ಹೆತ್ತವರಿಗೊಂದು ಪತ್ರ: ಮನಮುಟ್ಟುವ ಲೇಖನ

Update: 2019-06-09 17:58 GMT

ನಾನು ಬೆಂಗಳೂರು ಅಥವಾ ಮೂಡಿಗೆರೆಯ ಮನೆಯಲ್ಲಿ ಇದ್ದಾಗಲೆಲ್ಲಾ ಬೆಳಗ್ಗೆ ಮನೆಯ ಎದುರು ಬಾಗಿಲನ್ನು ನಾನೇ ತೆರದು ವಾರ್ತಾಭಾರತಿ ಪತ್ರಿಕೆಯನ್ನು ಬಾಗಿಲ ಬಳಿ ಹುಡುಕುತ್ತೇನೆ. ಅದಾಗಲೇ ಪತ್ರಿಕೆ ಮನೆಯ ಬಾಗಿಲ ಬಳಿ ಬಂದು ಬಿದ್ದಿರುತ್ತದೆ. ವಾರ್ತಾಭಾರತಿ ಪತ್ರಿಕೆಯನ್ನು ತಲೆಯಿಂದ ಬುಡದವರೆಗೆ ಓದಿ ಬಳಿಕ ವ್ಯಾನಿಟಿ ಬ್ಯಾಗಿನಲ್ಲಿ ಜೋಪಾನವಾಗಿಟ್ಟುಕೊಳ್ಳುತ್ತೇನೆ.

ಏಕೆಂದರೆ 'ವಾರ್ತಾಭಾರತಿ' ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು, ಸಂಪಾದಕೀಯ ಹಾಗೂ ಲೇಖನಗಳು ಸ್ವತಃ ನಾನು ಬೆರಗಾಗುವಂತೆ ಇರುತ್ತವೆ. ಕೋಮುವಾದದ ಮಾರುಕಟ್ಟೆಗೆ ಇನ್ನಷ್ಟು ಕೋಮುವಾದದ ಸರಕುಗಳನ್ನು ತುಂಬಿ ಪ್ರತಿದಿನ ತರುವ ತುತ್ತೂರಿ ಪತ್ರಿಕೆಗಳ ಮಧ್ಯೆ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ಹಾಗೂ ಅವರ ಆಶಯಗಳನ್ನು ಎತ್ತಿಹಿಡಿದು ಸುಸ್ಥಿರ ಸಮಾಜದ ಆಶಯಗಳನ್ನು ಎತ್ತಿಹಿಡಿಯುವ ಪ್ರಯತ್ನದಲ್ಲಿ ವಾರ್ತಾಭಾರತಿ ಪತ್ರಿಕೆ ಸದಾ ಮುಂದಿರುವುದು ಹೆಮ್ಮೆಯ ವಿಚಾರವಾಗಿದೆ.

ದಿನಾಂಕ 7.06.2019 ಶುಕ್ರವಾರದಂದು ಶಿಕ್ಷಕನಿಂದ ನವ ಭಾರತದ ವಿದ್ಯಾರ್ಥಿಗಳ ಹೆತ್ತವರಿಗೊಂದು ಪತ್ರ ಎಂಬ ತಲೆ ಬರಹದಡಿಯಲ್ಲಿ ವಾರ್ತಾಭಾರತಿ ಸಂಪಾದಕೀಯ ವಿಭಾಗದ ಪುಟದಲ್ಲಿ ಪ್ರಕಟವಾದ ರೋಹಿತ್ ಕುಮಾರ್ ಎಂಬವರ ಲೇಖನ ಓದುತ್ತಿದ್ದಾಗ ನಿಜಕ್ಕೂ ನನಗೆ ಗೊತ್ತಿಲ್ಲದಂತೆ ನನ್ನ ಕಣ್ಣುಗಳಲ್ಲಿ ನೀರು ತರಿಸಿದೆ.

‘ಹಳೆಯ ಭಾರತದ ಅವಧಿ ಸದ್ಯಕ್ಕೆ ಕೊನೆಗೊಂಡು ಹೊಸ ಭಾರತ ನಿರ್ಮಾಣವಾಗಿದೆ. ಈ ಭಾರತವನ್ನು ಮಕ್ಕಳ ಹೆತ್ತವರು ಒಪ್ಪುತ್ತಾರೋ ಗೊತ್ತಿಲ್ಲ, ಆದರೆ ನನ್ನ ಶಿಷ್ಯರಿಗೆ ಈ ಭಾರತ ಸುಸ್ಥಿರವಲ್ಲ. ದ್ವೇಷಿಸುವುದು ತಪ್ಪು, ಜಾತಿ ತಪ್ಪು, ಇತರರನ್ನು ಕೆಟ್ಟದಾಗಿ ಬಿಂಬಿಸುವುದು ತಪ್ಪು, ಅವಮಾನಿಸುವುದು ತಪ್ಪು, ಹಿಂಸೆ ತಪ್ಪು’ ಎಂದು ಅವರು ಬರೆದಿದ್ದಾರೆ. ನಿಜಕ್ಕೂ ಒಪ್ಪುವಂತಹ ಹಾಗೂ ಕಲಿಯುವಂತಹ ವಿಚಾರವನ್ನೇ ಕಿಶೋರ್ ಕುಮಾರ್ ತಮ್ಮ ಲೇಖನದಲ್ಲಿ ಕಾಣಿಸಿದ್ದಾರೆ. ಇಂತಹ ಲೇಖನಗಳಿಂದಾಗಿ ಸಮಾಜ ಒಂದಷ್ಟು ಕೋಮುವಾದದ ಕ್ರೂರತೆಯಿಂದ ಹೊರಬರಲು ಸಾಧ್ಯವಿದೆ. ಈ ಲೇಖನ ಓದುಗರ ಅಂತರಂಗ ಮುಟ್ಟುವಂತಾಗಬೇಕು. ಇಂತಹ ಮನಮುಟ್ಟುವ ಲೇಖನವನ್ನು ಬರೆದ ರೋಹಿತ್‌ಕುಮಾರ್ ಅವರಿಗೆ ನನ್ನದೊಂದು ಸಲಾಂ. ಇಂತಹ ಲೇಖನಗಳು ಹಾಗೂ ಕೋಮು ವಾದದ ಕಪಿಮುಷ್ಟಿಯಿಂದ ಸಮಾಜವನ್ನು ಪಾರುಮಾಡುವಂತಹ ಮತ್ತಷ್ಟು ಉತ್ತಮ ಬರಹಗಳು ಹಾಗೂ ನೈಜ ಸುದ್ದಿಗಳನ್ನು ಹೊತ್ತು ‘ವಾರ್ತಾಭಾರತಿ’ ಮುನ್ನುಗ್ಗಿ ಬರಲಿ ಎಂಬುದೇ ನನ್ನ ಹಾರೈಕೆ.

Writer - -ಡಾ. ಮೋಟಮ್ಮ, ಮಾಜಿ ಸಚಿವರು

contributor

Editor - -ಡಾ. ಮೋಟಮ್ಮ, ಮಾಜಿ ಸಚಿವರು

contributor

Similar News