ವಿಳಂಬ ಧೋರಣೆ ಖಂಡಿಸಿ ಕೆಪಿಎಸ್ಸಿ ವಿರುದ್ಧ ಅಭ್ಯರ್ಥಿಗಳಿಂದ ಧರಣಿ

Update: 2019-06-12 18:10 GMT

ಬೆಂಗಳೂರು, ಜೂ.12: ಕರ್ನಾಟಕ ಲೋಕಸೇವಾ ಆಯೋಗದ(ಕೆಪಿಎಸ್ಸಿ) ವಿಳಂಬ ಧೋರಣೆ ಖಂಡಿಸಿ, ಉದ್ಯೋಗ ಆಕಾಂಕ್ಷಿಗಳು ‘ಕೆಪಿಎಸ್ಸಿ ಕದ ತಟ್ಟುವ’ ವಿನೂತನ ಧರಣಿ ನಡೆಸಿದರು.

ಬುಧವಾರ ನಗರದ ವಿಧಾನಸೌಧದ ಸಮೀಪದಲ್ಲಿರುವ ಕೆಪಿಎಸ್ಸಿ ಕಚೇರಿ ಎದುರು ಧರಣಿ ನಡೆಸಿದ ಅಭ್ಯರ್ಥಿಗಳು, ಸಂದರ್ಶನದ ದಿನಾಂಕ ನಿಗದಿ ವಿಳಂಬಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

ಈ ಕುರಿತು ಧರಣಿಯ ನೇತೃತ್ವ ವಹಿಸಿ ಮಾತನಾಡಿದ ಮಾಜಿ ಸಚಿವ ಸುರೇಶ್ ಕುಮಾರ್, 2015ರಲ್ಲಿ ಕೆಪಿಎಸ್ಸಿ ಸಂದರ್ಶನ ನಡೆದು, ಎರಡು ವರ್ಷವಾದ ಬಳಿಕ ಫಲಿತಾಂಶ ಪ್ರಕಟವಾಗಿತ್ತು. ಆದರೆ, ಈವರೆಗೆ ಸಂದರ್ಶನಕ್ಕೆ ವೇಳಾಪಟ್ಟಿ ಪ್ರಕಟಿಸಿಲ್ಲ. ಕೆಪಿಎಸ್ಸಿ ಅಧಿಕಾರಿಗಳು ಮತ್ತು ಆಡಳಿತ ಮಂಡಳಿ ನಡುವೆ ಹೊಂದಾಣಿಕೆಯ ಕೊರತೆಯಾಗಿದ್ದು, ಇಬ್ಬರ ಜಗಳದಲ್ಲಿ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ ಎಂದರು.

ಎಚ್ಚರಿಕೆ: ಕೆಪಿಎಸ್ಸಿ ಕಾರ್ಯದರ್ಶಿ ಧರಣಿ ಸ್ಥಳಕ್ಕೆ ಭೇಟಿ ನೀಡಿ, ಸಂದರ್ಶನದ ವೇಳಾಪಟ್ಟಿ ಪ್ರಕಟಿಸುವವರೆಗೆ ನಾವು ಹೋಗುವುದಿಲ್ಲ ಎಂದು ಸುರೇಶ್‌ಕುಮಾರ್ ಎಚ್ಚರಿಸಿದರು.

ಏನಿದು ಪ್ರತಿಭಟನೆ?: 2015ನೇ ಸಾಲಿನ ನೇಮಕಾತಿಗಾಗಿ 2017ರ ಮೇ 12ರಂದು ಕೆಪಿಎಸ್ಸಿ ಅಧಿಸೂಚನೆ ಹೊರಡಿಸಿತ್ತು. ಅದೇ ವರ್ಷ ಆಗಸ್ಟ್ 18ರಂದು ಪೂರ್ವಭಾವಿ ಪರೀಕ್ಷೆ, ಡಿ.22ರಂದು ಮುಖ್ಯ ಪರೀಕ್ಷೆ ನಡೆದಿತ್ತು. 2019ರ ಜ. 28ರಂದು ಮುಖ್ಯ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದರೂ ನಂತರದ ಪ್ರಕ್ರಿಯೆ ನಡೆದಿಲ್ಲ. ಈ ವಿಳಂಬ ಖಂಡಿಸಿ ಪ್ರತಿಭಟನೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News