ಐಎಂಎ ಅಧ್ಯಕ್ಷ ಮನ್ಸೂರ್ ಖಾನ್ ಹೆಸರಿನಲ್ಲಿ ಮತ್ತೊಂದು ಆಡಿಯೋ ವೈರಲ್

Update: 2019-06-11 15:31 GMT

ಬೆಂಗಳೂರು, ಜೂ.11: ಐಎಂಎ ಸಂಸ್ಥೆಯ ಅಧ್ಯಕ್ಷ ಮನ್ಸೂರ್ ಖಾನ್ ಹೆಸರಿನಲ್ಲಿ ಮತ್ತೊಂದು ಆಡಿಯೋ ಇಂದು ವೈರಲ್ ಆಗಿದ್ದು, ಶಾಸಕ ರೋಷನ್ ಬೇಗ್, ಬಿಬಿಎಂಪಿ ಸದಸ್ಯ ಶಕೀಲ್ ಅಹ್ಮದ್ ಹಾಗೂ ರಾಹಿಲ್ ಎಂಬುವವರ ವಿರುದ್ಧ ಆರೋಪಗಳನ್ನು ಮಾಡಲಾಗಿದೆ.

ನಾನು ಸಾಯಲು ಮುಂದಾಗಿದ್ದೇನೆ ಎಂದು ಯಾರೋ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಬೆಂಗಳೂರಿನಲ್ಲೇ ನಾನು ಜೀವಂತವಾಗಿದ್ದೇನೆ. ನಾನು ಹಾಗೂ ನನ್ನ ಕುಟುಂಬ ಎಲ್ಲಿಯೂ ಓಡಿ ಹೋಗಿಲ್ಲ. ಆದರೆ, ನನ್ನನ್ನು ಇಲ್ಲಿಂದ ಓಡಿಸಲು ಸಂಚು ರೂಪಿಸಲಾಗುತ್ತಿದೆ ಎಂದು ಆಡಿಯೋ ಸಂದೇಶದಲ್ಲಿ ಆಪಾದನೆ ಮಾಡಲಾಗಿದೆ. ಐಎಂಎ ಸಂಸ್ಥೆಯಲ್ಲಿ ಜನರು ಹೂಡಿಕೆ ಮಾಡಿರುವ ಎಲ್ಲ ಹಣವನ್ನು ಆಭರಣ, ವಜ್ರ, ಆಸ್ಪತ್ರೆ ಹಾಗೂ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಹೂಡಿಕೆ ಮಾಡಿದ್ದೇನೆ. ನಾನು ಜನರಿಂದ ತೆಗೆದುಕೊಂಡಿರುವ ಹಣವನ್ನು ಎಲ್ಲರಿಗೂ ವಾಪಸ್ ಕೊಡುತ್ತೇನೆ ಎಂದು ಆ ವ್ಯಕ್ತಿ ತಿಳಿಸಿದ್ದಾನೆ.

ಇಂದು ಸಂಜೆ ಸಮದ್ ಹಾಲ್‌ನಲ್ಲಿ ಸಭೆ ಕರೆದಿದ್ದೇನೆ. ಮೊದಲು ಕಡಿಮೆ ಮೊತ್ತದವರಿಗೆ, ನಂತರ ಮಧ್ಯಮ ಹಾಗೂ ತದನಂತರ ದೊಡ್ಡ ಮೊತ್ತವನ್ನು ಹೂಡಿಕೆ ಮಾಡಿರುವವರಿಗೆ ಜೂ.15ರೊಳಗೆ ವಾಪಸ್ ಕೊಡುತ್ತೇನೆ ಎಂದು ಆಡಿಯೋ ಸಂದೇಶದಲ್ಲಿ ಭರವಸೆ ನೀಡಲಾಗಿದೆ.

ಈ ಆಡಿಯೋ ಸಂದೇಶವನ್ನು ಮನ್ಸೂರ್ ಖಾನ್ ಅವರೇ ಕಳುಹಿಸಿದ್ದಾರಾ ಅಥವಾ ಯಾರಾದರೂ ಕಿಡಿಗೇಡಿಗಳು, ಜನರಲ್ಲಿ ಅಶಾಂತಿ ಮೂಡಿಸಲು ನಕಲಿ ಆಡಿಯೋ ಸಿದ್ಧಪಡಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಿದ್ದಾರಾ ಎಂಬುದರ ಕುರಿತು ನಗರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News