ಗಾಯಾಳು ಶಿಖರ್ ಧವನ್‌ಗೆ ಮೂರು ವಾರ ವಿಶ್ರಾಂತಿ

Update: 2019-06-11 08:15 GMT

ಹೊಸದಿಲ್ಲಿ, ಜೂ.11: ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಭಾರತದ ಆರಂಭಿಕ ಆಟಗಾರ ಶಿಖರ್ ಧವನ್‌ಗೆ ಮೂರು ವಾರ ವಿಶ್ರಾಂತಿ ನೀಡಲಾಗಿದೆ. ಈ ಬೆಳವಣಿಗೆಯು ಭಾರತಕ್ಕೆ ತೀವ್ರ ಹೊಡೆತ ನೀಡಿದೆ.

  ಧವನ್ 3 ವಾರ ಕ್ರಿಕೆಟ್‌ನಿಂದ ದೂರ ಉಳಿಯುತ್ತಿರುವ ಹಿನ್ನೆಲೆಯಲ್ಲಿ ಜೂ.13 ಹಾಗೂ 16 ರಂದು ನ್ಯೂಝಿಲ್ಯಾಂಡ್ ಹಾಗೂ ಪಾಕಿಸ್ತಾನ ವಿರುದ್ಧ ಭಾರತ ಆಡಲಿರುವ ಮಹತ್ವದ ವಿಶ್ವಕಪ್‌ ಪಂದ್ಯಗಳಿಂದ ವಂಚಿತರಾಗಿದ್ದಾರೆ.

ದಿಲ್ಲಿಯ ‘ಗಬ್ಬರ್’ಖ್ಯಾತಿಯ ಆಟಗಾರ ಧವನ್ ಆಸ್ಟ್ರೇಲಿಯ ವಿರುದ್ಧ ಜೂ.9 ರಂದು ನಡೆದ ವಿಶ್ವಕಪ್ ಪಂದ್ಯದಲ್ಲಿ ಆಕರ್ಷಕ ಶತಕ(117) ಸಿಡಿಸಿ ತಂಡದ ಗೆಲುವಿಗೆ ಬುನಾದಿ ಹಾಕಿಕೊಟ್ಟಿದ್ದರು. ಆಸ್ಟ್ರೇಲಿಯ ವಿರುದ್ಧ ಪಂದ್ಯದ ವೇಳೆಯೇ ಬ್ಯಾಟಿಂಗ್ ಮಾಡುವಾಗ ವೇಗದ ಬೌಲರ್ ನಥಾನ್ ಕೌಲ್ಟರ್ ನೀಲ್ ಅವರ ಏರಿ ಬಂದ ಎಸೆತವೊಂದು ಧವನ್ ಹೆಬ್ಬೆರಳಿಗೆ ಅಪ್ಪಳಿಸಿತ್ತು. ಬೆರಳಿನ ನೋವಿನ ನಡುವೆಯೂ ಅವರು 109 ಎಸೆತಗಳಲ್ಲಿ 117ರ ನ್ ಗಳಿಸಿದ್ದರು.

ಗಾಯದ ಸಮಸ್ಯೆಯಿಂದಾಗಿ ಫೀಲ್ಡಿಂಗ್‌ಗೆ ಇಳಿಯದ ಧವನ್ ಬದಲಿಗೆ ರವೀಂದ್ರ ಜಡೇಜ 50 ಓವರ್‌ಗಳ ಕಾಲ ಫೀಲ್ಡಿಂಗ್ ನಡೆಸಿದ್ದರು.

ಮುನ್ನೆಚ್ಚರಿಕಾ ಕ್ರಮವಾಗಿ ಧವನ್‌ಗೆ ಸ್ಕಾನಿಂಗ್ ನಡೆಸಲಾಗಿತ್ತು. ಆದರೆ,ಗಾಯದ ಸ್ವರೂಪ ದೃಢಪಟ್ಟಿರಲಿಲ್ಲ. ಇದೀಗ ಬೆರಳು ಬಿರುಕುಗೊಂಡಿರುವ ಕಾರಣ ವೈದ್ಯರು ವಿಶ್ರಾಂತಿಗೆ ಸೂಚಿಸಿದ್ದಾರೆ.

ಐಸಿಸಿ ಆಯೋಜಿತ ಟೂರ್ನಿಗಳಲ್ಲಿ ಧವನ್ ಅತ್ಯಮೋಘ ಪ್ರದರ್ಶನ ನೀಡಿದ್ದಾರೆ. 2015ರ ವಿಶ್ವಕಪ್‌ನಲ್ಲಿ 2 ಶತಕ ಸಹಿತ 412 ರನ್ ಗಳಿಸಿದ್ದ ಧವನ್ 2013 ಹಾಗೂ 2017ರ ಚಾಂಪಿಯನ್ಸ್ ಟ್ರೋಫಿಯಲ್ಲಿ 3 ಶತಕಗಳ ಸಹಿತ ಒಟ್ಟು 701 ರನ್ ಗಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News