"ಸರಕಾರಿ ಆಸ್ಪತ್ರೆ ಅನುದಾನದಲ್ಲಿ ಶೇ.30ರಷ್ಟನ್ನು ವೈದ್ಯರು, ಸಿಬ್ಬಂದಿಗೆ ಪ್ರೋತ್ಸಾಹಧನ ನೀಡಲು ನಿರ್ಧಾರ"

Update: 2019-06-12 17:07 GMT

ಬೆಂಗಳೂರು, ಜೂ.12: ವೈದ್ಯರನ್ನು ಉತ್ತೇಜಿಸುವ ಸಲುವಾಗಿ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಸರಕಾರಿ ಆಸ್ಪತ್ರೆಗಳಿಗೆ ಬರುವ ಅನುದಾನದಲ್ಲಿ ಶೇ.30ರಷ್ಟನ್ನು ವೈದ್ಯರು ಹಾಗೂ ಸಿಬ್ಬಂದಿಗೆ ಪ್ರೋತ್ಸಾಹ ಧನದ ರೂಪದಲ್ಲಿ ನೀಡಲು ನಿರ್ಧರಿಸಲಾಗಿದೆ ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲ ಹೇಳಿದರು.

ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಯೋಜನೆಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಂದ ಬಿಡುಗಡೆಯಾಗುವ ಹಣದಲ್ಲಿ ಶೇ.30 ವೈದ್ಯರ ಉತ್ತೇಜನಕ್ಕೆ, ಶೇ.50 ರಷ್ಟನ್ನು ಆಯಾ ಆಸ್ಪತ್ರೆಗಳ ಅಭಿವೃದ್ಧಿಗೆ ಹಾಗೂ ಶೇ.20 ರಷ್ಟು ರಾಜ್ಯ ನಿಧಿಗೆ ಸಂದಾಯವಾಗಲಿದೆ. ಈ ಯೋಜನೆ ಜಾರಿಯಾದಂದಿನಿಂದ ಇದುವರೆಗೆ 147 ಕೋಟಿ ರೂ. ಸಂಗ್ರಹವಾಗಿದೆ. ಪ್ರೋತ್ಸಾಹ ಧನ ಹಂಚಿಕೆ ಸಂಬಂಧ ಶೀಘ್ರದಲ್ಲೇ ನಿಯಮ ರೂಪಿಸಿ ಜಾರಿಗೊಳಿಸಲಾಗುವುದು ಎಂದರು.

ನಿಪಾಹ್ ನಿಯಂತ್ರಣ: ನಿಪಾಹ್ ರಾಜ್ಯದಲ್ಲಿ ನಿಯಂತ್ರಣದಲ್ಲಿದೆ. ಈವರೆಗೆ ಯಾವುದೇ ಪ್ರಕರಣ ವರದಿಯಾಗಿಲ್ಲ. ನಿಪಾಹ್ ಕೇರಳದಲ್ಲಿ ವರದಿಯಾದ ಹಿನ್ನೆಲೆಯಲ್ಲಿ ಗಡಿ ಭಾಗದ ಜಿಲ್ಲೆಗಳಾದ ಚಾಮರಾಜನಗರ, ದಕ್ಷಿಣ ಕನ್ನಡ, ಕೊಡಗು, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಮೈಸೂರುಗಳಲ್ಲಿ ಈ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಮತ್ತು ನಿಯಂತ್ರಣ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಚಿಕೂನ್ ಗುನ್ಯಾ ಕಳೆದ ವರ್ಷಕ್ಕೆ ಹೋಲಿಸಿದರೆ ಕಡಿಮೆಯಾಗಿದೆ. ಜನವರಿಯಿಂದ ಈವರೆಗೆ 473 ಜನರಲ್ಲಿ ಈ ರೋಗ ದೃಢಪಟ್ಟಿದ್ದು, ಯಾವುದೇ ಸಾವು ಸಂಭವಿಸಿಲ್ಲ. ಮಂಗನ ಕಾಯಿಲೆಗೆ ಸಂಬಂಧಿಸಿದಂತೆ 5 ಲಕ್ಷ ಲಸಿಕೆ ವಿತರಿಸಲು ನಿರ್ಧರಿಸಲಾಗಿದೆ. ಜುಲೈ ತಿಂಗಳು 1 ಲಕ್ಷ ನಂತರದ ತಿಂಗಳಲ್ಲಿ 75 ಸಾವಿರದಂತೆ ಲಸಿಕೆ ವಿತರಣೆ ಮಾಡಲಾಗುತ್ತದೆ. ಕಳೆದ ವರ್ಷ 14 ಮಂದಿ ಈ ಕಾಯಿಲೆಗೆ ತುತ್ತಾಗಿದ್ದರು. ಒಂದೂವರೆ ತಿಂಗಳಿಂದ ಈಚೆಗೆ ಯಾವುದೇ ಸಾವು ಸಂಭವಿಸಿಲ್ಲ ಎಂದು ಅವರು ತಿಳಿಸಿದರು.

ಮಂಗನ ಕಾಯಿಲೆ ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಚಾಮೃಆಜನಗರ, ಮೈಸೂರು, ಬೆಳಗಾವಿ, ಹಾಸನ ಜಿಲ್ಲೆಗಳಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡಿತ್ತು. ಈ ಕಾಯಿಲೆಗೆ ಈಗಿರುವ ಲಸಿಕೆ ಅಷ್ಟು ಪರಿಣಾಮಕಾರಿಯಾಗಿಲ್ಲ. ಹಾಗಾಗಿ ಕೇಂದ್ರ ಸರಕಾರದ ಆರೋಗ್ಯ ಮತ್ತು ಸಂಶೋಧನಾ ಇಲಾಖೆಗೆ ಗುಣಮಟ್ಟದ ಲಸಿಕೆ ಕೊಡುವಂತೆ ಕೇಳಿದ್ದೇವೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News