ತೆಂಡುಲ್ಕರ್ ದಾಖಲೆ ಮುರಿದ ರೋಹಿತ್

Update: 2019-06-09 18:42 GMT

ಲಂಡನ್, ಜೂ.9: ಆಸ್ಟ್ರೇಲಿಯ ವಿರುದ್ಧ ದಿ ಓವಲ್‌ನಲ್ಲಿ ರವಿವಾರ ನಡೆದ ಐಸಿಸಿ ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಭಾರತದ ಆರಂಭಿಕ ಆಟಗಾರ ರೋಹಿತ್ ಶರ್ಮಾ ಬ್ಯಾಟಿಂಗ್ ದಂತಕತೆ ಸಚಿನ್ ತೆಂಡುಲ್ಕರ್ ಅವರ ದಾಖಲೆಯೊಂದನ್ನು ಮುರಿದರು.

 ಮುಂಬೈ ದಾಂಡಿಗ ರೋಹಿತ್ ಆಸ್ಟ್ರೇಲಿಯ ವಿರುದ್ಧ ಏಕದಿನ ಪಂದ್ಯದಲ್ಲಿ ಅತ್ಯಂತ ವೇಗವಾಗಿ 2,000 ರನ್ ಪೂರೈಸಿದ ಸಾಧನೆ ಮಾಡಿದ್ದಾರೆ. ಒಂದು ನಿರ್ದಿಷ್ಟ ತಂಡದ ವಿರುದ್ದ ಅತ್ಯಂತ ವೇಗವಾಗಿ ಈ ಮೈಲುಗಲ್ಲು ತಲುಪಿದರು. ಆಸೀಸ್ ವಿರುದ್ಧ 2,000 ರನ್ ಪೂರೈಸಲು ರೋಹಿತ್‌ಗೆ ಇಂದು ಕೇವಲ 20 ರನ್ ಅಗತ್ಯವಿತ್ತು. 13ನೇ ಓವರ್‌ನಲ್ಲಿ ಮ್ಯಾಕ್ಸ್‌ವೆಲ್ ಬೌಲಿಂಗ್‌ನಲ್ಲಿ ಬೌಂಡರಿ ಬಾರಿಸುವುದರೊಂದಿಗೆ ತನ್ನದೇ ಶೈಲಿಯಲ್ಲಿ 2 ಸಾವಿರ ರನ್ ಪೂರೈಸಿದರು. ತೆಂಡುಲ್ಕರ್ ಬಳಿಕ ಆಸೀಸ್ ವಿರುದ್ಧ 2 ಸಾವಿರಕ್ಕೂ ಅಧಿಕ ರನ್ ಗಳಿಸಿದ ಭಾರತದ ಎರಡನೇ ಕ್ರಿಕೆಟಿಗ ಎನಿಸಿಕೊಂಡರು.

ರೋಹಿತ್ ಆಸೀಸ್ ವಿರುದ್ಧ ಕೇವಲ 37 ಇನಿಂಗ್ಸ್‌ಗಳಲ್ಲಿ 2,000 ರನ್ ಪೂರ್ಣಗೊಳಿಸಿದರು. ಈ ಮೂಲಕ 40 ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದ ಸಚಿನ್ ತೆಂಡುಲ್ಕರ್‌ರ ದಾಖಲೆಯೊಂದನ್ನು ಮುರಿದರು. ತೆಂಡುಲ್ಕರ್, ವೆಸ್ಟ್ ಇಂಡೀಸ್‌ನ ವಿವಿ ರಿಚರ್ಡ್ಸ್ ಹಾಗೂ ಡೆಸ್ಮಂಡ್ ಹೇನ್ಸ್ ಬಳಿಕ ಈ ಸಾಧನೆ ಮಾಡಿದ ವಿಶ್ವದ ನಾಲ್ಕನೇ ಕ್ರಿಕೆಟಿಗನಾಗಿದ್ದಾರೆ.

ಇದೀಗ ರೋಹಿತ್ ಅವರು ಸಚಿನ್(9) ಹಾಗೂ ವಿರಾಟ್ ಕೊಹ್ಲಿ(8) ನಂತರ ಆಸೀಸ್ ಎದುರು ಗರಿಷ್ಠ ಶತಕ(7) ಗಳಿಸಿದ ಭಾರತದ ಮೂರನೇ ಆಟಗಾರನಾಗಿದ್ದಾರೆ. ರೋಹಿತ್ ರವಿವಾರ ನಡೆದ ವಿಶ್ವಕಪ್ ಪಂದ್ಯದಲ್ಲಿ 70 ಎಸೆತಗಳಲ್ಲಿ 57 ರನ್ ಗಳಿಸಿ ನಥಾನ್ ಕೌಲ್ಟರ್ ನೀಲ್ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು. ಶಿಖರ್ ಧವನ್‌ರೊಂದಿಗೆ ಮೊದಲ ವಿಕೆಟ್‌ಗೆ 127 ರನ್ ಜೊತೆಯಾಟ ನಡೆಸಿ ಭದ್ರಬುನಾದಿ ಹಾಕಿಕೊಟ್ಟರು.

ಆಸೀಸ್ ವಿರುದ್ಧ 2,000 ರನ್ ಗಳಿಸಿದ ನಾಲ್ಕನೇ ದಾಂಡಿಗ

ರೋಹಿತ್(2,003)ಆಸ್ಟ್ರೇಲಿಯ ವಿರುದ್ಧ 2,000ಕ್ಕೂ ಅಧಿಕ ರನ್ ಗಳಿಸಿದ ವಿಶ್ವದ ನಾಲ್ಕನೇ ದಾಂಡಿಗನೆಂಬ ಕೀರ್ತಿಗೆ ಭಾಜನರಾದರು. ತೆಂಡುಲ್ಕರ್(3,077) ಆಸೀಸ್ ವಿರುದ್ಧ ಗರಿಷ್ಠ ರನ್ ಗಳಿಸಿದ್ದಾರೆ. ಡೆಸ್ಮಂಡ್ ಹೇನ್ಸ್(2,262) ಹಾಗೂ ವಿವಿ ರಿಚರ್ಡ್ಸ್(2,187)2 ಹಾಗೂ 3ನೇ ಸ್ಥಾನದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News