ಕಾರ್ನಾಡ್ ವಿಚಾರಗಳ ಕುರಿತು ರಾಷ್ಟ್ರಮಟ್ಟದ ಚರ್ಚೆಗಳಾಗಲಿ: ಹಿರಿಯ ವಿಮರ್ಶಕ ಸಿ.ಎನ್.ರಾಮಚಂದ್ರನ್

Update: 2019-06-12 18:22 GMT

ಬೆಂಗಳೂರು, ಜೂ.12: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ನಾಟಕಕಾರ ಗಿರೀಶ್ ಕಾರ್ನಾಡರ ವ್ಯಕ್ತಿತ್ವ ನೇರ ಹಾಗೂ ನಿಷ್ಠುರ ಪ್ರಭಾವದಿಂದಾಗಿ ಸಮಕಾಲೀನವಾಗುವ ಗುಣವನ್ನು ಹೊಂದಿತ್ತು. ಹೀಗಾಗಿ ಅವರ ವಿಚಾರಗಳ ಕುರಿತು ರಾಷ್ಟ್ರಮಟ್ಟದಲ್ಲಿ ಚರ್ಚೆ ನಡೆಯಬೇಕಿದೆ ಎಂದು ಹಿರಿಯ ವಿಮರ್ಶಕ ಡಾ.ಸಿ.ಎನ್.ರಾಮಚಂದ್ರನ್ ಅಭಿಪ್ರಾಯಿಸಿದ್ದಾರೆ.

ಕೇಂದ್ರ ಸಾಹಿತ್ಯ ಅಕಾಡೆಮಿ ನಗರದಲ್ಲಿ ಆಯೋಜಿಸಿದ್ದ ನಟ, ಪ್ರಗತಿಪರ ಚಿಂತಕ ಡಾ.ಗಿರೀಶ್ ಕಾರ್ನಾಡರ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅವರು ಕೇವಲ ನಾಟಕ, ಸಾಹಿತ್ಯ ರಚನೆಗಳಷ್ಟೆ ಸೀಮಿತವಾಗಿರಲಿಲ್ಲ. ಪ್ರಗತಿಪರ ಸಾರ್ವಜನಿಕ ಬುದ್ಧಿಜೀವಿಯೂ ಹಾಗೂ ಮಾನವತಾವಾದಿಯೂ ಆಗಿದ್ದರು ಎಂದು ತಿಳಿಸಿದರು.

ಹಿರಿಯ ಕವಿ ಸಿದ್ಧಲಿಂಗಯ್ಯ ಮಾತನಾಡಿ, ಹಿರಿಯ ನಾಟಕಕಾರ, ವಿಚಾರವಾದಿ ಗಿರೀಶ್ ಕಾರ್ನಾಡರ ನಿಧನದ ನಂತರ ಅವರ ಪಾರ್ಥಿವ ಶರೀರವನ್ನು ಸರಳವಾಗಿ ಅಂತ್ಯ ಸಂಸ್ಕಾರ ನಡೆದಿದ್ದು, ಅವರು ತಮ್ಮ ಬದುಕಿನಲ್ಲಿ ಹೇಗೆ ಬದುಕಿದ್ದರು ಎಂಬುದನ್ನು ಸಾರಿ ಹೇಳುತ್ತದೆ. ದೇಶದ ಸಾಹಿತಿಗಳು ಅವರಿಂದ ಕಲಿಯಬೇಕಾದದ್ದು ಸಾಕಷ್ಟಿದೆ ಎಂದು ತಿಳಿಸಿದರು.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕಂಬಾರ ಮಾತನಾಡಿ, ನಾನು, ಗಿರೀಶ್ ಕಾರ್ನಾಡ್ ಐದು ದಶಕಗಳಿಂದ ಆತ್ಮೀಯ ಒಡನಾಟ ಹೊಂದಿದ್ದೆವು. ಇಬ್ಬರೂ ಜಿದ್ದಿಗೆ ಬಿದ್ದವರಂತೆ ಒಬ್ಬರಿಗೊಬ್ಬರು ಪೈಪೋಟಿ ನೀಡುವಂತಹ ನಾಟಕಗಳನ್ನು ಬರೆದೆವು ಎಂದು ಸ್ಮರಿಸಿದರು.

ಗಿರೀಶ್ ಕಾರ್ನಾಡರ ಸಾವು ಇಡೀ ಸಾಹಿತ್ಯ ಲೋಕಕ್ಕೆ ಅಪಾರ ನಷ್ಟ. ಅಂತಹ ಗೆಳೆಯನನ್ನು ಕಳೆದುಕೊಂಡ ನನಗೆ ಅತೀವ ನೋವಾಗಿದೆ ಎಂದು ದುಃಖತಪ್ತರಾದರು. ಈ ವೇಳೆ ಪ್ರೊ.ಎಲ್.ಎನ್.ಮುಕುಂದರಾಜ್ ನುಡಿನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News