ಬಿಬಿಎಂಪಿ ವ್ಯಾಪ್ತಿಯಲ್ಲಿ 210 ಕೆರೆಗಳಿವೆ: ಹೈಕೋರ್ಟ್‌ಗೆ ಹೇಳಿಕೆ ನೀಡಿದ ಬಿಬಿಎಂಪಿ

Update: 2019-06-13 17:34 GMT

ಬೆಂಗಳೂರು, ಜೂ.13: ಬಿಬಿಎಂಪಿ ವ್ಯಾಪ್ತಿಯಲ್ಲಿ 210 ಕೆರೆಗಳಿದ್ದು, ಆ ಕೆರೆಗಳ ವಿವರವನ್ನು ವೆಬ್‌ಸೈಟ್‌ನಲ್ಲಿ ಉಲ್ಲೇಖ ಮಾಡಲಾಗಿದೆ ಎಂದು ಹೈಕೋರ್ಟ್‌ಗೆ ಬಿಬಿಎಂಪಿ ಪರ ವಕೀಲರು ತಿಳಿಸಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿನ ರಾಜಕಾಲುವೆ ಒತ್ತುವರಿ ತೆರವುಗೊಳಿಸಬೇಕು ಎಂದು ಕೋರಿ ಸಿಟಿಜನ್ಸ್ ಆ್ಯಕ್ಷನ್ ಗ್ರೂಪ್ ಕಾರ್ಯದರ್ಶಿ ನೊಮಿತಾ ಚಾಂಡಿ ಹಾಗೂ ಜೆ.ಪಿ.ನಗರ 4ನೆ ಹಂತದ ಡಾಲರ್ಸ್ ಲೇಔಟ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಗುಂಡಾ ಭಟ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಎಚ್.ಟಿ.ನರೇಂದ್ರಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ಗುರುವಾರ ವಿಚಾರಣೆ ನಡೆಯಿತು.   

ಬಿಬಿಎಂಪಿ ಪರ ವಾದಿಸಿದ ವಕೀಲರು, ಬಿಬಿಎಂಪಿ ವ್ಯಾಪ್ತಿಯಲ್ಲಿ 210 ಕೆರೆಗಳು ಇವೆ ಎಂದು ಹೇಳಿಕೆ ನೀಡಿದರೆ, ಮಾಲಿನ್ಯ ನಿಯಂತ್ರಣ ಮಂಡಳಿ ಪರ ವಕೀಲರು, ಹಿಂದಿನ ಕೆರೆ ಅಭಿವೃದ್ಧಿ ಪ್ರಾಧಿಕಾರದ ವರದಿಯಂತೆ 374 ಕೆರೆಗಳಿವೆ ಎಂದು ಪೀಠಕ್ಕೆ ವಿವರಣೆ ನೀಡಿದರು. ವಕೀಲರ ವಾದ ಆಲಿಸಿದ ನ್ಯಾಯಪೀಠವು ಹಿಂದಿನ ಕೆರೆ ಅಭಿವೃದ್ಧಿ ಪ್ರಾಧಿಕಾರದ ವರದಿಯಂತೆ ಬಿಬಿಎಂಪಿ ವ್ಯಾಪ್ತಿಯಲ್ಲಿ 374 ಕೆರೆಗಳು ಇವೆ ಎಂಬ ವಿಚಾರಣೆ ಹಾಗೂ ಕೆರೆ ಸಂರಕ್ಷಣೆ ಬಗ್ಗೆ ಜೂ.17ರಂದು ವಿಚಾರಣೆ ನಡೆಸಿ ಆದೇಶ ಹೊರಡಿಸಲಾಗುವುದು ಎಂದು ತಿಳಿಸಿತು. ನ್ಯಾಯಪೀಠವು, ಕೆರೆಗಳನ್ನು ಸಂರಕ್ಷಿಸಲು ಹಾಗೂ ಹುಡುಕಲು ಸರಕಾರ ಸಮರ್ಥವಾಗಿದೆ ಎಂದು ಭಾವಿಸಿದ್ದೇನೆ. ಕೆರೆಗಳನ್ನು ಸಂರಕ್ಷಿಸದಿದ್ದರೆ ಸಂವಿಧಾನದ 21ನೆ ಕಲಂ ಅನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಹೇಳಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News