ಗಿರೀಶ್ ಕಾರ್ನಾಡ್ ನಾಟಕಗಳಲ್ಲಿ ಸಂಸ್ಕೃತಿಯ ಸೊಬಗಿದೆ: ಎಚ್.ಡಿ.ಕುಮಾರಸ್ವಾಮಿ

Update: 2019-06-10 13:03 GMT
ಗಿರೀಶ್ ಕಾರ್ನಾಡ್

ಬೆಂಗಳೂರು, ಜೂ.10: ಹಿರಿಯ ರಂಗಕರ್ಮಿ ಗಿರೀಶ್ ಕಾರ್ನಾಡ್, ತಮ್ಮ ನಾಟಕಗಳ ಮೂಲಕ ಕನ್ನಡದ ಇತಿಹಾಸ, ಸಾಂಸ್ಕೃತಿಕತೆಯ ಕಂಪನ್ನು ಜಗತ್ತಿನ ಉದ್ದಗಲಕ್ಕೂ ಪಸರಿಸಿದ್ದಾರೆಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಮರಿಸಿದ್ದಾರೆ.

ನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ ಅವರು, ಕಾರ್ನಾಡ್‌ರವರು ಇತಿಹಾಸ, ಪುರಾಣ ಕಥೆಗಳನ್ನು ಆಧರಿಸಿ ಬರೆದ ನಾಟಕಗಳು ಇಂದಿನ ವಸ್ತುಸ್ಥಿತಿಯನ್ನು ವಿಶ್ಲೇಷಿಸುವ ರೀತಿ ಅಪೂರ್ವವಾದದ್ದು ಎಂದು ಬಣ್ಣಿಸಿದ್ದಾರೆ.

ಅವರ ನಾಟಕಗಳು ದೇಶ-ವಿದೇಶದ ಹಲವು ಭಾಷೆಗಳಿಗೆ ಅನುವಾದಗೊಂಡು ಪ್ರದರ್ಶನಗೊಂಡಿವೆ. ಆ ಮೂಲಕ ಕನ್ನಡ ಸಂಸ್ಕೃತಿಯ ಕಂಪನ್ನು ಜಗತ್ತಿನ ಉದ್ದಗಲಕ್ಕೂ ಪಸರಿಸಿದ ಕೀರ್ತಿ ಅವರದು. ಚಲನಚಿತ್ರರಂಗದಲ್ಲಿ ನಟನೆ ಹಾಗೂ ನಿರ್ದೇಶನದಲ್ಲಿ ತಮ್ಮದೇ ಛಾಪು ಮೂಡಿಸಿದರು ಎಂದು ಅವರು ಹೇಳಿದ್ದಾರೆ.

ನಾಡಿನ ಸಾಂಸ್ಕೃತಿಕ ವಲಯಕ್ಕೆ ಹೊಸ ಹೊಳಪು ನೀಡಿದ ಅಗಾಧ ಪ್ರತಿಭೆಯನ್ನು ನಾವು ಇಂದು ಕಳೆದುಕೊಂಡಿರುವುದು ಅತ್ಯಂತ ದುಃಖದ ಸಂಗತಿ ಎಂದು ಅವರು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಡಿ.ಕೆ.ಶಿವಕುಮಾರ್ ಸಂತಾಪ ಸೂಚಿಸಿ, ಹಿರಿಯ ನಾಟಕಕಾರ ಗಿರೀಶ್ ಕಾರ್ನಾಡ್ ಅವರ ಸಾಹಿತ್ಯ, ನಾಟಕ ಹಾಗೂ ಸಿನಿಮಾ ಕ್ಷೇತ್ರಗಳಲ್ಲಿ ನೀಡಿದ ಕೊಡುಗೆಗಳು ಸ್ಮರಣೀಯ. ಅವರ ಆಲೋಚನೆಗಳು, ಚಿಂತನೆಗಳು ನಮ್ಮ ಸಮಾಜಕ್ಕೆ ಅಗತ್ಯವಾಗಿವೆ ಎಂದು ಸ್ಮರಿಸಿದರು.

ಗಿರೀಶ್ ಕಾರ್ನಾಡ್‌ರವರು ಕೇವಲ ಬರವಣಿಗೆ ಮಾತ್ರವಲ್ಲ, ಅಭಿನಯದಲ್ಲೂ ಸಾಕಷ್ಟು ಹೆಸರು ಮಾಡಿದ್ದವರು. ಕನ್ನಡ ಸೇರಿದಂತೆ ದಕ್ಷಿಣ ಭಾರತದ ಹಲವು ಭಾಷೆ ಹಾಗೂ ಹಿಂದಿ ಚಿತ್ರಗಳನ್ನೂ ನಟಿಸಿ ವಿಭಿನ್ನ ನಟ ಎಂಬ ಖ್ಯಾತಿ ಪಡೆದವರು. ಹೀಗೆ ನಮ್ಮ ಸಾಂಸ್ಕೃತಿಕ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡಿರುವ ಕಾರ್ನಾಡರು ಸದಾ ನಮ್ಮೊಂದಿಗೆ ಉಳಿಯಲಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಅಗಲಿಕೆಯ ನೋವನ್ನು ಅಭಿಮಾನಿಗಳು, ಕುಟುಂಬ ಸದಸ್ಯರಿಗೆ ಸಹಿಸಿಕೊಳ್ಳುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಅವರು ಹೇಳಿದ್ದಾರೆ.

ಕನ್ನಡದ ಹೆಸರಾಂತ ಲೇಖಕ, ರಂಗಭೂಮಿ ತಜ್ಞ, ನಾಟಕಕಾರ, ಪ್ರಖರ ವಿಚಾರವಾದಿ, ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್‌ಅವರ ನಿಧನ ರಾಜ್ಯದ ಸಾಹಿತ್ಯ, ಸಾಂಸ್ಕೃತಿಕ, ಪ್ರಗತಿಪರ ವಲಯಕ್ಕೆ ತುಂಬಲಾರದ ನಷ್ಟವೆಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ.

ನಾಟಕಕಾರ ಗಿರೀಶ್‌ ಕಾರ್ನಾಡ್ ತಾವು ನಂಬಿದ್ದ ಸಿದ್ಧಾಂತಗಳನ್ನು ಎಂದಿಗೂ ರಾಜಿ ಮಾಡಿಕೊಂಡವರಲ್ಲ. ದೇಶದಲ್ಲಿ ಸಾಮಾಜಿಕ ಮೌಲ್ಯಗಳಿಗೆ ಕಂಟಕ ಬಂದಾಗ ಬೀದಿಯಲ್ಲಿ ನಿಂತು ಪ್ರತಿಭಟನೆ ನಡೆಸುವಷ್ಟು ದಿಟ್ಟತನ ಅವರಲ್ಲಿ ಯಾವಾಗಲು ಇತ್ತು. ಅವರು ಕನ್ನಡ ಹಾಗೂ ದೇಶದ ನಾಟಕ ರಂಗಕ್ಕೆ ಹೊಸತನ ನೀಡುವುದರಲ್ಲಿ ಸದಾ ಶ್ರಮಿಸಿದವರು.

-ಬರಗೂರು ರಾಮಚಂದ್ರಪ್ಪ, ಹಿರಿಯ ಸಾಹಿತಿ

ನಾಟಕಕಾರ ಗಿರೀಶ್‌ಕಾರ್ನಾಡ್‌ರನ್ನು ನನ್ನ ಗುರು ಎನ್ನಲು ಅತೀವ ಹೆಮ್ಮೆ ಆಗುತ್ತದೆ. ರಂಗಭೂಮಿ, ಸಿನೆಮಾದಲ್ಲಿ ಕೆಲಸ ಮಾಡುವವರು ಕೇವಲ ನಟನೆ, ನಿರ್ದೇಶನಕ್ಕೆ ಮಾತ್ರ ಸೀಮಿತವಾಗದೆ, ಎಲ್ಲ ಕೆಲಸಗಳನ್ನು ಕರಗತ ಮಾಡಿಕೊಂಡಿರಬೇಕೆಂದು ನಂಬಿದ್ದರು. ಹೀಗಾಗಿ ನನ್ನನ್ನು ಎಡಿಟಿಂಗ್ ಕಲಿಯುವುದಕ್ಕಾಗಿ ಚೆನ್ನೈಗೆ ಕಳುಹಿಸಿದ್ದರು. ಹೀಗೆ ಹಲವಾರು ಕಲಾವಿದರ ಬೆಳವಣಿಗೆಯಲ್ಲಿ ತಮ್ಮದೆ ಆದ ರೀತಿಯಲ್ಲಿ ಕೊಡುಗೆ ನೀಡಿದ್ದಾರೆ.

-ಟಿ.ಎಸ್.ನಾಗಾಭರಣ, ಸಿನೆಮಾ ನಿರ್ದೇಶಕ

ಹಿರಿಯ ಸಾಹಿತಿ ಗಿರೀಶ್‌ ಕಾರ್ನಾಡ್ ಕೇವಲ ರಾಜ್ಯ, ದೇಶಕ್ಕೆ ಮಾತ್ರವಲ್ಲ, ಅಂತರ್‌ರಾಷ್ಟ್ರೀಯ ಮಟ್ಟದ ನಾಟಕಕಾರರೆಂದು ಜನಪ್ರಿಯಗೊಂಡವರು. ಅವರಿಂದ ರಂಗಭೂಮಿ ಹಾಗೂ ಸಿನೆಮಾ ಜಗತ್ತು ಸಾಕಷ್ಟು ಕಲಿತಿದೆ. ಸದಾ ಕ್ರಿಯಾಶೀಲರಾಗಿದ್ದ ಅವರು, ಅನಾರೋಗ್ಯದ ನಡುವೆಯು ಸದಾ ನಾಟಕಗಳ ರಚನೆಯಲ್ಲಿ ನಿರತರಾಗಿದ್ದರು, ಅವರ ನಿಧನದಿಂದ ರಾಜ್ಯ ಹಾಗೂ ದೇಶದ ರಂಗಭೂಮಿ, ಸಿನೆಮಾ ಕ್ಷೇತ್ರಕ್ಕೆ ಅಪಾರ ನಷ್ಟ.

-ಅನಂತನಾಗ್, ಹಿರಿಯ ನಟ

ಗಿರೀಶ್‌ ಕಾರ್ನಾಡ್‌ರ ನಾಟಕಗಳ ರಚನೆಯು ವಿಶಿಷ್ಟತೆ ಹಾಗೂ ಸೂಕ್ಷ್ಮತೆಯಿಂದ ಕೂಡಿದೆ. ನಮ್ಮ ನಾಡಿನ ಐತಿಹಾಸಿಕ, ಪರಂಪರೆಯ ವಸ್ತುವಿಷಯಗಳಿಗೆ ಆಧುನಿಕ ಸ್ಪರ್ಶ ನೀಡುವ ಮೂಲಕ ಜೀವಂತವಾಗಿಟ್ಟಿದ್ದರು. ಅವರು ನಮ್ಮಿಂದಿಗೆ ದೈಹಿಕವಾಗಿ ಇಲ್ಲದಿರಬಹುದು. ಆದರೆ, ಅವರ ನಾಟಕ, ಸಾಹಿತ್ಯದ ಮೂಲಕ ನಮ್ಮಿಂದಿಗೆ ಸಂವಹನ ನಡೆಸುತ್ತಿರುತ್ತಾರೆ.

-ಮಂಡ್ಯ ರಮೇಶ್, ರಂಗಭೂಮಿ ಕಲಾವಿದ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News