ಸ್ವರ್ಣಕಾರರಿಗೆ ಕಿರುಕುಳ ನೀಡಿದರೆ ಗೃಹ ಇಲಾಖೆಗೆ ದೂರು: ಗಾಯತ್ರಿ ಚಂದ್ರಶೇಖರ್

Update: 2019-06-11 17:34 GMT

ಕಲಬುರಗಿ, ಜೂ.11: ಸ್ವರ್ಣಕಾರರಿಗೆ ಉದ್ದೇಶಪೂರ್ವಕವಾಗಿ ಕಿರುಕುಳ ನೀಡುವ ಪೊಲೀಸರ ವಿರುದ್ಧ ಕ್ರಮ ಜರುಗಿಸುವಂತೆ ಕೇಂದ್ರ ಗೃಹ ಇಲಾಖೆಗೆ ದೂರು ನೀಡಲಾಗುವುದು ಎಂದು ಅಖಿಲ ಭಾರತೀಯ ಸ್ವರ್ಣಕಾರರ ಸಂಘದ ರಾಷ್ಟ್ರೀಯ ಉಪಾಧ್ಯಕ್ಷೆ ಗಾಯತ್ರಿ ಚಂದ್ರಶೇಖರ್ ಹೇಳಿದರು.

ನಗರದ ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಆಯೋಜಿಸಿದ್ದ, ಸ್ವರ್ಣಕಾರರಿಗೆ ಆರ್‌ಪಿಎಲ್ ಪ್ರಮಾಣ ಪತ್ರ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಸ್ವರ್ಣಕಾರರು ವಂಶ ಪಾರಂಪರ್ಯವಾಗಿ ಚಿನ್ನಾಭರಣ ತಯಾರಿ ವೃತ್ತಿ ಮುಂದುವರೆಸಿಕೊಂಡು ಬಂದಿದ್ದಾರೆ. ಆದರೆ, ಪೊಲೀಸರು ಕಳವು ನೆಪದಲ್ಲಿ ಈ ಸಮುದಾಯದ ಕಾರ್ಮಿಕರನ್ನು ಗುರಿಯಾಗಿಸಿಕೊಂಡು ಕಿರುಕುಳ ನೀಡುತ್ತಾರೆ. ಅಷ್ಟೇ ಅಲ್ಲದೆ, ಕಾರ್ಮಿಕರ ಆಸ್ತಿ-ಪಾಸ್ತಿಯ ಹಾನಿಯುಂಟು ಮಾಡುತ್ತಾರೆ. ಹೀಗಾಗಿ, ಈ ಬಗ್ಗೆ ಕೇಂದ್ರ ಗೃಹ ಇಲಾಖೆಗೆ ದೂರು ನೀಡಲಾಗುವುದು ಎಂದರು.

ಹಳೆಕಾಲದ ಸ್ವರ್ಣಕಾರರು ದಿನಕ್ಕೆ 18 ಗಂಟೆ ಕೆಲಸ ಮಾಡುತ್ತಿದ್ದರು. ಆದರೆ, ಆ ಉತ್ಸಾಹ ಈಗಿನ ಕಾರ್ಮಿಕರಿಗೆ ಇಲ್ಲ. ಈ ಕ್ಷೇತ್ರದಲ್ಲಿ ಮಹಿಳಾ ಕಾರ್ಮಿಕರು ಹೆಚ್ಚಾಗಿ ಆಸಕ್ತಿ ತೋರಿಸುತ್ತಿಲ್ಲ. ಹೆಣ್ಣು ಮಕ್ಕಳ ಹೆಸರಿನಲ್ಲಿ ವ್ಯಾಪಾರ ನಡೆಸಲು ಅನುಮತಿ ಪಡೆದು ಪುರುಷರೇ ನಡೆಸಿಕೊಂಡು ಹೋಗುತ್ತಿದ್ದಾರೆ. ಹಾಗಾಗಿ ಮಹಿಳೆಯರೂ ಈ ಕ್ಷೇತ್ರದಲ್ಲಿ ಆಸಕ್ತಿ ವಹಿಸಬೇಕು ಎಂದು ಸಲಹೆ ನೀಡಿದರು.

ಕೇಂದ್ರ ಸರಕಾರದ ಕಾರ್ಮಿಕ ಇಲಾಖೆ ವತಿಯಿಂದ ನೀಡುತ್ತಿರುವ ಕೌಶಲ್ಯ ತರಬೇತಿಯು ಸ್ವರ್ಣಕಾರರಿಗೆ ಸ್ವಾವಲಂಬಿ ವ್ಯಾಪಾರ ನಡೆಸಲು ಅನುಕೂಲವಾಗಿದೆ. ಆ ನಿಟ್ಟಿನಲ್ಲಿ ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ಸ್ವರ್ಣಕಾರರಿಗೆ ಸನ್ಮಾಯಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News