ಭಾರತ ಸೆಮಿ ಫೈನಲ್‌ಗೆ

Update: 2019-06-10 18:42 GMT

 ಭುವನೇಶ್ವರ, ಜೂ.10: ಆಕಾಶ್‌ದೀಪ್ ಸಿಂಗ್ ಗಳಿಸಿದ ಹ್ಯಾಟ್ರಿಕ್ ಗೋಲು ನೆರವಿನಿಂದ ಭಾರತ ಹಾಕಿ ತಂಡ ಸೋಮವಾರ ಇಲ್ಲಿನ ಕಳಿಂಗ ಸ್ಟೇಡಿಯಂನಲ್ಲಿ ನಡೆದ ಎಫ್‌ಐಎಚ್ ಸೀರಿಸ್ ಫೈನಲ್ಸ್‌ನ ಅಂತಿಮ ಗ್ರೂಪ್ ಪಂದ್ಯದಲ್ಲಿ ಉಜ್ಬೇಕಿಸ್ತಾನ ತಂಡವನ್ನು 10-0 ಗೋಲುಗಳ ಅಂತರದಿಂದ ಮಣಿಸಿತು. ಈ ಮೂಲಕ ಸೆಮಿ ಫೈನಲ್‌ಗೆ ಪ್ರವೇಶಿಸಿತು. ಪಂದ್ಯಶ್ರೇಷ್ಠ ಆಕಾಶ್‌ದೀಪ್ 11ನೇ, 26ನೇ, 53ನೇ ನಿಮಿಷದಲ್ಲಿ ಗೋಲು ಗಳಿಸಿದರು. ಡಿಫೆಂಡರ್ ವರುಣ್ ಕುಮಾರ್ 4ನೇ ಹಾಗೂ 22ನೇ ನಿಮಿಷದಲ್ಲಿ ಹಾಗೂ ಮನ್‌ದೀಪ್ ಸಿಂಗ್ 30ನೇ ಹಾಗೂ 60ನೇ ನಿಮಿಷದಲ್ಲಿ ತಲಾ ಎರಡು ಗೋಲು ಗಳಿಸಿದರು. ಒಡಿಶಾದ ಆಟಗಾರ ಅಮಿತ್ ರೋಹಿದಾಸ್(15ನೇ ನಿ.), ನೀಲಕಂಠ ಶರ್ಮಾ(27ನೇ ನಿ.) ಹಾಗೂ ಗುರುಸಾಯಿದತ್ತ ಸಿಂಗ್(45ನೇ ನಿ.)ತಲಾ ಒಂದು ಗೋಲು ಗಳಿಸಿ ಭಾರತದ ಭರ್ಜರಿ ಜಯಕ್ಕೆ ನೆರವಾದರು. ‘ಎ’ ಗುಂಪಿನಲ್ಲಿ ಆಡಿದ್ದ ಮೂರೂ ಪಂದ್ಯಗಳನ್ನು ಜಯಿಸಿರುವ ಭಾರತ ಟೂರ್ನಿಯಲ್ಲಿ ಒಟ್ಟು 23 ಗೋಲುಗಳನ್ನು ಬಾರಿಸಿದೆ. ಜೂ.13 ರಂದು ಸಂಜೆ 7 ಗಂಟೆಗೆ ನಡೆಯುವ ಸೆಮಿ ಫೈನಲ್‌ನಲ್ಲಿ ಪೊಲ್ಯಾಂಡ್ ಅಥವಾ ಜಪಾನ್ ತಂಡದ ಸವಾಲು ಎದುರಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News