ಐಎಂಎ ಮಾದರಿಯಲ್ಲಿ ಮತ್ತೊಂದು ಬಹುಕೋಟಿ ವಂಚನೆ ?

Update: 2019-06-11 16:23 GMT

ಬೆಂಗಳೂರು, ಜೂ.11: ಐಎಂಎ ಜುವೆಲ್ಸ್ ಮಾಲಕ ಸಾರ್ವಜನಿಕರ 500 ಕೋಟಿ ಹೂಡಿಕೆ ಹಣದೊಂದಿಗೆ ನಾಪತ್ತೆ ಆರೋಪ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ, ನಗರದಲ್ಲಿನ ಮತ್ತೊಂದು ಹೂಡಿಕೆ ಕಂಪೆನಿಯ ಬಹುಕೋಟಿ ವಂಚಿಸಿರುವುದು ಗೊತ್ತಾಗಿದೆ.

ಇಲ್ಲಿನ ಜಯನಗರದ 9ನೇ ಮುಖ್ಯ ರಸ್ತೆಯಲ್ಲಿದ್ದ ಎಐಎಂಎಂಎಸ್ ವೆಂಚರ್ಸ್ ಹೆಸರಿನ ಕಂಪೆನಿ 1,600 ಹೂಡಿಕೆದಾರರಿಗೆ ಬರೋಬ್ಬರಿ 1 ಸಾವಿರಕ್ಕೂ ಅಧಿಕ ಕೋಟಿ ಹಣ ವಂಚನೆ ಮಾಡಿದೆ ಎಂದು ಹೇಳಲಾಗುತ್ತಿದ್ದು, ಈ ಸಂಬಂಧ ತಿಲಕ್ ನಗರ ಹಾಗೂ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ತಿಳಿದು ಬಂದಿದೆ.

ನಗರದ ನಿವಾಸಿಗಳಾದ ಅಯೂಬ್, ಇಲ್ಯಾಸ್, ಮುದಾಸ್ಸರ್, ಮುಜಾಹಿದ್ ಹಾಗೂ ಶಾಹೀದ್ ಎಂಬುವರು ಈ ಕಂಪೆನಿಯ ಮಾಲಕರಾಗಿದ್ದು, ಮಹಿಳೆಯರನ್ನು ಹೆಚ್ಚಾಗಿ ಗುರಿಯಾಗಿಸಿಕೊಂಡು, ವಂಚನೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬರುತ್ತಿದೆ.

2017ರಲ್ಲಿ ಆರಂಭವಾಗಿದ್ದ ಈ ಎಐಎಂಎಂಎಸ್ ವೆಂಚರ್ಸ್ ಕಂಪೆನಿಯು, 1 ಲಕ್ಷ ರೂಪಾಯಿ ಠೇವಣಿ ಮಾಡಿದರೆ, ಪ್ರತಿ ತಿಂಗಳು 10 ಸಾವಿರ ರೂ. ಆದಾಯ ಬಡ್ಡಿ ನೀಡುವುದಾಗಿ ಹೂಡಿಕೆದಾರರಿಗೆ ಭರವಸೆ ನೀಡಿತ್ತು. ಇದನ್ನು ನಂಬಿ ಅನೇಕರು ಹಣ ಹೂಡಿಕೆ ಮಾಡಿದ್ದರು. ತದನಂತರ, ಕಂಪೆನಿ ಮಾಲಕರು ಮೂರು ತಿಂಗಳು ಮಾತ್ರ ಹೂಡಿಕೆದಾರರಿಗೆ ಆದಾಯ ಬಡ್ಡಿ ನೀಡಿ, ಬಳಿಕ ನಿಲ್ಲಿಸಿತ್ತು ಎನ್ನಲಾಗಿದೆ.

ಐಎಂಎ ವಂಚನೆ ಬೆಳಕಿಗೆ ಬಂದ ಹಿನ್ನಲೆ, ಮಂಗಳವಾರ ಎಐಎಂಎಂಎಸ್ ವೆಂಚರ್ಸ್ ಹೂಡಿಕೆದಾರರು ಕಚೇರಿಗೆ ಭೇಟಿ ನೀಡಿದಾಗ, ಬಂದ್ ಮಾಡಿರುವ ಬಗ್ಗೆ ಗೊತ್ತಾಗಿದೆ. ಈ ಬಗ್ಗೆ ಆಂತಕ ವ್ಯಕ್ತಪಡಿಸಿದ ಹೂಡಿಕೆದಾರರು, ಕಂಪೆನಿ ಮುಂಭಾಗ ಪ್ರತಿಭಟನೆ ನಡೆಸಿ, ಮಾಲಕರನ್ನು ಪತ್ತೆ ಹಚ್ಚಿ, ಹಣ ವಾಪಸ್ ನೀಡುವಂತೆ ಒತ್ತಾಯಿಸಿದರು. ಬಳಿಕ, ತಿಲಕ್‌ನಗರ ಠಾಣಾ ಪೊಲೀಸರಿಗೆ ದೂರು ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News