ಮತ್ತೊಂದು ವಿಶ್ವ ದಾಖಲೆಯ ಅಂಚಿನಲ್ಲಿ ವಿರಾಟ್ ಕೊಹ್ಲಿ

Update: 2019-06-13 06:40 GMT

ಲಂಡನ್, ಜೂ.13: ಆರಂಭಿಕ ಆಟಗಾರ ಶಿಖರ್ ಧವನ್ ಅನುಪಸ್ಥಿತಿಯಲ್ಲಿ ನಾಯಕ ವಿರಾಟ್ ಕೊಹ್ಲಿ ಮೇಲಿನ ಜವಾಬ್ದಾರಿ ಹೆಚ್ಚಾಗಿದೆ. ಮೂರನೇ ಕ್ರಮಾಂಕದಲ್ಲಿ ಆಡುವ ಕೊಹ್ಲಿ ಆಸ್ಟ್ರೇಲಿಯ ವಿರುದ್ದ ರವಿವಾರ ನಡೆದಿದ್ದ ವಿಶ್ವಕಪ್ ಪಂದ್ಯದಲ್ಲಿ 82 ರನ್ ಗಳಿಸಿ ಉತ್ತಮ ಟಚ್‌ನಲ್ಲಿದ್ದಂತೆ ಕಂಡುಬಂದಿದ್ದರು. ಇದೀಗ ಅವರು ಮತ್ತೊಂದು ವಿಶ್ವ ದಾಖಲೆಯೊಂದನ್ನು ನಿರ್ಮಿಸುವ ಅಂಚಿನಲ್ಲಿದ್ದಾರೆ.

ಕೊಹ್ಲಿಗೆ ಅತ್ಯಂತ ವೇಗವಾಗಿ ಏಕದಿನ ಕ್ರಿಕೆಟ್‌ನಲ್ಲಿ 11,000 ರನ್ ಪೂರೈಸಲು ಕೇವಲ 57 ರನ್ ಅಗತ್ಯವಿದೆ. ಈಗಾಗಲೇ ಅತ್ಯಂತ ವೇಗವಾಗಿ 10,000 ರನ್ ಪೂರೈಸಿ ದಾಖಲೆ ಮಾಡಿರುವ ಕೊಹ್ಲಿ ಸದ್ಯ 221 ಇನಿಂಗ್ಸ್‌ಗಳಲ್ಲಿ 10,943 ರನ್ ಗಳಿಸಿದ್ದಾರೆ. ಒಂದು ವೇಳೆ ಅವರು ಗುರುವಾರ ನಡೆಯಲಿರುವ ನ್ಯೂಝಿಲ್ಯಾಂಡ್ ವಿರುದ್ಧ ಪಂದ್ಯದಲ್ಲಿ 57 ರನ್ ಗಳಿಸಲು ಸಮರ್ಥರಾದರೆ 11 ವರ್ಷದೊಳಗೆ ಈ ಸಾಧನೆಯ ಮೈಲುಗಲ್ಲು ತಲುಪಿದ ಮೊದಲ ಆಟಗಾರನೆಂಬ ಕೀರ್ತಿಗೆ ಭಾಜನರಾಗಲಿದ್ದಾರೆ.

ಕೊಹ್ಲಿ 11,000 ರನ್ ಗಳಿಸಿದ ಭಾರತದ ಮೂರನೇ ಹಾಗೂ ವಿಶ್ವದ 9ನೇ ಕ್ರಿಕೆಟಿಗ ಎನಿಸಿಕೊಳ್ಳುತ್ತಾರೆ. ಭಾರತದ ಸಚಿನ್ ತೆಂಡುಲ್ಕರ್ ಹಾಗೂ ಸೌರವ್ ಗಂಗುಲಿ ಈಗಾಗಲೇ ಈ ಸಾಧನೆ ಮಾಡಿದ್ದಾರೆ.

ಭಾರತದ ನಾಯಕನ ಮುಂದೆ ಮತ್ತೊಂದು ಸಣ್ಣ ಮೈಲುಗಲ್ಲು ತಲುಪುವ ಅವಕಾಶ ಕೂಡ ಇದೆ. ಅವರು ನ್ಯೂಝಿಲ್ಯಾಂಡ್ ವಿರುದ್ದ ಇನ್ನೊಂದು ಶತಕ ಗಳಿಸಿದರೆ ವೀರೇಂದ್ರ ಸೆಹ್ವಾಗ್ ಹಾಗೂ ರಿಕಿ ಪಾಂಟಿಂಗ್ ದಾಖಲೆಯನ್ನು ಸರಿಗಟ್ಟುತ್ತಾರೆ. ಸೆಹ್ವಾಗ್ ಹಾಗೂ ಪಾಂಟಿಂಗ್ ಕಿವೀಸ್ ವಿರುದ್ದ ತಲಾ 6 ಶತಕಗಳನ್ನು ಗಳಿಸಿದ್ದು, ಕೊಹ್ಲಿ ಈ ತನಕ 5 ಶತಕಗಳನ್ನು ತನ್ನ ಹೆಸರಲ್ಲಿ ಬರೆಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News