ಡಿಕೆಶಿ ಮನೆ ಮೇಲೆ ಐಟಿ ದಾಳಿ ಪ್ರಕರಣ: ಜೂ.25ಕ್ಕೆ ತೀರ್ಪು ಕಾಯ್ದಿರಿಸಿದ ಕೋರ್ಟ್

Update: 2019-06-12 17:56 GMT

ಬೆಂಗಳೂರು, ಜೂ.12: ಬೆಂಗಳೂರು, ಹೊಸದಿಲ್ಲಿಯ ವಿವಿಧೆಡೆ ನಡೆಸಲಾಗಿದ್ದ ಆದಾಯ ತೆರಿಗೆ(ಐ.ಟಿ) ದಾಳಿ ಪ್ರಕರಣಕ್ಕೆ ಸಂಬಂಧಿಸಿದ ಆರೋಪಗಳಿಂದ ನಮ್ಮನ್ನು ಕೈಬಿಡಬೇಕೆಂದು ಕೋರಿ ಸಚಿವ ಡಿ.ಕೆ.ಶಿವಕುಮಾರ್ ಮತ್ತು ಇತರ ಮೂವರು ಆರೋಪಿಗಳು ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಪೂರ್ಣಗೊಳಿಸಿರುವ ಜನಪ್ರತಿನಿಧಿಗಳ ಕೋರ್ಟ್ ಬುಧವಾರ ತೀರ್ಪು ಕಾಯ್ದಿರಿಸಿದೆ.

ಆರೋಪಿಗಳಾದ ಡಿ.ಕೆ.ಶಿವಕುಮಾರ್, ಎನ್.ರಾಜೇಂದ್ರ ಮತ್ತು ಆಂಜನೇಯ ಹನುಮಂತಯ್ಯ ಸಲ್ಲಿಸಿರುವ ಅರ್ಜಿಗಳನ್ನು, ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ರಾಮಚಂದ್ರ ಡಿ.ಹುದ್ದಾರ್ ವಿಚಾರಣೆ ಮುಕ್ತಾಯಗೊಳಿಸಿದರು. ಡಿಕೆಶಿ ಹಾಗೂ ಇತರೇ ಆರೋಪಿಗಳ ಪರ ವಕೀಲರು ಹಾಗೂ ಐಟಿ ಪರ ವಕೀಲರ ವಾದ ಪ್ರತಿವಾದ ಆಲಿಸಿದ ನ್ಯಾಯಪೀಠವು, ಜೂ.25ಕ್ಕೆ ಆದೇಶ ಕಾಯ್ದಿರಿಸಿತು.

2017ರ ಆಗಸ್ಟ್ 2ರಂದು ಐ.ಟಿ ಅಧಿಕಾರಿಗಳು ಡಿ.ಕೆ.ಶಿವಕುಮಾರ್‌ಗೆ ಸೇರಿದ ಬೆಂಗಳೂರು ಮತ್ತು ಹೊಸದಿಲ್ಲಿಯ ಮನೆಗಳ ಮೇಲೆ ದಾಳಿ ಮಾಡಿ 8.59 ಕೋಟಿ ಮೊತ್ತವನ್ನು ಜಪ್ತಿ ಮಾಡಿದ್ದರು. ಡಿ.ಕೆ.ಶಿವಕುಮಾರ್, ಸಚಿನ್ ನಾರಾಯಣ, ಸುನಿಲ್ ಕುಮಾರ್ ಶರ್ಮ, ಆಂಜನೇಯ ಹನುಮಂತಯ್ಯ ಮತ್ತು ರಾಜೇಂದ್ರ ವಿರುದ್ಧ ಆದಾಯ ತೆರಿಗೆ ವಂಚನೆ, ಹವಾಲ ಹಣಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಐಟಿ ದೂರು ದಾಖಲಿಸಿತ್ತು. ಇದೇ ಪ್ರಕರಣದಲ್ಲಿ ಇಡಿ ವಿಚಾರಣೆ ಗೆ ಹಾಜರಾಗಲು ಡಿಕೆಶಿ ಹಾಗೂ ಇತರೆ ಆರೋಪಿಗಳಿಗೆ ನೋಟಿಸ್ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News