ಮೊದಲ ಗೆಲುವಿಗೆ ದಕ್ಷಿಣ ಆಫ್ರಿಕದ ಪ್ರಯತ್ನ

Update: 2019-06-09 18:46 GMT

ಸೌತಾಂಪ್ಟನ್, ಜೂ.9: ವಿಶ್ವಕಪ್ ಟೂರ್ನಿಯಲ್ಲಿ ಸತತ ಮೂರು ಪಂದ್ಯಗಳಲ್ಲಿ ಸೋತು ಆಘಾತಗೊಂಡಿರುವ ದಕ್ಷಿಣ ಆಫ್ರಿಕ ಮೊದಲ ಗೆಲುವಿಗಾಗಿ ಎದುರು ನೋಡುತ್ತಿದ್ದು, ಸೋಮವಾರ ನಡೆಯಲಿರುವ 15ನೇ ಪಂದ್ಯದಲ್ಲಿ ವೆಸ್ಟ್‌ಇಂಡೀಸ್‌ನ್ನು ಎದುರಿಸಲಿದೆ.

ದಕ್ಷಿಣ ಆಫ್ರಿಕ ಸೆಮಿಫೈನಲ್‌ನಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ಇನ್ನುಳಿದ ಎಲ್ಲಾ ಪಂದ್ಯಗಳಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಆಫ್ರಿಕದ ಬೌಲಿಂಗ್ ಉತ್ತಮವಾಗಿದೆ. ಆದರೆ ಬ್ಯಾಟಿಂಗ್‌ನಲ್ಲಿ ಸುಧಾರಣೆ ಕಂಡುಕೊಳ್ಳಬೇಕಾಗಿದೆ.

 ಬೌಲರ್ ಲುಂಗಿ ಗಿಡಿ ಗಾಯಾಳುವಾಗಿರುವ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ಬೆಯುರಾನ್ ಹೆಂಡ್ರಿಕ್ಸ್‌ನ್ನು ಅಂತಿಮ ಹನ್ನೊಂದರಲ್ಲಿ ಸೇರಿಸಿಕೊಳ್ಳುವ ನಿರ್ಧಾರವನ್ನು ನಾಯಕ ಪ್ಲೆಸಿಸ್ ಕೈಗೊಂಡಿದ್ದರು, ಅವರ ಲೆಕ್ಕ್ಕಾಚಾರ ಸರಿಯಾಗಿದೆ. ಹೆಂಡ್ರಿಕ್ಸ್ ಚೆನ್ನಾಗಿ ಆಡಿದ್ದಾರೆ.

ವೆಸ್ಟ್‌ಇಂಡೀಸ್ ತಂಡ ಆಡಿರುವ ಮೂರು ಪಂದ್ಯಗಳ ಪೈಕಿ 2ರಲ್ಲಿ ಜಯ ಗಳಿಸಿದೆ. ಆಸ್ಟ್ರೇಲಿಯ ವಿರುದ್ಧ ವಿಂಡೀಸ್ ಸೋಲು ಅನುಭವಿಸಿದೆ. ದಕ್ಷಿಣ ಆಫ್ರಿಕದ ಬೌಲಿಂಗ್ ವಿಭಾಗದಂತೆಯೇ ವಿಂಡೀಸ್‌ನ ಬೌಲಿಂಗ್ ವಿಭಾಗ ಬಲಿಷ್ಠವಾಗಿದೆ. ತಂಡದಲ್ಲಿ ಕ್ರಿಸ್ ಗೇಲ್ ಅವರಂತಹ ಟ್ವೆಂಟಿ-20 ಕ್ರಿಕೆಟ್‌ನ ಅಂತರ್‌ರಾಷ್ಟ್ರೀಯ ಬ್ಯಾಟಿಂಗ್ ಸ್ಟಾರ್‌ಗಳಿದ್ದಾರೆ. ಕಳೆದ 5 ಪಂದ್ಯಗಳಲ್ಲಿ ಪ್ರದರ್ಶನ: ದಕ್ಷಿಣ ಆಫ್ರಿಕ ಆಡಿರುವ ಕಳೆದ ಐದು ಪಂದ್ಯಗಳ ಪೈಕಿ ಕೇವಲ ಒಂದರಲ್ಲಿ ಮಾತ್ರ ಜಯ ಗಳಿಸಿದೆ. ವಿಶ್ವಕಪ್‌ನ ಮೊದಲು ವಿಂಡೀಸ್ ಎರಡು ಪಂದ್ಯಗಳನ್ನು ಆಡಿತ್ತು. ವೆಸ್ಟ್‌ಇಂಡೀಸ್ ಆಡಿರುವ ಐದು ಪಂದ್ಯಗಳಲ್ಲಿ ಮೂರು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ತಂಡದ ಸಮಾಚಾರ : ದಕ್ಷಿಣ ಆಫ್ರಿಕ ತಂಡಕ್ಕೆ ಲುಂಗಿ ಗಿಡಿ ಫಿಟ್ನೆಸ್ ಸಮಸ್ಯೆಯಿಂದ ಹೊರ ಬಂದರೆ ವಿಂಡೀಸ್ ವಿರುದ್ಧ ನಡೆಯಲಿರುವ ಪಂದ್ಯಕ್ಕೆ ಅಂತಿಮ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ. ಗಿಡಿ ವಾಪಸಾದರೆ ಹೆಂಡ್ರಿಕ್ಸ್ ಸ್ಥಾನ ತೆರವುಗೊಳಿಸಬೇಕಾಗುತ್ತದೆ. ವೆಸ್ಟ್ ಇಂಡೀಸ್‌ನ ಆ್ಯಂಡ್ರೆ ರಸೆಲ್ ಗಾಯದ ಸಮಸ್ಯೆ ಎದುರಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News