ಸಂಶೋಧನಾ ಕ್ಷೇತ್ರದಲ್ಲಿ 'ಎಡ-ಬಲ' ಒಳ್ಳೆಯ ಬೆಳವಣಿಗೆಯಲ್ಲ: ಚಾರಿತ್ರಿಕ ದಾಖಲೆಗಳ ತಜ್ಞ ಡಾ.ಎ.ಕೆ.ಶಾಸ್ತ್ರಿ

Update: 2019-06-09 17:21 GMT

ಬೆಂಗಳೂರು, ಜೂ.9: ಸಂಶೋಧನಾ ಕ್ಷೇತ್ರದಲ್ಲೂ ಎಡ-ಬಲ ಎಂದು ನೋಡುವ ಪ್ರವೃತ್ತಿ ಬೆಳೆಯುತ್ತಿದ್ದು ಭವಿಷ್ಯತ್ತಿನ ದೃಷ್ಟಿಯಿಂದ ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಚಾರಿತ್ರಿಕ ದಾಖಲೆಗಳ ತಜ್ಞ ಡಾ.ಎ.ಕೆ.ಶಾಸ್ತ್ರಿ ನುಡಿದರು.

ರವಿವಾರ ನಗರದ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ ಹಿರಿಯ ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ ಅವರ ಹೆಸರಿನಲ್ಲಿ ನೀಡುವ ಈ ಸಾಲಿನ ‘ಚಿದಾನಂದ ಪ್ರಶಸ್ತಿ’, ಸ್ವೀಕರಿಸಿ ಅವರು ಮಾತನಾಡಿದರು.

ಮಠ-ಮಾನ್ಯಗಳಲ್ಲಿರುವ ಶಾಸನ ಶಾಸ್ತ್ರಗಳ ಕುರಿತು ಅಧ್ಯಯನಕ್ಕೆ ಮುಂದಾದರೆ, ಸಂಶೋಧಕನಿಗೆ ಯಾವುದೋ ಒಂದು ಪಂಥಿಯ ಲೇಪ ಹಚ್ಚುವ ಪದ್ಧತಿ ಚಾಲ್ತಿಯಲ್ಲಿದೆ. ಆದರೆ, ನಮ್ಮಲ್ಲಿರುವ ಮಠಗಳಲ್ಲೂ ಕೂಡ ಉಪಯುಕ್ತವಾದ ಶಾಸನಗಳಿವೆ. ಹೀಗಾಗಿ, ಯಾವುದೇ ಸಂಶೋಧನೆಗೆ ಎಡ ಮತ್ತು ಬಲ ಎಂಬುವುದಿಲ್ಲ. ಈ ಲೇಪನ ಕೂಡ ಒಳ್ಳೆಯದಲ್ಲ ಎಂದರು.

ಸಂಶೋಧನೆ ಎಂಬುವುದು ಸತ್ಯ ಶೋಧನೆಯಾಗಿದೆ. ಜೀವನವನ್ನು ಸಂಪೂರ್ಣವಾಗಿ ಸಂಶೋಧನೆಗೆ ಮುಡುಪಾಗಿಟ್ಟವರು ಹಲವರಿದ್ದಾರೆ. ಇಂತವರನ್ನು ಗುರುತಿಸಿ ಗೌರವಿಸಬೇಕಾಗಿದೆ. ಹಿರಿಯ ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ ಅವರ ಹೆಸರಿನ ಪ್ರಶಸ್ತಿ ದೊರೆತಿರುವುದು ಮತ್ತಷ್ಟು ಖುಷಿ ಕೊಟ್ಟಿದೆ ಎಂದು ತಿಳಿಸಿದರು.

ಪುರಾತತ್ವ ಶಾಸ್ತ್ರಜ್ಞ ಡಾ.ಎಸ್.ನಾಗರಾಜು ಮಾತನಾಡಿ, ಸಂಶೋಧನಾ ಕ್ಷೇತ್ರಕ್ಕೆ ಚಿದಾನಂದಮೂರ್ತಿ ಅವರ ಕೊಡುಗೆ ಅಪಾರ. ಅದೇ ರೀತಿಯಲ್ಲಿ ಡಾ.ಎ.ಕೆ.ಶಾಸ್ತ್ರಿ ಅವರು ಕೂಡ ಸಾಧನೆ ಮಾಡಿದ್ದು, ಸಂಶೋಧನಾ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆ ಮಾಡಲಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಂಶೋಧಕರಾದ ಡಾ.ಎಂ.ಚಿದಾನಂದಮೂರ್ತಿ, ಡಾ.ಬಿ.ನಂಜುಂಡ ಸ್ವಾಮಿ, ಚಿದಾನಂದ ಪ್ರಶಸ್ತಿ ಪ್ರದಾನ ಸಮಿತಿಯ ಕಾರ್ಯದರ್ಶಿ ಎಸ್.ಎಲ್.ಶ್ರೀನಿವಾಸ ಮೂರ್ತಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News