ಸಂವಿಧಾನದ ನೆಲೆಯಲ್ಲೇ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು: ನಿವೃತ್ತ ನ್ಯಾ.ಗೋಪಾಲಗೌಡ

Update: 2019-06-09 16:59 GMT

ಬೆಂಗಳೂರು, ಜೂ.9: ಸಂವಿಧಾನದ ಆಶಯವೇ ದೇಶದ ಬಹುತ್ವದ ನೆಲೆಯನ್ನು ಕಾಪಾಡುವುದಾಗಿದ್ದು, ಈ ನೆಲೆಯನ್ನು ಭದ್ರಗೊಳಿಸುವ ನಿಟ್ಟಿನಲ್ಲಿ ನೀವು ಕಾರ್ಯ ನಿರ್ವಹಿಸಬೇಕೆಂದು ಭಾರತೀಯ ನಾಗರಿಕ ಸೇವೆಗೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ನಿವೃತ್ತ ನ್ಯಾ.ಗೋಪಾಲಗೌಡ ಸಲಹೆ ನೀಡಿದ್ದಾರೆ.

ರವಿವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಇನ್‌ಸೈಟ್ ಐಎಎಸ್ ಅಕಾಡೆಮಿ ಆಯೋಜಿಸಿದ್ದ ಯುಪಿಎಸ್‌ಸಿ ಸಾಧಕರಿಗೆ ಅಭಿನಂದನೆ ಸಮಾರಂಭದಲ್ಲಿ ಮಾತನಾಡಿದ ಅವರು, ದೇಶವು ಬಹುಸಂಸ್ಕೃತಿಯನ್ನು ಹೊಂದಿದ್ದು, ಅದರ ನೆಲೆಯಲ್ಲಿಯೇ ತನ್ನ ಅಸ್ಥಿತ್ವವನ್ನು ಪಡೆದುಕೊಂಡಿದೆ. ಇದನ್ನೆಲ್ಲ ಅರಿತುಕೊಂಡು ಭಾರತೀಯ ನಾಗರಿಕ ಸೇವೆಗೆ ಆಯ್ಕೆಯಾಗಿರುವ ಅಭ್ಯರ್ಥಿಗಳು ಕರ್ತವ್ಯ ನಿರ್ವಹಿಸಬೇಕೆಂದು ಹೇಳಿದರು.

ನೀವು ಇನ್ನುಮುಂದೆ ಅನೇಕಗಳನ್ನು ಸವಾಲುಗಳನ್ನು ಎದುರಿಸಬೇಕು. ಗ್ರಾಮೀಣ ಪ್ರದೇಶದಿಂದಲೇ ದೇಶ ಅರ್ಧಕ್ಕಿಂತ ಅಧಿಕವಾಗಿ ಕೂಡಿದೆ. ಕೃಷಿಯೇ ದೇಶದ ಪ್ರದಾನ ಕಸುಬಾಗಿದ್ದು, ಗ್ರಾಮೀಣ ಪ್ರದೇಶವನ್ನು ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಬೇಕು. ನಿಮ್ಮ ಅಧಿಕಾರವನ್ನು ಜನರ ಸೇವೆಗಾಗಿ ಮೀಸಲಿಡಬೇಕು. ನೀವು ದೇಶದ ಬುನಾದಿಗಳು. ಅಲ್ಲದೆ, ರಾಜಕೀಯದವರ ದಳಕ್ಕೆ ಒಳಗಾಗದೇ ಕರ್ತವ್ಯ ನಿರ್ವಹಿಸಬೇಕು ಎಂದು ತಿಳಿಸಿದರು.

ಜನರ ಸ್ನೇಹಿಯಾಗಿ ಅಧಿಕಾರಿಗಳು ಸೇವೆ ಮಾಡಬೇಕು. ಜನರೊಂದಿಗೆ ಇದ್ದುಕೊಂಡೇ ಸಮಾಜ ಸೇವೆ ಮಾಡಬೇಕು. ಅಲ್ಲದೆ ಸೇವೆಗೆ ನಿಯೋಜನೆಯಾಗುವ ಜಿಲ್ಲೆಯ ಸಂಪೂರ್ಣವಾದ ಅಂಕಿ ಅಂಶಗಳನ್ನು ತಿಳಿದುಕೊಳ್ಳಿ, ಸಮಸ್ಯೆಗಳನ್ನು ಹುಡುಕಿ ಅದಕ್ಕೆ ಬದ್ಧವಾದ ಯೋಜನೆಗಳನ್ನು ರೂಪಿಸಿಕೊಳ್ಳಿ. ಪ್ರಯಾಣ ಮಾಡಿ ಪ್ರಯಾಣದ ವೇಳೆ ಕಾಣುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ ಎಂದರು.

ಬೆಂಗಳೂರು ಪೊಲೀಸ್ ಆಯುಕ್ತ ಸುನಿಲ್ ಕುಮಾರ್ ಮಾತನಾಡಿ, ನಿಮ್ಮ ಯಶಸ್ಸು ಕೊನೆಯವರೆಗೂ ಇದೇ ರೀತಿ ಇರಬೇಕು. ಯುಪಿಎಸ್‌ಸಿಯಲ್ಲಿನ ಸ್ಪರ್ಧೆ ದಿನೇ ದಿನೇ ಅಧಿಕವಾಗುತ್ತಿದೆ. ದೇಶದಲ್ಲಿ ನಿರುದ್ಯೋಗ ಅಧಿಕವಾಗುತ್ತಿದೆ. ಆದರೂ ಅದನ್ನೆಲ್ಲ ಮೀರಿ ನೀವು ಸಾಧಿಸಿರುವುದು ಶ್ಲಾಘನೀಯ. ಅಲ್ಲದೆ ಇದು ಕೇವಲ ಉದ್ಯೋಗವಲ್ಲ ಜನರ ಸೇವೆ ಮಾಡಲು ಸಿಕ್ಕಿರುವ ಮಹಾತ್ಕಾರ್ಯ ಎಂದು ಅಭಿಪ್ರಾಯಪಟ್ಟರು.

ಅಧಿಕಾರವನ್ನು ಸದುಪಯೋಗ ಮಾಡಿಕೊಂಡಾಗಲೇ ನಿಮ್ಮ ಈ ಸಾಧನೆ ಸಾರ್ಥಕ ವಾಗುತ್ತದೆ. ಇತ್ತೀಚೆಗೆ ಬೆಂಗಳೂರು ದೇಶದಲ್ಲೇ ನೀರಿನ ಸಮಸ್ಯೆಯನ್ನು ಎದುರಿಸುತ್ತಿರುವ ನಗರ ಎಂದು ಗುರುತಿಸಿಕೊಳ್ಳುತ್ತಿದೆ. ಇಂತಹ ಗಂಭೀರ ಸಮಸ್ಯೆಗಳನ್ನು ನಿವಾರಿಸಲು ಯೋಜನೆ ರೂಪಿಸುವ ಜವಾಬ್ದಾರಿ ನಿಮ್ಮ ಮೇಲೆ ಇದೆ ಎಂದು ಸಲಹೆ ನೀಡಿದರು.

‘ಸಂವಿಧಾನದ ಮೂಲ ತತ್ವವೇ ಜಾತ್ಯತೀತ ರಾಷ್ಟ್ರದ ಪರಿಕಲ್ಪನೆಯಾಗಿದೆ. ನಿಮಗೆ ಎಷ್ಟೇ ಅಧಿಕಾರ ಸಿಕ್ಕರೂ ನೀವು ಜಾತ್ಯಾತೀತ ರಾಷ್ಟ್ರ ಎಂಬುದನ್ನು ಮರೆಯಬಾರದು’

-ವಿ.ಗೋಪಾಲಗೌಡ, ನಿವೃತ್ತ ನ್ಯಾಯಾಧೀಶ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News