ವಿಶ್ವಕಪ್ ಜಾಹೀರಾತು: ಅಭಿನಂದನ್ ರನ್ನು ಅಣಕವಾಡಿದ ಪಾಕ್ ಜಾಹೀರಾತಿನ ವಿರುದ್ಧ ಭಾರೀ ಆಕ್ರೋಶ

Update: 2019-06-12 10:44 GMT

ಹೊಸದಿಲ್ಲಿ, ಜೂ.12: ಪಾಕಿಸ್ತಾನದ ಟಿವಿ ವಾಹಿನಿಯೊಂದು ವಿಶ್ವಕಪ್ ಜಾಹೀರಾತಿನಲ್ಲಿ ಭಾರತದ ಐಎಎಫ್ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರನ್ನು ಅಣಕವಾಡಿರುವ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.   ಅಭಿನಂದನ್ ಅವರನ್ನೇ ಹೋಲುವ ವ್ಯಕ್ತಿಯನ್ನು ತೋರಿಸಿರುವ ಈ ಜಾಹೀರಾತು ಅಗ್ಗದ ನಾಚಿಕೆಗೇಡಿನ ಕ್ರಮ ಎಂದು ಟ್ವಿಟ್ಟರಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನದ ವಶದಲ್ಲಿದ್ದಾಗ ಅಭಿನಂದನ್ ಹಾಗೂ ಪಾಕ್ ಅಧಿಕಾರಿಗಳ ಜತೆ ನಡೆದ ಮಾತುಕತೆಯ ಎಳೆಯನ್ನೇ ತೆಗೆದುಕೊಂಡು ಈ ಅಣಕವಾಡಿ ಜಾಹೀರಾತು ಮೂಡಿ ಬಂದಿದೆ. ಜಾಹೀರಾತಿನಲ್ಲಿ ಅಭಿನಂದನ್ ಅವರನ್ನು ಹೋಲುವ ಮೀಸೆ ಹೊಂದಿರುವ ಹಾಗೂ ಟೀಮ್ ಇಂಡಿಯಾ ಜರ್ಸಿ ಧರಿಸಿ ಕೈಯ್ಯಲ್ಲಿ ಟೀ ಕಪ್ ಹಿಡಿದಿರುವ ವ್ಯಕ್ತಿಯನ್ನು ಇನ್ನೊಬ್ಬ ವಿಚಾರಣೆ ನಡೆಸುತ್ತಾ ``ನಿನ್ನ ಹನ್ನೊಂದರ ಬಳಗದ ಕುರಿತಂತೆ ತಿಳಿಸು ಎಂದಾಗ ``ಕ್ಷಮಿಸಿ, ನಾನು ಆ ಬಗ್ಗೆ ಏನೂ ಹೇಳುವಂತಿಲ್ಲ'' ಎನ್ನುತ್ತಾನೆ. ಟಾಸ್ ಗೆದ್ದರೆ ಏನು ಮಾಡುತ್ತೀರಿ  ಎಂದಾಗಲೂ ಅದೇ ಉತ್ತರ ದೊರೆಯುತ್ತದೆ. ಕೊನೆಗೆ ಅಭಿನಂದನ್ ಹೋಲುವ ವ್ಯಕ್ತಿ ಟೀ ಕಪ್ ಹಿಡಿದು ಹೊರಟಾಗ ಅದನ್ನೆಲ್ಲಿ ಕೊಂಡು ಹೋಗುತ್ತೀಯಾ ಇಲ್ಲೇ ಇಡು ಎಂದು ಹೇಳಿ ಇನ್ನೊಬ್ಬ ಅದನ್ನು ಕಸಿದುಕೊಳ್ಳುತ್ತಾನೆ.

ಭಾರತ ಮತ್ತು ಪಾಕ್ ಕ್ರಿಕೆಟ್ ತಂಡಗಳ ನಡುವೆ ವಿಶ್ವ ಕಪ್ ಪಂದ್ಯಾವಳಿಯ ಅಂಗವಾಗಿ ಜೂನ್ 16ರಂದು ಪಂದ್ಯ ನಡೆಯಲಿರುವ ಹಿನ್ನೆಲೆಯಲ್ಲಿ ಈ ಜಾಹೀರಾತು ಪ್ರಸಾರವಾಗುತ್ತಿದೆ.

``ನಮ್ಮ ಹೀರೋನನ್ನು ಈ ರೀತಿ ಪಾಕಿಸ್ತಾನ ಅಣಕವಾಡಿರುವುದು ನಾಚಿಕೆಗೇಡು,'' ಎಂದು ಆರ್‍ಪಿಜಿ ಎಂಟರ್‍ಪ್ರೈಸಸ್ ನ ಹರೀಶ್ ಗೋಯೆಂಕ ಟ್ವೀಟ್  ಟ್ವೀಟ್ ಮಾಡಿದ್ದಾರೆ.

``ಪಾಕಿಸ್ತಾನಕ್ಕೆ ವಿಶ್ವಕಪ್ ನಿಭಾಯಿಸಲು ಸಾಧ್ಯವಾಗದೇ ಇದ್ದರೂ ಈ ಚಹಾ ಕಪ್ ಆದರೂ ಸರಿಯಾಗಿಡಲಿ'' ಎಂದು ಇನ್ನೊಬ್ಬರು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News