ಮೇಕೆದಾಟು-ಮಹದಾಯಿ ಯೋಜನೆಗೆ ಅನುಮತಿ ನೀಡಿ: ಡಿ.ಕೆ.ಶಿವಕುಮಾರ್ ಒತ್ತಾಯ

Update: 2019-06-11 16:34 GMT

ಹೊಸದಿಲ್ಲಿ, ಜೂ.11: ಮಹದಾಯಿ, ಮೇಕೆದಾಟು ಸಮತೋಲನ ಅಣೆಕಟ್ಟು ಯೋಜನೆ ಸೇರಿದಂತೆ ಅಂತಾರಾಜ್ಯ ಜಲವಿವಾದಗಳನ್ನು ತ್ವರಿತವಾಗಿ ಬಗೆಹರಿಸಲು ಕೇಂದ್ರ ಸರಕಾರವು ಮಧ್ಯಸ್ಥಿಕೆ ವಹಿಸಬೇಕೆಂದು ರಾಜ್ಯ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಒತ್ತಾಯಿಸಿದ್ದಾರೆ.

ಮಂಗಳವಾರ ಹೊಸದಿಲ್ಲಿಯಲ್ಲಿ ನಡೆದ ಜಲ ಸಂರಕ್ಷಣೆ, ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರು ಪೂರೈಕೆ ಹಾಗೂ ಸ್ವಚ್ಛ ಭಾರತ ಆಂದೋಲನ ಕುರಿತ ಎಲ್ಲ ರಾಜ್ಯಗಳ ಜಲ ಸಂಪನ್ಮೂಲ ಸಚಿವರ ಸಮ್ಮೇಳನದಲ್ಲಿ ಮಾತನಾಡಿದ ಅವರು, ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಸಮಸ್ಯೆ ಬಗೆಹರಿಸುವ ಸಂಬಂಧ ಮಧ್ಯಸ್ಥಿಕೆ ವಹಿಸುವಂತೆ ಆಗ್ರಹಿಸಿದರು.

ಕಾವೇರಿ, ಮಹದಾಯಿ, ಕೃಷ್ಣ, ತುಂಗಭದ್ರಾ ಸೇರಿದಂತೆ ಕರ್ನಾಟಕದ ಯಾವುದೇ ನದಿಯ ನೀರು ವೃಥಾ ಸಮುದ್ರದ ಪಾಲಾಗಬಾರದು. ಅದು ಸದ್ಬಳಕೆಯಾಗಬೇಕು ಎಂಬುದು ಕರ್ನಾಟಕದ ಸದಾಶಯವಾಗಿದೆ. ಸ್ಪಷ್ಟ ಜನಾದೇಶದೊಂದಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರವು ಈ ದಿಸೆಯಲ್ಲಿ ದೃಢ ಹೆಜ್ಜೆ ಇರಿಸಬೇಕು ಎಂದು ಅವರು ಒತ್ತಾಯಿಸಿದರು.

ದೇಶದ ಜಲಸಂಪತ್ತು ಯಾವುದೇ ಕಾರಣಕ್ಕೂ ವ್ಯರ್ಥವಾಗಬಾರದು. ಹೀಗಾಗಿ ಕೇಂದ್ರ ಸರಕಾರವು ಮಹದಾಯಿ ಹಾಗೂ ಕೃಷ್ಣ ಯೋಜನೆಗಳ ಅನುಷ್ಠಾನ ಸಂಬಂಧ ಅಧಿಸೂಚನೆ ಹೊರಡಿಸಬೇಕು. ಅದೇ ರೀತಿ ಮೇಕೆದಾಟು ವಿಸ್ತೃತ ಯೋಜನೆ ವರದಿಗೆ (ಡಿಪಿಆರ್) ಅನುಮತಿ ನೀಡಬೇಕು ಎಂದು ಸಚಿವರು ಕೇಂದ್ರ ಸರಕಾರಕ್ಕೆ ಮನವಿ ಮಾಡಿದರು.

ತಮಿಳುನಾಡು ಸೇರಿದಂತೆ ಯಾವುದೇ ನೆರೆ ರಾಜ್ಯದ ಜತೆಗೆ ಕರ್ನಾಟಕವು ವಿವಾದ, ಜಗಳ ಬಯಸುವುದಿಲ್ಲ. ಎಲ್ಲರ ಜತೆಗಿನ ಸಂಬಂಧ ಸೌಹಾರ್ದಯುತವಾಗಿರಬೇಕು ಎಂದು ನಾವು ಬಯಸುತ್ತೇವೆ. ಆದರೆ ಅದು ಕಾವೇರಿ ನೀರಾಗಲಿ, ಕೃಷ್ಣಾ ನೀರಾಗಲಿ ಅಥವಾ ತುಂಗಭದ್ರಾ ನೀರಾಗಲಿ ಸದ್ಬಳಕೆ ಆಗದೇ ಪೋಲಾಗಬಾರದು, ಸಮುದ್ರದ ಪಾಲಾಗಬಾರದು ಎಂಬುದು ನಮ್ಮ ಸಂಕಲ್ಪ. ಹೀಗಾಗಿ ಕರ್ನಾಟಕಕ್ಕೆ ಸಂಬಂಧಪಟ್ಟ ಅಂತಾರಾಜ್ಯ ಜಲವಿವಾದಗಳನ್ನು ಬಗೆಹರಿಸಲು ಕೇಂದ್ರ ನೆರವಾಗಬೇಕು ಎಂದು ಅವರು ಹೇಳಿದರು.

ಅಂತಾರಾಜ್ಯ ಜಲವಿವಾದಗಳನ್ನು ಬಗೆಹರಿಸಲು ಸಂಬಂಧಪಟ್ಟ ರಾಜ್ಯಗಳ ಸಚಿವರ ಸಭೆಯನ್ನು ಕೇಂದ್ರ ಸರಕಾರವು ಶೀಘ್ರ ಕರೆಯಬೇಕು. ಆ ಮೂಲಕ ಎಲ್ಲ ರಾಜ್ಯಗಳ ನಡುವೆ ಸೌಹಾರ್ದಯುತ ಸಂಬಂಧ ಮುಂದುವರಿಯಲು ಸಹಕರಿಸಬೇಕು ಎಂದು ಸಚಿವ ಶಿವಕುಮಾರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News