ಆನ್‌ಲೈನ್ ವ್ಯವಸ್ಥೆಯಿಂದ ಭ್ರಷ್ಟಾಚಾರಕ್ಕೆ ಕಡಿವಾಣ: ಮುಖ್ಯಮಂತ್ರಿ ಕುಮಾರಸ್ವಾಮಿ

Update: 2019-06-13 17:27 GMT

ಬೆಂಗಳೂರು, ಜೂ. 13: ದೇಶದಲ್ಲೆ ಮೊಟ್ಟ ಮೊದಲ ಬಾರಿಗೆ ರಾಜ್ಯ ಸರಕಾರ ಭೂ ಪರಿವರ್ತನೆ, ಕಟ್ಟಡ ನಕ್ಷೆ ಅನುಮೋದನೆಗೆ ಆನ್‌ಲೈನ್ ವ್ಯವಸ್ಥೆ ಜಾರಿಗೆ ತಂದಿದ್ದು, ಇದರಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಲಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ.

ಗುರುವಾರ ವಿಧಾನಸೌಧ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಗರಾಭಿವೃದ್ಧಿ ಇಲಾಖೆ, ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶನಾಲಯ, ಪೌರಾಡಳಿತ ಯೋಜನಾ ನಿರ್ದೇಶನಾಲಯ ರೂಪಿಸಿರುವ ಆನ್‌ಲೈನ್ ತಂತ್ರಾಂಶ ಮತ್ತು ವೆಬ್‌ಸೈಟ್‌ಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು. ದೇಶದಲ್ಲೆ ಪ್ರಪ್ರಥಮ ಬಾರಿಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಜನಸ್ನೇಹಿಯಾದ ಈ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಹಿಂದೆ ಭೂಮಿ ದಾಖಲೆ ಮತ್ತು ನಕ್ಷೆ ಅನುಮೋದನೆಗೆ ವಿವಿಧ ಇಲಾಖೆಗಳಿಗೆ ಅಲೆಯಬೇಕಿತ್ತು. ಹೊಸ ಪದ್ದತಿಯಿಂದ ಮನೆಯಲ್ಲೆ ಕುಳಿತು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಹೇಳಿದರು. ನೂತನ ವ್ಯವಸ್ಥೆಯಿಂದ ಅಧಿಕಾರಿಗಳನ್ನು ಭೇಟಿ ಮಾಡುವ ಅಗತ್ಯವಿರುವುದಿಲ್ಲ. ಯಾವುದೇ ವಿಳಂಬವಿಲ್ಲದೆ ನಿಗದಿತ ಕಾಲಮಿತಿಯಲ್ಲಿ ಭೂ ದಾಖಲೆ ಮತ್ತು ನಕ್ಷೆ ಅನುಮೊದನೆಗೆ ಅನುಕೂಲವಾಗಲಿದೆ. ಅಲ್ಲದೆ, ಇದು ಪಾರದರ್ಶಕ ವ್ಯವಸ್ಥೆಯಾಗಿದೆ ಎಂದರು.

ಮೂಲಸೌಲಭ್ಯಕ್ಕೆ ಆದ್ಯತೆ: ಮಹಾನಗರ ಪಾಲಿಕೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲು 150 ಕೋಟಿ ರೂ.ಒದಗಿಸಲಾಗಿದೆ. ಅಲ್ಲದೆ, ಬಿಬಿಎಂಪಿ ವ್ಯಾಪ್ತಿಯಲ್ಲಿ ನೆನೆಗುದ್ದಿಗೆ ಬಿದ್ದಿರುವ ಹೊಸ ವರ್ತುಲ ರಸ್ತೆ, ಎಲಿವೇಟೆಡ್ ಕಾರಿಡಾರ್, ಸಬ್ ಅರ್ಬನ್ ರೈಲ್ವೆ ಯೋಜನೆ ಕೈಗೆತ್ತಿಕೊಳ್ಳಲು ಸಂಬಂಧ ಶೀಘ್ರದಲ್ಲೆ ಕೇಂದ್ರ ಸಚಿವರನ್ನು ಭೇಟಿ ಮಾಡಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದ ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್, ಕಟ್ಟಡ ನಕ್ಷೆಗೆ ಅನುಮೋದನೆ ಪಡೆಯಲು 14 ಇಲಾಖೆಗಳಿಗೆ ಅರ್ಜಿ ಸಲ್ಲಿಸಿ ಅಲೆಯಬೇಕಿತ್ತು. ಅದನ್ನು ತಪ್ಪಿಸಲು ಆನ್‌ಲೈನ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದರು.

ಆನ್‌ಲೈನ್ ಅರ್ಜಿ ಸಲ್ಲಿಸಿದರೆ 14 ಪರವಾನಿಗೆಗಳ ಅರ್ಜಿಗಳನ್ನು ಒಮ್ಮೆಲೆ ಪಡೆದು ಕಂಪ್ಯೂಟರ್ ಮೂಲಕ ಆಯಾ ಇಲಾಖೆಗಳಿಗೆ ರವಾನಿಸಲಾಗುತ್ತದೆ. ನಿಗದಿತ ಅವಧಿಯಲ್ಲಿ ಅನುಮೋದನೆ ಸಿಗದಿದ್ದರೆ ಅದನ್ನು ‘ಡೀಮ್ಡ್ ಲೈಸೆನ್ಸ್’ ಎಂದು ಪರಿಗಣಿಸಲಾಗುತ್ತದೆ.

ಸ್ಥಳ ಪರಿಶೀಲನೆಗೂ ಆನ್‌ಲೈನ್‌ನಲ್ಲೇ ದಿನಾಂಕ ನಿಗದಿಪಡಿಸಲಾಗುವುದು. ನಿಗದಿತ ದಿನದ ಮಾಹಿತಿಯನ್ನು ಸಂಬಂಧಪಟ್ಟ ಎಲ್ಲ ಅಧಿಕಾರಿಗಳಿಗೆ ಹಾಗೂ ಅರ್ಜಿದಾರರಿಗೆ ಎಸ್‌ಎಂಎಸ್ ಮೂಲಕ ತಿಳಿಸಲಾಗುವುದು. ಅಂದು ಎಲ್ಲರೂ ಖುದ್ದು ಹಾಜರಿದ್ದು, ಸ್ಥಳ ಪರಿಶೀಲನೆ ನಡೆಸಬೇಕು ಎಂದು ಹೇಳಿದರು.

ಭೂಮಿ ಬದಲಾವಣೆ, ಕಟ್ಟಡ ನಕ್ಷೆ ಅನುಮೋದನೆ, ಬಡಾವಣೆ ಅನುಮೋದನೆಗೆ ಆನ್‌ಲೈನ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಇದರಿಂದ ನಾಗರಿಕರಿಗೂ ಅನುಕೂಲವಾಗಲಿದೆ. ಸರಕಾರದ ಅದಾಯವೂ ಹೆಚ್ಚಲಿದೆ ಎಂದ ಅವರು, ನಕ್ಷೆ ಅನುಮೋದನೆಗಾಗಿ ಏಕಗವಾಕ್ಷಿ ಯೋಜನೆಗಳನ್ನು ರೂಪಿಸಲಾಗಿದೆ ಎಂದರು.

ಬಿಬಿಎಂಪಿ ಮೇಯರ್ ಗಂಗಾಂಬಿಕೆ, ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಜೈನ್, ಬಿಡಿಎ ಆಯುಕ್ತ ರಾಕೇಶ್ ಸಿಂಗ್, ಪೌರಾಡಳಿತ ಇಲಾಖೆಯ ಶೇಖರಪ್ಪ ಸೇರಿದಂತೆ ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ನಗರದಲ್ಲಿನ ಪೇಯಿಂಗ್ ಗೆಸ್ಟ್‌ಗಳಿಗಾಗಿ ಹೊಸ ರೀತಿಯ ನಿಯಮಾವಳಿಗಳನ್ನು ರೂಪಿಸಲು ರಾಜ್ಯ ಸರಕಾರ ನಿರ್ಧರಿಸಿದೆ. ಶೀಘ್ರವೇ ಇದಕ್ಕಾಗಿ ಹೊಸ ನೀತಿ ಜಾರಿಗೆ ಬರಲಿದೆ. ಅಂಗೀಕೃತ ವಾಸ್ತುಶಿಲ್ಪಿಗಳೆ ಕಟ್ಟಡ ನಿರ್ಮಾಣ ಕೆಲಸ ಮಾಡಬೇಕೆಂಬ ನಿಯಮಾವಳಿಗಳನ್ನು ಜಾರಿಗೆ ತರಲಾಗುತ್ತಿದೆ.

-ಯು.ಟಿ.ಖಾದರ್, ನಗರಾಭಿವೃದ್ಧಿ ಸಚಿವ

ಆಸ್ತಿ ತೆರಿಗೆ ಪಾವತಿ, ಖಾತೆ ಬದಲಾವಣೆ ಸೇವೆಗಳು ಆನ್‌ಲೈನ್‌ನಲ್ಲಿ ಲಭ್ಯವಿದ್ದು, ಇನ್ನು ಮುಂದೆ ಭೂಮಿ ಬದಲಾವಣೆ ಹಾಗೂ ಕಟ್ಟಡ ನಕ್ಷೆ ಅನುಮೋದನೆ, ಬಡಾವಣೆ ನಿರ್ಮಾಣ ಪರವಾನಿಗೆ ಸೇವೆಗಳನ್ನು ಆನ್‌ಲೈನ್ ಮೂಲಕವೇ ಒದಗಿಸಲು ನಿರ್ಧರಿಸಲಾಗಿದೆ.

-ಮಹೇಂದ್ರ ಜೈನ್, ಪ್ರಧಾನ ಕಾರ್ಯದರ್ಶಿ ನಗರಾಭಿವೃದ್ಧಿ ಇಲಾಖೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News