ವಿಶ್ವಕಪ್‌ನಲ್ಲಿ ಮಳೆ ಸೆಮಿ ಫೈನಲ್‌ಗೆ ತಲುಪಬಹುದು: ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯ

Update: 2019-06-12 08:21 GMT

ಹೊಸದಿಲ್ಲಿ, ಜೂ.12: ಈಗ ಇಂಗ್ಲೆಂಡ್ ಆತಿಥ್ಯದಲ್ಲಿ ನಡೆಯುತ್ತಿರುವ ವಿಶ್ವಕಪ್ ಪಂದ್ಯಗಳಿಗೆ ಮಳೆ ಅಡ್ಡಿಪಡಿಸುವುದರಿಂದ ವಿಶ್ವದಾದ್ಯಂತವಿರುವ ಕ್ರಿಕೆಟ್ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಮಂಗಳವಾರ ಶ್ರೀಲಂಕಾ ಹಾಗೂ ಬಾಂಗ್ಲಾದೇಶ ಪಂದ್ಯ ಮಳೆಗೆ ಕೊಚ್ಚಿಹೋಗುವ ಮೂಲಕ ಈ ವರ್ಷದ ವಿಶ್ವಕಪ್‌ನಲ್ಲಿ ಒಟ್ಟು 3 ಪಂದ್ಯಗಳು ಫಲಿತಾಂಶವಿಲ್ಲದೆ ರದ್ದಾದಂತಾಗಿದೆ. ವಿಶ್ವಕಪ್ ಕ್ರಿಕೆಟ್ ಚರಿತ್ರೆಯಲ್ಲಿ ಇದೊಂದು ದಾಖಲೆಯಾಗಿದೆ. 1992 ಹಾಗೂ 2003ರ ವಿಶ್ವಕಪ್‌ನಲ್ಲಿ ತಲಾ ಎರಡು ಪಂದ್ಯಗಳು ಮಳೆಗಾಹುತಿಯಾಗಿದ್ದವು.

ಮೆಗಾ ಟೂರ್ನಮೆಂಟ್ ಆಯೋಜಿಸುವ ಮೊದಲು ಹವಾಗುಣದ ಬಗ್ಗೆ ಆಯೋಜಕರು ಪರಿಗಣಿಸಿಲ್ಲವೇಕೆ? ಎಂದು ಸಾಮಾಜಿಕ ಜಾಲತಾಣದಲ್ಲಿ ಹಲವು ಕ್ರಿಕೆಟ್ ಅಭಿಮಾನಿಗಳು ಪ್ರಶ್ನೆ ಎತ್ತಿದ್ದರು. ಇಂಗ್ಲೆಂಡ್‌ನ ಉತ್ತಮ ಬೇಸಿಗೆಗೆ ಏನಾಗಿದೆ ಎಂದು ಹಲವರು ಅಚ್ಚರಿವ್ಯಕ್ತಪಡಿಸಿದರೆ, ಇನ್ನೂ ಕೆಲವರು ಪರ್ಯಾಯ ಸ್ಥಳದಲ್ಲಿ ವಿಶ್ವಕಪ್ ಪಂದ್ಯ ಆಡಬೇಕು ಎಂದು ಸಲಹೆ ನೀಡಿದ್ದಾರೆ.

ಇನ್ನೂ ಕೆಲವರು ಐಸಿಸಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನೂ ಕೆಲವರು ಈ ವರ್ಷದ ವಿಶ್ವಕಪ್‌ನ್ನು ಮಳೆಯೇ ಗೆಲ್ಲುವ ಸಾಧ್ಯತೆಯಿದೆ ಎಂದಿದ್ದಾರೆ. ಕೆಲವರು ಐಸಿಸಿ ಟ್ರೋಫಿ ಮೇಲ್ಗಡೆ ಛತ್ರಿಯನ್ನು ಜೋಡಿಸಿ ಟ್ರೋಫಿಯನ್ನು ಮರು ರಚಿಸಿದ್ದಾರೆ.

ಮೂರು ಪಂದ್ಯಗಳು ರದ್ದುಗೊಳ್ಳಲು ಕಾರಣವಾಗಿರುವ ಮಳೆ ಅಂಕಪಟ್ಟಿಯಲ್ಲಿ ಒಟ್ಟು ಆರು ಅಂಕ ಪಡೆದು ನ್ಯೂಝಿಲ್ಯಾಂಡ್ ಬಳಿಕ ಎರಡನೇ ಸ್ಥಾನದಲ್ಲಿದೆ ಎಂದು ಇನ್ನೂ ಕೆಲವರು ವ್ಯಂಗ್ಯವಾಡಿದ್ದು, ಮಳೆ ಸೆಮಿ ಫೈನಲ್‌ಗೆ ತಲುಪಲಿದೆ ಎಂದಿದ್ದಾರೆ.

10 ತಂಡಗಳು ಭಾವಹಿಸುತ್ತಿರುವ ಟೂರ್ನಮೆಂಟ್‌ನಲ್ಲಿ ಮೀಸಲು ದಿನ ನಿಗದಿಪಡಿಸದಿರುವ ಕುರಿತು ಪ್ರತಿಕ್ರಿಯೆ ನೀಡಿರುವ ಐಸಿಸಿ ಸಿಇಒ ಡೇವಿಡ್ ರಿಚರ್ಡ್ಸ್‌ಸನ್,‘‘ಮೀಸಲು ದಿನವು ಪಿಚ್ ತಯಾರಿ, ತಂಡದ ಚೇತರಿಕೆಯ ಮೇಲೆ ಪರಿಣಾಮಬೀರುತ್ತದೆ. ಪ್ರಯಾಣದ ದಿನಗಳು, ವಸತಿ ಹಾಗೂ ಸ್ಥಳಗಳ ಲಭ್ಯತೆ, ನೇರ ಪ್ರಸಾರಕ್ಕೆ ಸಂಬಂಧಿಸಿದ ಸಾಧನಗಳ ಸಾಗಾಣಿಕೆಗೆ ತೊಂದರೆಯಾಗುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ಕೆಲವರು ದೂರದಿಂದ ಪಂದ್ಯ ವೀಕ್ಷಿಸಲು ಬರುತ್ತಾರೆ. ಮೀಸಲು ದಿನದಲ್ಲೂ ಮಳೆ ಬಿಡುವು ನೀಡುತ್ತದೆ ಎಂದು ಖಾತ್ರಿ ನೀಡಲು ಸಾಧ್ಯವಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News