ಆಸ್ತಿ ವಿಚಾರವಾಗಿ ಸಹೋದರನ ಕೊಲೆ ಪ್ರಕರಣ: ಇಬ್ಬರ ಸೆರೆ

Update: 2019-06-10 14:28 GMT

ಬೆಂಗಳೂರು, ಜೂ.10: ಆಸ್ತಿ ವಿಚಾರವಾಗಿ ಸಹೋದರನನ್ನು ಕೊಲೆಗೈದಿದ್ದ ಆರೋಪ ಪ್ರಕರಣವನ್ನು ಭೇದಿಸಿರುವ ಆನೇಕಲ್ ಠಾಣಾ ಪೊಲೀಸರು, ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಚೊಕ್ಕರಸನಹಳ್ಳಿಯ ಗೋವರ್ಧನ್(21) ಹಾಗೂ ಸಿ.ಕೆ. ಪಾಳ್ಯದ ವಿನೋದ್(21) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಆನೇಕಲ್‌ನ ಗಿರಿಜಾ ಶಂಕರ್ ಲೇಔಟ್‌ನ ಪದ್ಮನಾಭ (27) ಅವರನ್ನು ಆನೇಕಲ್‌ನ ಹೊರವಲಯದ ಬಿಎಂಟಿಸಿಗೆ ಸೇರಿದ ಜಮೀನಿನಲ್ಲಿ ಕೊಲೆಗೈದು ದುಷ್ಕರ್ಮಿಗಳು ಪರಾರಿಯಾಗಿದ್ದರು. ಟೆಂಟ್ ಹೌಸ್‌ನಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ಗೋವರ್ಧನ್ ಅವರ ತಂದೆ ನಾಗರಾಜ್ ಇಬ್ಬರನ್ನು ವಿವಾಹವಾಗಿದ್ದರು. ಮೊದಲ ಪತ್ನಿಯ ಮಗನಾಗಿದ್ದ, ಕೊಲೆಯಾದ ಪದ್ಮನಾಭ್‌ಗೆ ಅವರು ಆನೇಕಲ್‌ನಲ್ಲಿರುವ ಮನೆ ಬರೆದಿದ್ದು, ಹೆಚ್ಚಿನ ಆಸ್ತಿಯನ್ನು ಆತನಿಗೆ ನೀಡಿದ್ದಾರೆ ಎನ್ನಲಾಗಿದೆ.

ಎರಡನೇ ಪತ್ನಿಯ ಮಗನಾದ ಗೋವರ್ಧನ್‌ನ ವಿದ್ಯಾಭ್ಯಾಸಕ್ಕೆ ಹಣ ಕೊಡದೆ ಆಸ್ತಿಯನ್ನು ಕೊಡದೇ ತನ್ನ ತಾಯಿಯ ಚಿನ್ನಾಭರಣಗಳನ್ನು ಅಜ್ಜಿ ಮನೆಯಿಂದ ತರುವಂತೆ ಹಿಂಸೆ ನೀಡಿದ್ದರು. ಇದೇ ದ್ವೇಷದಿಂದ ಆಕ್ರೋಶಗೊಂಡ ಗೋವರ್ಧನ್ ಕಳೆದ ಮೇ 28 ರಂದು ರಾತ್ರಿ, ಸಹೋದರ ಪದ್ಮನಾಭ್‌ನನ್ನು ಕಾವಲಹೊಸಹಳ್ಳಿಗೆ ಕರೆದೊಯ್ದು, ಮದ್ಯಪಾನ ಮಾಡಿಸಿ, ವಿನೋದ್, ಶಿವು ಎಂಬುವವರ ಜೊತೆ ಸೇರಿ, ಕುತ್ತಿಗೆ, ಎದೆ, ಹೊಟ್ಟೆ ಭಾಗಗಳಿಗೆ ತಿವಿದು ಕೊಲೆಮಾಡಿದ್ದರು.

ಮೃತದೇಹದ ಗುರುತು ಸಿಗದಂತೆ ತಲೆಮೇಲೆ ಇಟ್ಟಿಗೆ ಕಲ್ಲು ಹಾಕಿ ಬಿಎಂಟಿಸಿ ಬಸ್ ಘಟಕದ ಖಾಲಿಜಾಗದಲ್ಲಿ ಎಸೆದು ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News