ಶಾಲಾ ಸಂಪರ್ಕ ಸೇತು ಯೋಜನೆ: 3 ತಿಂಗಳೊಗೆ ಕಾಮಗಾರಿ ಪೂರ್ಣಗೊಳಿಸಲು ಸಿಎಂ ಸೂಚನೆ

Update: 2019-06-11 15:10 GMT

ಬೆಂಗಳೂರು, ಜೂ.11: ಶಾಲಾ ಸಂಪರ್ಕ ಸೇತು ಯೋಜನೆ ಬಹುತೇಕ ಪೂರ್ಣಗೊಂಡಿದ್ದು, ಉಳಿದ ಕಾಮಗಾರಿಗಳನ್ನು 2-3 ತಿಂಗಳಲ್ಲಿ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು.

ಮಂಗಳವಾರ ಲೋಕೋಪಯೋಗಿ ಇಲಾಖೆಯ ಸಮಗ್ರ ಅಭಿವೃದ್ಧಿಯ ಕುರಿತು ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ, ಶಾಲಾ ಸಂಪರ್ಕ ಸೇತು ಯೋಜನೆಯ ಅನುಷ್ಠಾನ ಹಾಗೂ ನಿರ್ಮಾಣಗೊಂಡ ಸೇತುವೆ ಬಗ್ಗೆ ಸ್ಥಳೀಯ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ವಿಡಿಯೋ ಸಂವಾದ ನಡೆಸಿ, ಕಾಮಗಾರಿ ಮಾಹಿತಿ ಪಡೆದರು.

ತೀರ್ಥಹಳ್ಳಿಯ ತಮ್ಮ ಶಾಲೆಗೆ ವಿದ್ಯಾರ್ಥಿಗಳು ದೂರದಿಂದ ಪ್ರಯಾಣ ಮಾಡಿ ಬರುತ್ತಿದ್ದು, ಸಾರಿಗೆ ಹಾಗೂ ವಸತಿ ಸೌಲಭ್ಯ ಒದಗಿಸಿ, ಗ್ರಾಮ ವಾಸ್ತವ್ಯವನ್ನು ತಮ್ಮ ಶಾಲೆಯಲ್ಲಿಯೂ ಮಾಡುವಂತೆ ವಿದ್ಯಾರ್ಥಿಯೊಬ್ಬರು ಕೋರಿದರು. ಇದಕ್ಕೆ ಸ್ಪಂದಿಸಿದ ಕುಮಾರಸ್ವಾಮಿ, ಗ್ರಾಮ ವಾಸ್ತವ್ಯ ಮಾಡುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

ಪುತ್ತೂರು ತಾಲೂಕಿನ ಕುಂತೂರು ಮಜಲು, ಅರ್ಬಿ ಗ್ರಾಮ, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹೊನ್ನೆತಾಳು ಗ್ರಾಮ ಪಂಚಾಯತ್ ನ ದೋಡ್ಲಿಮನೆ ಹಳ್ಳ ಹಾಗೂ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಬೆಳ್ಳಿಮಡಿಕೆಯ ವಿದ್ಯಾರ್ಥಿಗಳು, ಪೋಷಕರು ಮತ್ತು ಸ್ಥಳೀಯರು ವಿಡಿಯೋ ಸಂವಾದದಲ್ಲಿ ಪಾಲ್ಗೊಂಡು ಕಾಲುಸಂಕಗಳ ಬದಲಿಗೆ ಶಾಲಾ ಸಂಪರ್ಕ ಸೇತುವೆ ಯೋಜನೆಯನ್ನು ಜಾರಿಗೊಳಿಸಿ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ ಎಂದು ಕೃತಜ್ಞತೆ ಸಲ್ಲಿಸಿದರು.

ಸಭೆಯಲ್ಲಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮಾತನಾಡಿ, ಶಾಲಾ ಸಂಪರ್ಕ ಸೇತು ಸರಕಾರದ ಪ್ರಮುಖ ಯೋಜನೆಯಾಗಿದ್ದು, ಗ್ರಾಮೀಣ ಭಾಗದ ಜನರಿಗೆ ಇದರಿಂದ ಬಹಳಅನುಕೂಲವಾಗಿದೆ ಎಂದರು.

ಏನಿದು ಯೋಜನೆ?

ಮಲೆನಾಡು ಶಾಲೆಯೊಂದರಲ್ಲಿ ಶಾಲಾ ವಿದ್ಯಾರ್ಥಿಯೊಬ್ಬನು ಕಾಲುಸಂಕ ದಾಟುವ ಸಂದರ್ಭದಲ್ಲಿ ಅಸುನೀಗಿದ ಸುದ್ದಿಯನ್ನು ಗಮನಿಸಿ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಶಾಲಾ ಸಂಪರ್ಕ ಸೇತು ಯೋಜನೆ ತ್ವರಿತ ಗತಿಯಲ್ಲಿ ಅನುಷ್ಠಾನಕ್ಕೆ ತಂದಿದ್ದರು. ನದಿ, ಹಳ್ಳ, ತೊರೆಯನ್ನು ದಾಟಲು ಅನುಕೂಲವಾಗುವಂತೆ ನಿರ್ಮಿಸಲಾಗಿದ್ದ ಕಾಲುಸಂಕ ಸೇತುವೆಗಳನ್ನು ಬದಲಾಯಿಸಿ, ಶಾಶ್ವತವಾದ ಕಿರುಸೇತುವೆಗಳನ್ನು ನಿರ್ಮಿಸುವಂತೆ ಸೂಚಿಸಿ ಆಯವ್ಯಯದಲ್ಲಿ ಅನುದಾನ ಮೀಸಲಿಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News