ಐಎಂಎ ವಂಚನೆ ಪ್ರಕರಣ: 9 ಸಾವಿರಕ್ಕೂ ಅಧಿಕ ದೂರುಗಳು ದಾಖಲು

Update: 2019-06-11 15:29 GMT

ಬೆಂಗಳೂರು, ಜೂ.11: ಐಎಂಎ ಸಮೂಹ ಸಂಸ್ಥೆಗಳ ಬಹುಕೋಟಿ ವಂಚನೆ ಪ್ರಕರಣದಿಂದ ರಾಜ್ಯಾದ್ಯಂತ ಸಾವಿರಾರು ಮಂದಿ ಕಂಗಾಲಾಗಿದ್ದಾರೆ. ಕಳೆದ ಎರಡು ದಿನಗಳಿಂದ ಸುಮಾರು 9 ಸಾವಿರಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ.

ಶಿವಾಜಿನಗರದ ಸೆಂಟ್ ಪೌಲ್ ಚರ್ಚ್, ಎ.ಎಸ್.ಕನ್ವೆಂಷನ್ ಹಾಲ್, ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಹೂಡಿಕೆದಾರರು ದೂರು ದಾಖಲಿಸಲು ಪ್ರತ್ಯೇಕ ವ್ಯವಸ್ಥೆಯನ್ನು ಮಾಡಲಾಗಿದೆ.

ಹೂಡಿಕೆದಾರರು ತಮ್ಮ ಹಣವನ್ನು ಕಳೆದುಕೊಂಡಿರುವ ನೋವಿನಲ್ಲಿದ್ದು, ಮತ್ತೊಂದೆಡೆ ಐಎಂಎ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿದ್ದ ಸುಮಾರು 1800 ಸಿಬ್ಬಂದಿಗಳ ಬದುಕು ಬೀದಿಗೆ ಬಿದ್ದಂತಾಗಿದೆ. ಸಂಸ್ಥೆಯ ವಿರುದ್ಧ ಪ್ರಕರಣಗಳು ದಾಖಲಾಗಿರುವುದರಿಂದ ನಮಗೆ ಭಯವಾಗುತ್ತಿದೆ ಎಂದು ಸಿಬ್ಬಂದಿಗಳು ತಮ್ಮ ಆತಂಕವನ್ನು ವ್ಯಕ್ತಪಡಿಸಿದ್ದಾರೆ.

ಸಂಸ್ಥೆಯಲ್ಲಿ ಕೆಲಸ ಮಾಡುವ ಎಲ್ಲ ಸಿಬ್ಬಂದಿಗಳಿಗೆ ಈದುಲ್ ಫಿತ್ರ್ ಅಂಗವಾಗಿ ಐದು ದಿನ ರಜೆ ಕೊಟ್ಟಿದ್ದರು. ಅದರಂತೆ, ನಾವು ಸೋಮವಾರ ಕೆಲಸಕ್ಕೆ ಹಿಂದಿರುಗಬೇಕಿತ್ತು. ಆದರೆ, ಸೋಮವಾರ ಬೆಳಗ್ಗೆ ನಮ್ಮ ಸಂಸ್ಥೆಯ ವಾಟ್ಸಪ್ ಗ್ರೂಪ್‌ನಲ್ಲಿ ಆಭರಣ ಮಳಿಗೆ ತೆರೆಯುವುದಿಲ್ಲ. ನೀವುಗಳು ಬೇರೆ ಕೆಲಸವನ್ನು ನೋಡಿಕೊಳ್ಳಿ ಎಂಬ ಸಂದೇಶವನ್ನು ಹಾಕಲಾಗಿತ್ತು. ಅದನ್ನು ನೋಡಿ ನಾವು ಕಂಗಾಲಾಗಿದ್ದೇವೆ ಎಂದು ಸಿಬ್ಬಂದಿಗಳು ಅಳಲು ತೋಡಿಕೊಳ್ಳುತ್ತಿದ್ದಾರೆ.

ನಮ್ಮ ಶೈಕ್ಷಣಿಕ ಅರ್ಹತೆಯ ಮೂಲ ದಾಖಲೆಗಳು ಹಾಗೂ ಸೇವಾ ಅನುಭವದ ಪ್ರಮಾಣ ಪತ್ರಗಳು ಸಂಸ್ಥೆಯವರ ಬಳಿಯೇ ಇದೆ. ನಮಗೆ ನಮ್ಮ ದಾಖಲೆಗಳು ಶೀಘ್ರವಾಗಿ ದೊರೆಯದಿದ್ದರೆ, ನಾವೆಲ್ಲ ಏನು ಮಾಡಬೇಕು. ನಮ್ಮ ಮುಂದಿನ ಜೀವನವನ್ನು ರೂಪಿಸಿಕೊಳ್ಳುವುದಾದರೂ ಹೇಗೆ ಎಂದು ಸಿಬ್ಬಂದಿಗಳು ಪರದಾಡುತ್ತಿದ್ದಾರೆ.

ಆಭರಣ ಮಳಿಗೆಯ ವ್ಯವಹಾರ ತುಂಬಾ ಚೆನ್ನಾಗಿ ನಡೆಯುತ್ತಿತ್ತು. ಈ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳೇ ಹಲವಾರು ಮಂದಿ ಹಣ ಹೂಡಿಕೆ ಮಾಡಿದ್ದಾರೆ. ಮನ್ಸೂರ್ ಖಾನ್ ಎಲ್ಲರ ಜೊತೆ ಮುಕ್ತವಾಗಿ ಬೆರೆಯುತ್ತಿದ್ದರು. ಆದರೆ, ಅವರೇ ಈ ರೀತಿ ವಂಚನೆ ಮಾಡಿದ್ದಾರೆ ಎಂದರೆ ನಂಬಲು ಸಾಧ್ಯವಾಗುತ್ತಿಲ್ಲ ಎಂದು ಓರ್ವ ಸಿಬ್ಬಂದಿ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News