ಜಮ್ಮು ಕಾಶ್ಮೀರದ ಸಾರ್ವಜನಿಕ ಸುರಕ್ಷತಾ ಕಾಯ್ದೆ ಕುರಿತ ಆ್ಯಮ್ನೆಸ್ಟಿ ವರದಿ ಬಿಡುಗಡೆಗೆ ಅನುಮತಿ ನಿರಾಕರಣೆ

Update: 2019-06-13 07:54 GMT

ಹೊಸದಿಲ್ಲಿ, ಜೂ.13:  ಜಮ್ಮು ಕಾಶ್ಮೀರದ ವಿವಾದಿತ ಸಾರ್ವಜನಿಕ ಸುರಕ್ಷತಾ ಕಾಯಿದೆಯ ಕುರಿತಾದ ವರದಿಯನ್ನು ಬಿಡುಗಡೆಗೊಳಿಸುವ ಉದ್ದೇಶದಿಂದ ಬುಧವಾರ ಶ್ರೀನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಲು ಉದ್ದೇಶಿಸಿದ್ದ ಆಮ್ನೆಸ್ಟಿ ಇಂಟರ್ ನ್ಯಾಷನಲ್ ಗೆ  ಅನುಮತಿ ನಿರಾಕರಿಸಲಾಗಿದೆ. ಪ್ರಸಕ್ತ `ಕಾನೂನು ಸುವ್ಯವಸ್ಥೆ ಪರಿಸ್ಥಿತಿಯ' ಕಾರಣ ನೀಡಿ ಜಿಲ್ಲಾಡಳಿತ ಈ ಪತ್ರಿಕಾಗೋಷ್ಠಿಗೆ ಅನುಮತಿ ನಿರಾಕರಿಸಿದೆ.

ಶ್ರೀನಗರ ಜಿಲ್ಲಾಧಿಕಾರಿ ಕಚೇರಿಯ ಕೆಲ ಅಧಿಕಾರಿಗಳು ಈ ಕುರಿತಂತೆ ಮೌಖಿಕ ಮಾಹಿತಿ ನೀಡಿದ್ದಾರೆಂದು ಆಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾದ ಮಾಧ್ಯಮ ಘಟಕದ ಉಸ್ತುವಾರಿ ಹೊಂದಿರುವ ನದಿಯಾ ಈರಂ ತಿಳಿಸಿದ್ದಾರೆ.

ಆಮ್ನೆಸ್ಟಿ ವರದಿ ‘ಟೈರೆನ್ನಿ ಆಫ್ ಎ ಲಾಲೆಸ್ಸ್ ಲಾ : ಡಿಟೆನ್ಶನ್ ವಿದೌಟ್ ಚಾರ್ಜ್ ಆರ್ ಟ್ರಯಲ್ ಅಂಡರ್ ದಿ ಜೆ & ಕೆ ಪಬ್ಲಿಕ್ ಸೇಫ್ಟಿ ಆ್ಯಕ್ಟ್'' ಅನ್ನು  ಜಾಗತಿಕವಾಗಿ ಆನ್‍ಲೈನ್ ಮೂಲಕ ಬಿಡುಗಡೆಗೊಳಿಸಲಾಗಿದ್ದು, ಈ ವಿವಾದಿತ ಕಾಯಿದೆಯನ್ನು ವಾಪಸ್ ಪಡೆಯಬೇಕೆಂದು ವರದಿಯಲ್ಲಿ ಆಮ್ನೆಸ್ಟಿ ಆಗ್ರಹಿಸಿದೆ.

ರಾಜ್ಯದ ಆಡಳಿತ ಹಾಗೂ ಸ್ಥಳೀಯ ಜನರ ನಡುವೆ ಉದ್ವಿಗ್ನತೆಯನ್ನು ಈ ಕಾಯಿದೆ ಪ್ರಚೋದಿಸುತ್ತಿದೆಯೆಂದೂ ಆಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾ ಮುಖ್ಯಸ್ಥ ಆಕಾರ್ ಪಟೇಲ್ ಹೇಳಿದ್ದಾರೆ.

ರಾಜ್ಯದ ಸುರಕ್ಷತೆಗೆ ಧಕ್ಕೆ ತರುವ ರೀತಿಯಲ್ಲಿ ವರ್ತಿಸಿದ ವ್ಯಕ್ತಿಯನ್ನು ಈ ಕಾಯಿದೆಯಡಿ ಎರಡು ವರ್ಷಗಳ ತನಕ  ಬಂಧಿಸಬಹುದಾಗಿದೆ ಹಾಗೂ ವ್ಯಕ್ತಿಯೊಬ್ಬ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ರೀತಿಯಲ್ಲಿ ಕಾರ್ಯಾಚರಿಸಿದರೆ ಒಂದು ವರ್ಷ ತನಕ ಬಂಧನದಲ್ಲಿಡುವ ಅಧಿಕಾರವನ್ನು ಆಡಳಿತಕ್ಕೆ ಈ ಕಾನೂನು  ಒದಗಿಸುವುದಲ್ಲದೆ ಬಂಧನದ ಸಮಯ ಯಾವುದೇ ಮಾಹಿತಿ ನೀಡುವ ಅಗತ್ಯವೂ ಇಲ್ಲವಾಗಿದೆ.

ಈ ಕಾಯಿದೆಯಡಿ 2007 ಹಾಗೂ 2016ರ ನಡುವೆ  2,400 ಜನರನ್ನು ಬಂಧಿಸಲಾಗಿತ್ತಾದರೂ ಅವುಗಳಲ್ಲಿ ಶೇ 58ರಷ್ಟು ಮಂದಿಯನ್ನು ನ್ಯಾಯಾಲಯಗಳು ಖುಲಾಸೆಗೊಳಿಸಿದ್ದವು.

ಈ ಕಾಯಿದೆಯಡಿಯಲ್ಲಿ 2012-2018ರ ಅವಧಿಯಲ್ಲಿ 210 ಜನರ ಬಂಧನ ಪ್ರಕರಣಗಳನ್ನು ತನ್ನ ವರದಿ ಸಿದ್ಧ ಪಡಿಸುವಾಗ ಆಮ್ನೆಸ್ಟಿ ಪರಿಶೀಲಿಸಿತ್ತಲ್ಲದೆ ಈ ಕಾನೂನನ್ನು ದುರುಪಯೋಗ ಪಡಿಸಲಾಗುತ್ತಿದೆಯೆಂದೂ ಕಂಡು ಕೊಂಡಿತ್ತು. ಬಂಧಿತರಿಗೆ ಜಾಮೀನು ನಿರಾಕರಿಸುವ ನಿಟ್ಟಿನಲ್ಲಿ ನ್ಯಾಯಾಧೀಶರು ನೀಡುತ್ತಿರುವ ಆದೇಶಗಳು ಒಂದೇ ರೀತಿಯಾಗಿದ್ದವು.  ಈ ಕಾಯಿದೆಯು ಅಂತಾರಾಷ್ಟ್ರೀಯ  ಮಾನವ ಹಕ್ಕುಗಳ ಕಾನೂನಿನ ಉಲ್ಲಂಘನೆಯೂ ಆಗಿದೆ ಎಂದು ಆಮ್ನೆಸ್ಟಿ ಹೇಳಿದೆ.

ಈ ಕಾಯಿದೆ ಮತ್ತದರ ಜಾರಿ ಕುರಿತಾದ ವರದಿಗಳನ್ನು ಆಮ್ನೆಸ್ಟಿ 2011 ಹಾಗೂ 2012ರಲ್ಲಿಯೂ ಪ್ರಕಟಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News