ಬೆಂಗಳೂರಿನ ಐಎಂಎ ಸಂಸ್ಥೆಯ ಅಧ್ಯಕ್ಷರ ಬಗ್ಗೆ ವದಂತಿ: ಹೂಡಿಕೆದಾರರ ಪರದಾಟ

Update: 2019-06-10 12:45 GMT

ಬೆಂಗಳೂರು, ಜೂ.10: ಹಲಾಲ್ ಆದಾಯದ ಹೆಸರಿನಲ್ಲಿ ಸಾರ್ವಜನಿಕರಿಂದ ಚಿನ್ನದ ಮೇಲೆ ಹೂಡಿಕೆ ಮಾಡಿಸಿಕೊಂಡು, ಲಾಭಾಂಶ ನೀಡುತ್ತಿದ್ದ ಐಎಂಎ ಸಮೂಹ ಸಂಸ್ಥೆಗಳ ಅಧ್ಯಕ್ಷ ಮುಹಮ್ಮದ್ ಮನ್ಸೂರ್ ಖಾನ್ ಎಂದು ತನ್ನನ್ನು ಪರಿಚಯಿಸಿಕೊಂಡಿರುವ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿ, ನಗರ ಪೊಲೀಸ್ ಆಯುಕ್ತರಿಗೆ ಕಳುಹಿಸಿರುವ ಆಡಿಯೋ ಸಂದೇಶವೊಂದು ವೈರಲ್ ಆಗಿದೆ.

‘’ಈ ಸಂದೇಶವನ್ನು ನೀವು ಕೇಳುತ್ತಿರುವಾಗ ನಾನು ನನ್ನ ಜೀವನವನ್ನು ಅಂತ್ಯಗೊಳಿಸಿರುತ್ತೇನೆ. 12-13 ವರ್ಷಗಳಲ್ಲಿ ನಾನು ಸಂಸ್ಥೆಯನ್ನು ಕಟ್ಟಲು ಬಹಳಷ್ಟು ಶ್ರಮ ಪಟ್ಟಿದ್ದೇನೆ. ಆದರೆ, ಅಧಿಕಾರಿಗಳು, ರಾಜಕಾರಣಿಗಳು, ಎಲ್ಲರಿಗೂ ಲಂಚ ನೀಡಿ, ನೀಡಿ ಸಾಕಾಗಿ ಹೋಗಿದೆ. ಶಿವಾಜಿನಗರದ ಶಾಸಕರ‌ ಬಳಿ 400 ಕೋಟಿ ರೂ. ಇದೆ. ನನ್ನ ಕುಟುಂಬಕ್ಕೆ ಪ್ರಾಣಾಪಾಯವಿದೆ. ಈ ಆಡಿಯೋ ನಿಮಗೆ ತಲುಪುವ ವರೆಗೆ ನಾನು ಇರುವುದಿಲ್ಲ. ನನ್ನ ಬಳಿ 500 ಕೋಟಿ ರೂ. ಆಸ್ತಿಯಿದೆ, ಚಿನ್ನ ಇದೆ. ಅದನ್ನು ವಶಪಡಿಸಿಕೊಂಡು ಹೂಡಿಕೆದಾರರಿಗೆ ನೀಡಿ ಎಂದು ಮನವಿ ಮಾಡಿಕೊಳ್ಳುತ್ತೇನೆ. ಬಿಡಿಎ ಕುಮಾರ್ ಬಳಿ ನನ್ನ 5 ಕೋಟಿ ರೂ.ಇದೆ. ಶಿವಾಜಿ ನಗರದ ಶಾಸಕರ ಬಳಿ ಇರುವ ಹಣವನ್ನು ಜನರಿಗೆ ಹಂಚಿಕೆ ಮಾಡಿ ಎಂದು ಮನವಿ ಮಾಡಿಕೊಳ್ಳುತ್ತೇನೆ’’ ಎಂದು ಪೊಲೀಸ್ ಆಯುಕ್ತರಿಗೆ ಬಂದಿರುವ ಆಡಿಯೋದಲ್ಲಿ ಕೋರಲಾಗಿದೆ.

ಈ ನಡುವೆ ಮುಹಮ್ಮದ್ ಮನ್ಸೂರ್ ಖಾನ್ ಎಲ್ಲಿದ್ದಾರೆ ಅನ್ನುವ ಮಾಹಿತಿ ಲಭ್ಯವಾಗಿಲ್ಲ. ಬೆಳಗ್ಗೆಯಿಂದಲೇ ಈ ಆಡಿಯೋ ವೈರಲ್ ಆಗುತ್ತಿದ್ದರೂ, ಐಎಂಎ ಸಂಸ್ಥೆಯ ಪದಾಧಿಕಾರಿಗಳಾಗಲಿ, ಮುಹಮ್ಮದ್ ಮನ್ಸೂರ್ ಖಾನ್ ಅವರ ಕುಟುಂಬದ ಸದಸ್ಯರಾಗಲಿ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. . ಶಿವಾಜಿ ನಗರದಲ್ಲಿರುವ ಐಎಂಎ ಆಭರಣ ಮಳಿಗೆ ಸೇರಿದಂತೆ ಅವರ ಕಚೇರಿಗಳಿಗೆ ಬೀಗ ಜಡಿಯಲಾಗಿದೆ.

ಆಡಿಯೋ ಸಂದೇಶದ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಸಂಖ್ಯೆಯಲ್ಲಿ ಜನ ಐಎಂಎ ಕಚೇರಿ ಬಳಿ ಸೇರಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ಏರ್ಪಟ್ಟಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News