ಕಾರ್ನಾಡ್ ಬರೆದ ಪತ್ರ ಬಹಿರಂಗಪಡಿಸಿದ ನಟ ಪ್ರಕಾಶ್ ರಾಜ್: ಪತ್ರದಲ್ಲೇನಿದೆ ಗೊತ್ತೇ ?

Update: 2019-06-10 15:57 GMT

ಬೆಂಗಳೂರು, ಜೂ. 10: ಜ್ಞಾನಪೀಠ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ನಿಧನರಾದ ಹಿನ್ನೆಲೆಯಲ್ಲಿ ಅವರು ಬರೆದಿದ್ದ ಪತ್ರವನ್ನು ನಟ ಪ್ರಕಾಶ್ ರಾಜ್ ತನ್ನ ಟ್ವಿಟ್ಟರ್ ಖಾತೆ ಮೂಲಕ ಬಹಿರಂಗಪಡಿಸಿದ್ದು, ಕಾರ್ನಾಡ್ ಅವರಿಗೆ ಸಂತಾಪ ಸೂಚಿಸಿದ್ದಾರೆ.

ಬಹುಭಾಷಾ ನಟ ಪ್ರಕಾಶ್ ರಾಜ್ ಅವರ 50ನೆ ಹುಟ್ಟುಹಬ್ಬಕ್ಕೆ ಕಾರ್ನಾಡ್ ಅವರು ಪ್ರೀತಿಯಿಂದ ಪತ್ರ ಬರೆದು ಶುಭಕೋರಿದ್ದರು. ಆ ಪತ್ರದ ಪ್ರತಿಯನ್ನು ಪ್ರಕಾಶ್ ರಾಜ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಅವರ ನೆನಪು ಮಾಡಿಕೊಂಡಿದ್ದಾರೆ.

‘ಕನ್ನಡವನ್ನು.. ಕನ್ನಡಿಗರನ್ನು.. ಕರ್ನಾಟಕವನ್ನು.. ಶ್ರೀಮಂತಗೊಳಿಸುತ್ತಾ ಬಾಳಿ ಬದುಕಿದ ಅದಮ್ಯ ಚೇತನ ಕಾರ್ನಾಡರಿಗೆ ನಮನ. ನೀವು ಸಮೃದ್ಧವಾದ, ಸ್ಫೂರ್ತಿದಾಯಕ ಜೀವನವನ್ನು ನಡೆಸಿದ್ದಕ್ಕೆ ಕಾರ್ನಾಡ್‌ಜಿ ನಿಮಗೆ ಧನ್ಯವಾದಗಳು. ನಿಮ್ಮ ಜೊತೆ ನಾನು ಕಳೆದ ಪ್ರತಿ ಕ್ಷಣವೂ ಜೀವಂತವಾಗಿದೆ. ನಿಮ್ಮನ್ನು ನಾನು ಮಿಸ್ ಮಾಡಿಕೊಳ್ಳುತ್ತೇನೆ. ಆದರೆ ನನ್ನ ಜೀವನದಲ್ಲಿ ನಿಮ್ಮ ಆದರ್ಶ ಸದಾ ಪಾಲಿಸುತ್ತೇನೆ’ ಎಂದು ಪ್ರಕಾಶ್ ರಾಜ್ ಟ್ವೀಟ್ ಮಾಡಿದ್ದಾರೆ.

ಪತ್ರದಲ್ಲಿ ಏನಿದೆ: ‘ಪ್ರೀತಿಯ ಪ್ರಕಾಶ್ ರಾಜ್ ನಿಮಗೆ ಇಂದು ಐವತ್ತು ತುಂಬಿತೇ? ನಂಬಲಾಗುತ್ತಿಲ್ಲ. ಐವತ್ತು ತಲುಪುವುದು ಕಠಿಣ ಮಾತಲ್ಲ ನಿಜ, ಆರೋಗ್ಯವಾಗಿದ್ದರೆ, ಯಾರಾದರೂ ಆ ಅಂಕಿಯನ್ನು ಮುಟ್ಟಬಹುದು. ಆದರೆ, ನೀವು ಮಾತ್ರ ಈ ಐವತ್ತರಲ್ಲಿ ಎಷ್ಟೆಲ್ಲಾ ಯಶಸ್ಸನ್ನು, ಪ್ರತಿಭೆಯನ್ನು ತುಂಬಿದ್ದೀರಿ! ನೀವು ದಿನೇ ದಿನೇ ಬೆಳೆಯುತ್ತ ಭಾರತದುದ್ದಕ್ಕೂ ರೆಂಬೆ-ಕೊಂಬೆಗಳನ್ನು ಚಾಚುತ್ತಿರುವುದನ್ನ ನಿಮ್ಮ ಮಿತ್ರರಾದ ನಾವು ದೂರದಿಂದ ನೋಡಿ ನಲಿದಿದ್ದೇವೆ, ಹೆಮ್ಮೆಯಿಂದ ಬೀಗಿದ್ದೇವೆ. ಹೀಗೆಯೇ ಮತ್ತು ಎತ್ತರ ಬೆಳೆಯುತ್ತಿರಿ, ಬೆಳಗುತ್ತಿರಿ. ಬೆಳಗುತ್ತಲೇ ನೂರನ್ನು ದಾಟಿ ಹೋಗಿರಿ, -ನಿಮ್ಮ ಗಿರೀಶ್ ಕಾರ್ನಾಡ್’ ಎಂದು ಪತ್ರ ಬರೆದು ಶುಭಕೋರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News