ಜೂ.10: ಸಂದರ್ಶನ ಪ್ರಕ್ರಿಯೆ ಆರಂಭಿಸಲು ಆಗ್ರಹಿಸಿ ಕೆಪಿಎಸ್ಸಿ ಕಚೇರಿ ಮುಂಭಾಗ ಬಿಜೆಪಿ ಧರಣಿ

Update: 2019-06-09 17:26 GMT

ಬೆಂಗಳೂರು, ಜೂ. 9: ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್ಸಿ) ನಡೆಸಿದ ಕೆಎಎಸ್ ಪರೀಕ್ಷೆಯ ಸಂದರ್ಶನ ಪ್ರಕ್ರಿಯೆ ಕೂಡಲೇ ಆರಂಭಿಸಲು ಆಗ್ರಹಿಸಿ ನಾಳೆ(ಜೂ.10) ಇಲ್ಲಿನ ಕೆಪಿಎಸ್ಸಿ ಕಚೇರಿ ಮುಂಭಾಗದಲ್ಲಿ ಬಿಜೆಪಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದೆ.

2015ನೆ ಸಾಲಿನ ಕೆಎಎಸ್ ಪರೀಕ್ಷೆಗಾಗಿ 2017ರ ಮೇ 12ರಂದು ಅಧಿಸೂಚನೆ ಪ್ರಕಟಿಸಲಾಗಿದೆ. ಆಗಸ್ಟ್ 18ರಂದು ಪೂರ್ವಭಾವಿ ಪರೀಕ್ಷೆಗಳು ನಡೆದು ಡಿ.22ಕ್ಕೆ ಮುಖ್ಯ ಪರೀಕ್ಷೆಗಳು ಪೂರ್ಣಗೊಂಡಿವೆ. ಆದರೆ, ಫಲಿತಾಂಶಗಳು ಆ ವರ್ಷ ಪ್ರಕಟಗೊಂಡಿಲ್ಲ ಎಂದು ಆರೋಪಿಸಲಾಗಿದೆ.

2018ರ ಆಗಸ್ಟ್ ತಿಂಗಳಿನಲ್ಲಿ ಆಯೋಗದ ಅಧ್ಯಕ್ಷರು, ಮುಖ್ಯ ಕಾರ್ಯದರ್ಶಿ ಸೇರಿದಂತೆ ಇನ್ನಿತರರ ಜತೆ ಸಮಾಲೋಚನೆ ನಡೆಸಿ, ನವೆಂಬರ್‌ನಲ್ಲಿ ಮುಖ್ಯಮಂತ್ರಿ ಪತ್ರ ಬರೆದರೂ, ಫಲಿತಾಂಶ ಪ್ರಕಟಿಸಿಲ್ಲ ಎಂದು ಮಾಜಿ ಸಚಿವ ಸುರೇಶ್‌ ಕುಮಾರ್ ದೂರಿದ್ದಾರೆ.

2019ರ ಜ.28ರಂದು ಫಲಿತಾಂಶ ಪ್ರಕಟವಾಗಿದೆ. ಆದರೆ, ಮುಂದಿನ ಹಂತದ ಸಂದರ್ಶನಗಳನ್ನು 6 ತಿಂಗಳಾದರೂ ಕರೆದಿಲ್ಲ. ಮೊದಲು ಚುನಾವಣಾ ನೀತಿ ಸಂಹಿತೆಯ ನೆಪವನ್ನು ಹೇಳಲಾಗುತ್ತಿತ್ತು. ಈಗ ಚುನಾವಣೆ ಮುಗಿದು ಫಲಿತಾಂಶವೂ ಪ್ರಕಟಗೊಂಡಿದೆ. ಆದರೂ ಇನ್ನು ಸಂದರ್ಶನದ ವೇಳಾಪಟ್ಟಿ ಪ್ರಕಟಗೊಂಡಿಲ್ಲ ಎಂದು ಆರೋಪಿಸಲಾಗಿದೆ.

ಕೆಪಿಎಸ್ಸಿ ವಿಳಂಬ ನೀತಿಯಿಂದ ಅಭ್ಯರ್ಥಿಗಳಲ್ಲಿ ಆತಂಕ, ಹತಾಶೆಗೆ ಸಿಲುಕಿದ್ದು, ಅಭ್ಯರ್ಥಿ ಜೊತೆಗೂಡಿ ಜೂ.10ರ ಬೆಳಗ್ಗೆ 10.30ಕ್ಕೆ ಕೆಪಿಎಸ್ಸಿ ಕಚೇರಿ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಗುವುದು. ಸಂದರ್ಶನದ ವೇಳಾಪಟ್ಟಿ ಪ್ರಕಟಿಸಬೇಕು ಮತ್ತು ಪಾರದರ್ಶಕವಾಗಿ ಸಂದರ್ಶನ ನಡೆಯಬೇಕೆಂದು ಸುರೇಶ್‌ಕುಮಾರ್ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News