ಪ್ರಜಾಪ್ರಭುತ್ವದಲ್ಲಿ ಚುನಾವಣೆಯೇ ಎಲ್ಲವೂ ಅಲ್ಲ: ಬರಗೂರು ರಾಮಚಂದ್ರಪ್ಪ

Update: 2019-06-13 15:14 GMT

ಬೆಂಗಳೂರು, ಜೂ.13: ‘ಪ್ರಜಾಪ್ರಭುತ್ವ ವ್ಯವಸ್ಥೆಗೆ ಚುನಾವಣೆ ಎನ್ನುವುದು ಕೇವಲ ಒಂದು ಪೂರಕ ಸಾಧನವೆ ಹೊರತು, ಅದೇ ಎಲ್ಲವೂ ಅಲ್ಲ. ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದರೆ ಪ್ರಜಾಪ್ರಭುತ್ವ ಉಳಿಯಿತು ಎಂದರ್ಥವಲ್ಲ’ ಎಂದು ಹಿರಿಯ ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ ತಿಳಿಸಿದರು.

ಗುರುವಾರ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಪ್ರೊ.ಬಿ.ಕೃಷ್ಣಪ್ಪ ಅವರ 81ನೇ ಜನ್ಮ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಸಾಮಾಜಿಕ ಸಮಾನತೆಗಾಗಿ ಸಂಘರ್ಷ ಸಮಾವೇಶಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಭಾರತದಲ್ಲಿ ಈಗಿರುವುದು ಪಂಚೇಂದ್ರಿಯ ರಹಿತವಾದ ತಾಂತ್ರಿಕ ಪ್ರಜಾಪ್ರಭುತ್ವವಷ್ಟೆ. ಆಳುವ ವರ್ಗವು ಪ್ರಜಾಪ್ರಭುತ್ವದ ಕಿವಿಗಳನ್ನು ಕೊಯ್ದಿದೆ. ಮೂಗನ್ನು ಗಟ್ಟಿಯಾಗಿ ಹಿಡಿದಿದೆ. ಆದ್ದರಿಂದ ಇದೊಂದು ಸಂವೇದನಾರಹಿತ ಪ್ರಜಾಪ್ರಭುತ್ವವಾಗಿದೆ ಎಂದು ಅವರು ಹೇಳಿದರು.

ರಾಜಕೀಯಕ್ಕಾಗಿ ಶ್ರೀರಾಮನನ್ನು ಬೀದಿಗೆ ತರಲಾಗುತ್ತಿದೆ. ಈ ನಿಟ್ಟಿನಲ್ಲಿ ಜನಪರವಾದ ಚಳವಳಿಗಳೂ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದ್ದು, ನಮ್ಮಲ್ಲಿನ ಒಡಕುಗಳು ಕೋಮುವಾದಿ ಶಕ್ತಿಗಳಿಗೆ ಅವಕಾಶ ನೀಡದಂತೆ ಎಚ್ಚರಿಕೆ ವಹಿಸಬೇಕಾಗಿದೆ. ಸೈದ್ಧಾಂತಿಕ ಸೌಹಾರ್ದತೆ ಮೂಲಕ ಸಂಘರ್ಷಕ್ಕೆ ಸಿದ್ಧರಾಗಬೇಕು ಎಂದು ಅವರು ಕಿವಿಮಾತು ಹೇಳಿದರು.

ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ನಾನು ಸಚಿವನಾಗಿದ್ದಾಗ ದಲಿತ, ಹಿಂದುಳಿದ ವರ್ಗಗಳಿಗಾಗಿ ಸಾಕಷ್ಟು ಕೆಲಸ ಮಾಡಿದೆ. ಆದರೂ ನಾನು ಸತತವಾಗಿ ಸೋಲುತ್ತಿದ್ದೇನೆ. ನಾನೇ ಯಾಕೆ, ಸಮಾನತೆಗಾಗಿ ಶ್ರಮಿಸಿದ ಸ್ವತಃ ಅಂಬೇಡ್ಕರ್ ಕೂಡ ಸೋತಿದ್ದರು. ಹಾಗಿದ್ದರೆ, ಜನ ಮೂರ್ಖರೋ? ನಾವು ಮೂರ್ಖರೋ? ಗೊತ್ತಾಗುತ್ತಿಲ್ಲ. ಅದೇನೇ ಇರಲಿ, ನಾನು ಈಗ ಸೋಲಿನಲ್ಲೇ ಗೆಲುವು ಕಾಣುತ್ತಿದ್ದೇನೆ ಎಂದು ಹೇಳಿದರು.

ಈಚೆಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಘಟಾನುಘಟಿ ನಾಯಕರಾದ ಎಚ್.ಡಿ. ದೇವೇಗೌಡ, ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ, ಕೆ.ಎಚ್. ಮುನಿಯಪ್ಪ ಗೆಲ್ಲಲೇಬೇಕಾದವರು. ಆದರೆ ಸೋಲನನುಭವಿಸಿದರು. ಮತಯಂತ್ರ ಅವರನ್ನು ಸೋಲಿಸಿತೋ ಅಥವಾ ಜನ ಸೋಲಿಸಿದರೋ ಗೊತ್ತಾಗುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಪ್ರೊ.ಬಿ. ಕೃಷ್ಣಪ್ಪ ಟ್ರಸ್ಟ್ ಮುಖ್ಯಸ್ಥೆ ಇಂದಿರಾ ಕೃಷ್ಣಪ್ಪ, ಪತ್ರಕರ್ತ ದಿನೇಶ್ ಅಮೀನ್‌ ಮಟ್ಟು ಮತ್ತಿತರರು ಉಪಸ್ಥಿತರಿದ್ದರು. ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾವಳ್ಳಿ ಶಂಕರ್ ಅಧ್ಯಕ್ಷತೆ ವಹಿಸಿದ್ದರು. 

ಕಳೆದ ಐದು ವರ್ಷಗಳಲ್ಲಿ ಕೈಯಲ್ಲಿ ಮಲ ಬಾಚುವವರ ಸಂಖ್ಯೆ 1.78 ಕೋಟಿ ಇದ್ದರೆ, ಗಾಡಿಗಳಲ್ಲಿ ಮಲ ಹೊರುವವರ ಸಂಖ್ಯೆ 8.82 ಕೋಟಿ ಆಗಿದೆ. ಸಫಾಯಿ ಕರ್ಮಚಾರಿ ಆಯೋಗದ ಅಂಕಿ-ಅಂಶಗಳ ಪ್ರಕಾರ ಪ್ರತಿ ಐದು ದಿನಕ್ಕೊಬ್ಬ ಸಫಾಯಿ ಕರ್ಮಚಾರಿ ಸಾವನ್ನಪ್ಪುತ್ತಾನೆ. ಆದರೆ, ನಾವು ಮತ್ತೊಂದೆಡೆ ಸ್ವಚ್ಛ ಭಾರತದ ಮಂತ್ರ ಪಠಿಸುತ್ತಿದ್ದೇವೆ. ಬೀದಿಗಳನ್ನು ಸ್ವಚ್ಛಗೊಳಿಸುವುದರಿಂದ ಅದು ಸಾಕಾರ ಆಗುವುದಿಲ್ಲ. ಹೀಗೆ ಬೀದಿ ಸ್ವಚ್ಛಗೊಳಿಸುವ ಪೌರಕಾರ್ಮಿಕರ ಬದುಕು ಹಸನಾಗಬೇಕು. ಆಗ ಮಾತ್ರ ಈ ಪರಿಕಲ್ಪನೆ ಸಾರ್ಥಕಗೊಳ್ಳುತ್ತದೆ.

-ಬರಗೂರು ರಾಮಚಂದ್ರಪ್ಪ, ಹಿರಿಯ ಸಾಹಿತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News