ಬಿಬಿಎಂಪಿ ವ್ಯಾಪ್ತಿಯ ಎಲ್ಲ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತರಲು ಒತ್ತಾಯ

Update: 2019-06-10 17:38 GMT

ಬೆಂಗಳೂರು, ಜೂ.10: ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಎಲ್ಲ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತರುವಂತೆ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಕುಮಾರ್ ಒತ್ತಾಯಿಸಿದ್ದಾರೆ.

ಪಾಲಿಕೆಯ ಆಯುಕ್ತ ಮಂಜುನಾಥ್ ಪ್ರಸಾದ್‌ರನ್ನು ಭೇಟಿ ಮಾಡಿ, ಎಲ್ಲ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತಂದರೆ ಆಸ್ತಿ ತೆರಿಗೆ ಹೆಚ್ಚಳ ಮಾಡುವ ಪ್ರಮೇಯವೇ ಬರುವುದಿಲ್ಲ. ಹೀಗಾಗಿ, ಎಲ್ಲವನ್ನೂ ಕೂಡಲೇ ತೆರಿಗೆ ವ್ಯಾಪ್ತಿಗೆ ತರುವಂತೆ ಮನವಿ ಸಲ್ಲಿಸಿದರು.

ತೆರಿಗೆ ವ್ಯಾಪ್ತಿಗೆತರುವ ಆಸ್ತಿಗಳ ದಾಖಲೆಯನ್ನು ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 6 ಲಕ್ಷ ವಸತಿ ಕಟ್ಟಡ, 6 ಲಕ್ಷ ವಾಣಿಜ್ಯ ಕಟ್ಟಡ, 1.10 ಲಕ್ಷ ಕೈಗಾರಿಕಾ ಕಟ್ಟಡ, 3800 ಶಾಲಾ ಕಟ್ಟಡ, 50 ಕ್ಕೂ ಅಧಿಕ ಯುನಿಟ್ ಹೊಂದಿರುವ 22 ಸಾವಿರಕ್ಕೂ ಅಧಿಕ ವಸತಿ ಸಮುಚ್ಛಯ, 12,860 ಪಿಜಿ ಕಟ್ಟಡಗಳು, 3758 ಐಟಿ ಕಂಪನಿಗಳು, 94 ಬಿಟಿ ಕಂಪನಿಗಳು, 79 ಟೆಕ್‌ಪಾರ್ಕ್‌ಗಳು, 157 ಮಾಲ್‌ಗಳು, 2446 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, 3350 ಲಾಡ್ಜ್‌ಗಳು, 684 ಸ್ಟಾರ್ ಹೊಟೇಲ್‌ಗಳು, 1300 ಕಲ್ಯಾಣ ಮಂಟಪಗಳು, 1600 ಪಾರ್ಟಿ ಹಾಲ್‌ಗಳು, 13,860 ಟೆಲಿಕಾಂ ಟವರ್‌ಗಳಿವೆ ಎಂದು ಹೇಳಿದರು.

ಪಾಲಿಕೆಯು ನ್ಯಾಯಯುತವಾಗಿ ಈ ಎಲ್ಲ ಆಸ್ತಿಗಳಿಂದ ತೆರಿಗೆ ಸಂಗ್ರಹ ಮಾಡುವ ಕಾರ್ಯಕ್ರಮ ರೂಪಿಸಿದರೆ ಪ್ರತಿವರ್ಷ 6 ಸಾವಿರ ಕೋಟಿಗೂ ಅಧಿಕ ಆದಾಯ ಹರಿದು ಬರಲಿದೆ. ಅಲ್ಲದೆ, ಕೆಲವು ಅಪಾರ್ಟ್‌ಮೆಂಟ್‌ಗಳು, ಟೆಕ್‌ಪಾರ್ಕ್‌ಗಳು ತಮ್ಮ ಕಟ್ಟಡಗಳ ಬಗ್ಗೆ ಸುಳ್ಳು ಮಾಹಿತಿ ನೀಡಿದ್ದಾರೆ. ಈ ಕಟ್ಟಡಗಳನ್ನು ಟೋಟಲ್ ಸ್ಟೇಷನ್ ಸರ್ವೆಗೆ ಒಳಪಡಿಸಬೇಕು. ಆಗ ಹೆಚ್ಚು ತೆರಿಗೆ ವಸೂಲಿ ಮಾಡಬಹುದಾಗಿದೆ ಎಂದು ತಿಳಿಸಿದರು.

ಪಾಲಿಕೆಯಿಂದ 2014-15 ನೆ ಸಾಲಿನಲಿ ಮೂರು ಕಟ್ಟಡಗಳನ್ನು ಟೋಟಲ್ ಸ್ಪೇಷನ್ ಸರ್ವೆಗೆ ಒಳಪಡಿಸಿದ ಸಂದರ್ಭದಲ್ಲಿ 8 ಕೋಟಿ ತೆರಿಗೆ ವಂಚನೆ ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. ಅದೇ ರೀತಿಯಲ್ಲಿ ಈ ಬಾರಿ ಮತ್ತೊಂದು ಬಾರಿ ಬಿಬಿಎಂಪಿಯು ಎಲ್ಲೆಲ್ಲಿ ಅನುಮಾನ ಬರುತ್ತದೆಯೋ ಅಲ್ಲೆಲ್ಲಾ ಸರ್ವೆ ಮಾಡಿಸಬೇಕು. ನಾಗರಿಕರ ಮೇಲೆ ತೆರಿಗೆ ಹೆಚ್ಚಳದ ಚಾಟಿ ಬೀಸುವ ಬದಲಿಗೆ, ತೆರಿಗೆ ವಂಚಕರನ್ನು ಪತ್ತೆ ಹಚ್ಚಿ, ವಸೂಲಿ ಮಾಡಬೇಕು. ಈ ನಿಟ್ಟಿನಲ್ಲಿ ಪಾಲಿಕೆ ದಿಟ್ಟ ಹೆಜ್ಜೆಯಿಡಬೇಕು ಎಂದು ಅವರು ಮನವಿ ಪತ್ರದಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News