾನಗಳಷ್ಟು ಹಿಂದಕ್ಕೆ ಹೋಗಬೇಕು.

ಅಸ್ಸಾಮೀ ಭಾಷೆಯ ಪತನ ಮತ್ತು ಉಚ್ಛ್ರಾಯ

1826ರಲ್ಲಿ ಬ್ರಿಟಿಷರು ಅಸ್ಸಾಮನ್ನು ಸ್ವಾಧೀನ ಪಡಿಸಿಕೊಂಡ ನಂತರದ ಅತ್ಯಂತ ಮಹತ್ವದ ಪರಿಣಾಮವೆಂದರೆ ‘ಹೊರಗಿನವರು’ ಬೃಹತ್ ಸಂಖ್ಯೆಯಲ್ಲಿ ರಾಜ್ಯಕ್ಕೆ ಹರಿದು ಬಂದಿದ್ದು. ಈ ಪೈಕಿ ಹೆಚ್ಚಿನವರು ಬಂಗಾಳಿಗಳಾಗಿದ್ದು, ವಸಾಹತುಶಾಹಿ ಸರಕಾರದ ನಿರ್ವಹಣೆ ಅಗತ್ಯವಾಗಿದ್ದ ವಿವಿಧ ಕೆಲಸಗಳನ್ನು ಮಾಡಲು ಕರೆತರಲಾಗಿತ್ತು.

ಅಸ್ಸಾಮಿ ಸಮುದಾಯದ ಜನಸಂಖ್ಯೆ ಮತ್ತು ಆರ್ಥಿಕತೆಯು ಕುಸಿದಿದ್ದು,1836ರಲ್ಲಿ ಸರಕಾರವು ಬಂಗಾಳಿಯನ್ನು ರಾಜ್ಯದ ಅಧಿಕೃತ ಭಾಷೆಯನ್ನಾಗಿ ಘೋಷಿಸಿದ್ದು ಇನ್ನೊಂದು ಹೊಡೆತವನ್ನು ನೀಡಿತ್ತು. ನಾಲ್ಕು ದಶಕಗಳ ಬಳಿಕ ಸರಕಾರವು ಈ ನಿರ್ಧಾರವನ್ನು ಹಿಂದೆಗೆದುಕೊಳ್ಳುವಂತೆ ಮಾಡುವಲ್ಲಿ ಅಸ್ಸಾಮಿಗಳು ಯಶಸ್ವಿಯಾಗಿದ್ದರಾದರೂ ಮುಂಬರುವ ವರ್ಷಗಳಲ್ಲಿ ತಮ್ಮ ಭಾಷೆಯ ರಕ್ಷಣೆಗಾಗಿ ಅವರ ಹೋರಾಟವನ್ನು ಅದು ತಪ್ಪಿಸಿರಲಿಲ್ಲ. 1874ರಲ್ಲಿ ಅಸ್ಸಾಮನ್ನು ಬಂಗಾಳ ಪ್ರಾಂತ್ಯದಿಂದ ಪ್ರತ್ಯೇಕಗೊಳಿಸಿದಾಗ ಬಂಗಾಳಿ ಪ್ರಾಬಲ್ಯದ ಸಿಲ್ಹೆಟ್ ಪ್ರದೇಶದ ಪ್ರಭಾವಕ್ಕೆೆ ಸಿಲುಕಿತ್ತು ಮತ್ತು ಭಾಷಾ ಏಕರೂಪತೆಯ ಅಸ್ಸಾಮಿಗಳ ಮಹತ್ವಾಕಾಂಕ್ಷೆಯ ಮೇಲೆ ನೀರೆರಚಿತ್ತು.

 ನಂತರದ ದಶಕಗಳಲ್ಲಿ ಭಾಷೆಯು ಅಸ್ಸಾಮೀ ರಾಷ್ಟ್ರವಾದದ ಕೇಂದ್ರ ಬಿಂದುವಾಗಿ ಹೊರಹೊಮ್ಮಿತ್ತು ಮತ್ತು ಇದರ ಹಿಂದೆ 1917ರಲ್ಲಿ ಸ್ಥಾಪನೆಗೊಂಡಿದ್ದ ಆಸ್ಸಾಂ ಸಾಹಿತ್ಯ ಸಭಾದ ಪ್ರಮುಖ ಪಾತ್ರವಿತ್ತು.

ಅಸ್ಸಾಮಿಗಳಾಗಿ ಪರಿವರ್ತನೆ

1931ರ ಜನಗಣತಿಯಲ್ಲಿ ಕೇವಲ ಶೇ.31.4ರಷ್ಟಿದ್ದ ಅಸ್ಸಾಮಿ ಭಾಷಿಕರ ಸಂಖ್ಯೆ 1951ರ ಜನಗಣತಿ ವೇಳೆ ಶೇ.56.7ಕ್ಕೇರಿತ್ತು. ಭಾರೀ ಸಂಖ್ಯೆಯ ಬಂಗಾಳಿ ಮುಸ್ಲಿಮರು ತಮ್ಮನ್ನು ಅಸ್ಸಾಮಿ ಭಾಷಿಕರು ಎಂದು ಘೋಷಿಸಿಕೊಂಡಿದ್ದು ಇದಕ್ಕೆ ಕಾರಣವಾಗಿತ್ತು. ಹೆಚ್ಚಿನವರ ಪೂರ್ವಜರು 19ನೇ ಶತಮಾನದಿಂಲೇ ಬಂಗಾಳದಿಂದ ವಲಸೆ ಬಂದು ಬ್ರಹ್ಮಪುತ್ರಾ ಕಣಿವೆಯಲ್ಲ್ಲಿ ನೆಲೆಸಿದ್ದರು. ಅಲ್ಲಿಂದೀಚೆಗೆ ಅಸ್ಸಾಮಿನ ಬಹಳಷ್ಟು ಬಂಗಾಳಿ ಭಾಷಿಕ ಮುಸ್ಲಿಮರು ತಮ್ಮ ಮಾತೃಭಾಷೆ ಅಸ್ಸಾಮೀ ಎಂದು ನೋಂದಾಯಿಸಿಕೊಂಡಿದ್ದಾರೆ. ಸ್ಥಳೀಯ ಜನರೊಂದಿಗೆ ಸಮೀಕರಿಸಿಕೊಳ್ಳುವುದು ಇದರ ಭಾಗಶಃ ಉದ್ದೇಶವಾಗಿದ್ದರೆ ವಲಸೆಯನ್ನು ಸಾಂಸ್ಕೃತಿಕ ಆಕ್ರಮಣ ಎಂದೇ ಭಾವಿಸಿರುವ ಅಸ್ಸಾಮಿಗಳ ಕಿರುಕುಳಗಳಿಂದ ಪಾರಾಗುವುದು ಮುಖ್ಯ ಉದ್ದೇಶವಾಗಿತ್ತು.

ಆದರೆ ಅಸ್ಸಾಮಿನ ಬಂಗಾಲಿ ಹಿಂದುಗಳು ತಮ್ಮ ಬಂಗಾಳಿ ಅನನ್ಯತೆಗೆ ಅಂಟಿಕೊಂಡಿದ್ದಾರೆ. ಇದು ಆಗಾಗ್ಗೆ ಸ್ಥಳೀಯರೊಂದಿಗೆ ಅವರ ಘರ್ಷಣೆಗಳಿಗೆ ಕಾರಣವಾಗಿದೆ.

1960ರಲ್ಲಿ ಅಸ್ಸಾಮೀ ಭಾಷೆಯನ್ನು ರಾಜ್ಯದ ಏಕೈಕ ಅಧಿಕೃತ ಭಾಷೆಯನ್ನಾಗಿಸುವ ಸರಕಾರದ ನಿರ್ಧಾರದ ವಿರುದ್ಧ ಸಿಡಿದೆದ್ದಿದ್ದ ಬರಾಕ್ ಕಣಿವೆಯಲ್ಲಿ ಬಹುಸಂಖ್ಯಾತರಾಗಿರುವ ಹಿಂದು ಬಂಗಾಳಿಗಳು ಭಾಷಾ ಆಂದೋಲನವನ್ನು ನಡೆಸಿದ್ದರು. ಹಲವಾರು ಪ್ರತಿಭಟನೆಗಳು ಮತ್ತು 11 ಸಾವುಗಳ ಬಳಿಕ ಸರಕಾರವು ತನ್ನ ನಿರ್ಧಾರವನ್ನು ಹಿಂದೆಗೆದುಕೊಂಡಿತ್ತು.

ಬರಾಕ್ ಕಣಿವೆಯ ಬಂಗಾಳಿ ಭಾಷಿಕ ಮುಸ್ಲಿಮರು ಭಾಷಾ ಆಂದೋಲನದಲ್ಲಿ ಭಾಗಿಯಾಗಿದ್ದರೂ ಬ್ರಹ್ಮಪುತ್ರಾ ಕಣಿವೆಯ ಬಂಗಾಳಿ ಮುಸ್ಲಿಮರು ಅದರಿಂದ ದೂರವಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News