ಕ್ಯಾನ್ಸರ್ ನೊಂದಿಗೆ ಹೋರಾಡುತ್ತಿರುವ ಲೀ ಚೋಂಗ್ ಬ್ಯಾಡ್ಮಿಂಟನ್ ಗೆ ವಿದಾಯ

Update: 2019-06-13 18:39 GMT

ಪುಟ್ರಜಯ, ಜೂ.13: ಮೂಗಿನ ಕ್ಯಾನ್ಸರ್‌ನಿಂದ ಬಳಲುತ್ತಿರುವ ಮಲೇಶ್ಯಾದ ಬ್ಯಾಡ್ಮಿಂಟನ್ ಸ್ಟಾರ್ ಲೀ ಚೊಂಗ್ ವೀ ಗುರುವಾರ ನಿವೃತ್ತಿ ಘೋಷಿಸಿದರು. ಈ ಮೂಲಕ ತನ್ನ 19 ವರ್ಷಗಳ ವೃತ್ತಿಜೀವನಕ್ಕೆ ತೆರೆ ಎಳೆದರು. ಒಟ್ಟು 348 ವಾರಗಳ ಕಾಲ ವಿಶ್ವ ನಂ.1 ಆಟಗಾರನಾಗಿದ್ದ ಲೀಗೆ ವಿಶ್ವ ಚಾಂಪಿಯನ್‌ಶಿಪ್ ಹಾಗೂ ಒಲಿಂಪಿಕ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲದ ನೋವಿದೆ. ಈ ಹಿಂದೆ ಬ್ಯಾಡ್ಮಿಂಟನ್‌ಗೆ ವಾಪಸಾಗುವ ಬಯುಕೆ ವ್ಯಕ್ತಪಡಿಸಿದ್ದ ಅವರು ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ನಿವೃತ್ತಿಯ ನಿರ್ಧಾರ ಪ್ರಕಟಿಸಿದರು.

‘‘ನಿವೃತ್ತಿಯಾಗುವ ನನ್ನ ನಿರ್ಧಾರ ಕಠಿಣವಾದುದು. ಈ ಕ್ರೀಡೆಯನ್ನು ನಾನು ತುಂಬಾ ಇಷ್ಟಪಡುತ್ತೇನೆ. ಆದರೆ ಈ ಕ್ರೀಡೆ ಸಾಕಷ್ಟು ನಿರೀಕ್ಷಿಸುತ್ತದೆ. ಕಳೆದ 19 ವರ್ಷಗಳ ಕಾಲ ನನಗೆ ಬೆಂಬಲ ನೀಡಿರುವ ಎಲ್ಲ ಮಲೇಶ್ಯಾ ನಾಗರಿಕರಿಗೆ ಕೃತಜ್ಞತೆಗಳು’’ ಎಂದು ಕಣ್ಣೀರಧಾರೆಯೊಂದಿಗೆ ಲೀ ವಿದಾಯ ಹೇಳಿದರು.

ಎರಡು ಮಕ್ಕಳ ತಂದೆಯಾಗಿರುವ ಲೀಗೆ ಕಳೆದ ವರ್ಷ ಮೊದಲ ಹಂತದ ಮೂಗಿನ ಕ್ಯಾನ್ಸರ್ ಪತ್ತೆಯಾಗಿತ್ತು. ತೈವಾನ್‌ನಲ್ಲಿ ಉತ್ತಮ ಚಿಕಿತ್ಸೆಯ ಬಳಿಕ ಮತ್ತೊಮ್ಮೆ ಬ್ಯಾಡ್ಮಿಂಟನ್ ಆಡುವ ಬಯಕೆ ವ್ಯಕ್ತಪಡಿಸಿದ್ದರು. ಆದರೆ, ಅವರು ಎಪ್ರಿಲ್‌ನ ಬಳಿಕ ಯಾವುದೇ ಅಭ್ಯಾಸ ನಡೆಸಿಲ್ಲ. ಸ್ಪರ್ಧೆಗೆ ವಾಪಸಾಗುವ ಕುರಿತು ಸ್ವತಃ ಹಲವು ಗಡುವು ಹಾಕಿಕೊಂಡಿದ್ದರೂ ಅದು ಸಾಧ್ಯವಾಗಲಿಲ್ಲ. ಮುಂದಿನ ವರ್ಷ ನಡೆಯುವ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಅರ್ಹತೆ ಪಡೆಯುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದರು. ‘‘ನನಗೆ ಇದೀಗ ವಿಶ್ರಾಂತಿಯ ಅಗತ್ಯವಿದ್ದು, ಕುಟುಂಬ ಸದಸ್ಯರೊಂದಿಗೆ ಕಾಲ ಕಳೆಯಲು ಬಯಸಿದ್ದೇನೆ. ಎಂದು ಮೂರು ಬಾರಿ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದ ಲೀ ಹೇಳಿದ್ದಾರೆ. ಲೀ ಮೂರು ಬಾರಿ ಒಲಿಂಪಿಕ್ಸ್ ನಲ್ಲಿ ಫೈನಲ್‌ಗೆ ತಲುಪಿದರೂ ಚಿನ್ನದ ಪದಕ ಜಯಿಸಲು ಸಾಧ್ಯವಾಗಲಿಲ್ಲ. 2016ರಲ್ಲಿ ರಿಯೋ ಒಲಿಂಪಿಕ್ಸ್ ನಲ್ಲಿ ಚೀನಾದ ಚೆನ್ ಲಾಂಗ್ ವಿರುದ್ಧ ತೀವ್ರ ಪೈಪೋಟಿ ನೀಡಿದರೂ ಚಿನ್ನದ ಪದಕ ಕೈಗೆಟುಕಲಿಲ್ಲ.

ಲೀ ವೃತ್ತಿಜೀವನಕ್ಕೆ ಕ್ಯಾನ್ಸರ್ ಹಿನ್ನಡೆ ಉಂಟು ಮಾಡಿದೆ. ಇದು ಮಾತ್ರವಲ್ಲ 2014ರಲ್ಲಿ ವಿಶ್ವ ಚಾಂಪಿಯನ್‌ಶಿಪ್ ವೇಳೆ ನಿಷೇಧಿತ ದ್ರವ್ಯ ಸೇವನೆ ಆರೋಪದಲ್ಲಿ ನಿಷೇಧಕ್ಕೂ ಒಳಗಾಗಿದ್ದರು. ದೀರ್ಘಕಾಲ ನಂ.1 ಸ್ಥಾನ ಕಾಯ್ದುಕೊಂಡಿದ್ದ ಲೀ 2015ರಲ್ಲಿ ಬ್ಯಾಡ್ಮಿಂಟನ್ ಅಂಗಣಕ್ಕೆ ಮತ್ತೆ ವಾಪಸಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News