ಪತ್ರಕರ್ತನಿಗೆ ಥಳಿಸಿ, ಬಾಯಿಗೆ ಮೂತ್ರ ವಿಸರ್ಜಿಸಿದ ಉ.ಪ್ರದೇಶ ಪೊಲೀಸರು: ಆರೋಪ

Update: 2019-06-12 08:22 GMT

ಲಕ್ನೋ, ಜೂ.12: ಉತ್ತರ ಪ್ರದೇಶದ ಶಾಮ್ಲಿ ಎಂಬಲ್ಲಿ ಪತ್ರಕರ್ತರೊಬ್ಬರನ್ನು ಠಾಣಾಧಿಕಾರಿ ರಾಕೇಶ್ ಕುಮಾರ್ ನೇತೃತ್ವದಲ್ಲಿ ಜಿಆರ್‌ಪಿ ಸಿಬ್ಬಂದಿ ಕ್ಯಾಮರಾದೆದುರೇ ಅಮಾನುಷವಾಗಿ ಥಳಿಸಿ ದೌರ್ಜನ್ಯವೆಸಗಿದ ಆಘಾತಕಾರಿ ಘಟನೆ ವರದಿಯಾಗಿದೆ. ಸಂತ್ರಸ್ತ ಪತ್ರಕರ್ತ ಸುದ್ದಿ ವಾಹಿನಿಯೊಂದಕ್ಕೆ ಕಾರ್ಯನಿರ್ವಹಿಸುತ್ತಿದ್ದಾರೆ. ಮಂಗಳವಾರ ರಾತ್ರಿ ಧಿಮನ್‌ಪುರ ಎಂಬಲ್ಲಿ ರೈಲು ಹಳಿ ತಪ್ಪಿದ ದುರ್ಘಟನೆಯ ವರದಿ ಮಾಡಲು ಹೋಗಿದ್ದ ಸಂದರ್ಭ ಪತ್ರಕರ್ತನನ್ನು ಥಳಿಸಲಾಗಿತ್ತೆಂದು ತಿಳಿದು ಬಂದಿದೆ.

  ‘‘ಸಾಮಾನ್ಯ ಉಡುಪಿನಲ್ಲಿದ್ದ ಸರಕಾರಿ ರೈಲ್ವೆ ಪೊಲೀಸ್ ಸಿಬ್ಬಂದಿಯಲ್ಲಿ ಒಬ್ಬಾತ ನನ್ನ ಕ್ಯಾಮರಾಗೆ ಕೈಹಾಕಿ ಅದನ್ನು ಬೀಳಿಸಿದ್ದ. ಅದನ್ನು ಮತ್ತೆ ಎತ್ತಿಕೊಳ್ಳುತ್ತಿದ್ದಂತೆ ನನ್ನನ್ನು ಥಳಿಸಿ ನಿಂದಿಸಲಾಯಿತು. ಕೊಠಡಿಯಲ್ಲಿ ಕೂಡಿ ಹಾಕಿ ವಿವಸ್ತ್ರಗೊಳಿಸಿ ನನ್ನ ಬಾಯಿಯೊಳಗೆ ಮೂತ್ರ ವಿಸರ್ಜನೆ ಮಾಡಿದ್ದಾರೆ’’ ಎಂದು ಸಂತ್ರಸ್ತ ಪತ್ರಕರ್ತ ಅಮಿತ್ ಶರ್ಮಾ ತನ್ನ ಮೇಲಾದ ದೌರ್ಜನ್ಯವನ್ನು ವಿವರಿಸಿದ್ದಾರೆ.

ಅಮಿತ್ ಶರ್ಮಾರನ್ನು ಜಿಆರ್‌ಪಿ ಠಾಣೆಗೆ ಎಳೆದು ತಂದು ಸೆರೆಮನೆಗೆ ದೂಡಲಾಯಿತು. ರಾತ್ರಿಯಿಡೀ ಅವರು ಅಲ್ಲಿದ್ದು ಮರುದಿನ ಆತನ ಬಿಡುಗಡೆಗೆ ಆದೇಶವಾದ ಹಿನ್ನೆಲೆಯಲ್ಲಿ  ಬಿಡುಗಡೆಗೊಳಿಸಲಾಯಿತು.

ಪತ್ರಕರ್ತ ಕಸ್ಟಡಿಯಲ್ಲಿರುವಂತೆಯೇ ತನ್ನ ಮೇಲಾದ ದೌರ್ಜನ್ಯ ವಿವರಿಸುತ್ತಿರುವಾಗ ಠಾಣಾಧಿಕಾರಿ ರಾಕೇಶ್ ಕುಮಾರ್ ಹೊರಗಡೆ ಕುರ್ಚಿಯೊಂದರಲ್ಲಿ ಕುಳಿತುಕೊಂಡು ಆತನ ಆರೋಪಗಳನ್ನೆಲ್ಲಾ ನಿರಾಕರಿಸುವ ವೀಡಿಯೋ ಕೂಡ ಟ್ವಿಟ್ಟರಿನಲ್ಲಿ ಹರಿದಾಡುತ್ತಿದೆ.

ರೈಲ್ವೆ ಪೊಲೀಸರಿಗೆ ವಿರುದ್ಧವಾಗಿರುವ ವರದಿಯನ್ನು ತಾನು ಸಿದ್ಧಪಡಿಸಿದ್ದಕ್ಕೆ ತನ್ನನ್ನು ಈ ರೀತಿ ಹಿಂಸಿಸಲಾಗಿದೆ ಎಂದು ಠಾಣೆಯ ಹೊರಗೆ ಪ್ರತಿಭಟಿಸಿದ ತನ್ನ ಸಹೋದ್ಯೋಗಿಗಳಿಗೆ ಅಮಿತ್ ಶರ್ಮಾ ಹೇಳಿದ್ದಾರೆ.

 ಈ ನಡುವಸ ಘಟನೆ ಸಂಬಂಧ ಠಾಣಾಧಿಕಾರಿ ರಾಕೇಶ್ ಕುಮಾರ್ ಹಾಗೂ ಕಾನ್‌ಸ್ಟೇಬಲ್ ಸುನೀಲ್ ಕುಮಾರ್ ಎಂಬಾತನನ್ನು ಸೇವೆಯಿಂದ ವಜಾಗೊಳಿಸಲಾಗಿದೆ.

  ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್ ಅವರನ್ನು ಅವಮಾನಿಸುವಂತಹ ಟ್ವೀಟ್ ಮಾಡಿ ಬಂಧಕ್ಕೊಳಗಾಗಿದ್ದ ದಿಲ್ಲಿ ಪತ್ರಕರ್ತ ಪ್ರಶಾಂತ್ ಕನೋಜಿಯಾ ಅವರನ್ನು ಬಿಡುಗಡೆಗೊಳಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದ ಬೆನ್ನಲ್ಲೇ ಈ ಘಟನೆ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News