ರಾಜಕಾಲುವೆ ಒತ್ತುವರಿ ತೆರವು ಕಾರ್ಯ ಚುರುಕುಗೊಳಿಸಲು ಒತ್ತಾಯಿಸಿ ಧರಣಿ

Update: 2019-06-14 16:57 GMT

ಬೆಂಗಳೂರು, ಜೂ.14: ಮಳೆಗಾಲ ಆರಂಭ ಹಿನ್ನಲೆ, ರಾಜಕಾಲುವೆ ಒತ್ತುವರಿ ಮಾಡಿರುವ ಜಾಗವನ್ನು ಶೀಘ್ರವಾಗಿ ತೆರವು ಕಾರ್ಯವನ್ನು ಬಿಬಿಎಂಪಿ ಚುರುಕುಗೊಳಿಸಬೇಕೆಂದು ಆಗ್ರಹಿಸಿ ಭೂ-ಕಬಳಿಕೆ ವಿರೋಧಿ ಹೋರಾಟ ಸಮಿತಿ ಸದಸ್ಯರು ಧರಣಿ ನಡೆಸಿದರು.

ಶುಕ್ರವಾರ ನಗರದ ಬಿಬಿಎಂಪಿ ಪ್ರಧಾನ ಕಚೇರಿ ಮುಂಭಾಗ ಜಮಾಯಿಸಿದ ಹೋರಾಟ ಸಮಿತಿ ಸದಸ್ಯರು, ಮಳೆ ಸುರಿದರೆ ಜನ ವಸತಿ ಹಾಗೂ ರಸ್ತೆ, ಪ್ರದೇಶಗಳಿಗೆ ನೀರು ನುಗ್ಗುತ್ತಿದೆ. ಹಾಗಾಗಿ, ಕೂಡಲೇ ರಾಜಕಾಲುವೆ ಒತ್ತುವರಿ ತೆರವು ಕಾರ್ಯ ನಡೆಸಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಮಿತಿಯ ಗೌರವ ಅಧ್ಯಕ್ಷ ಎಚ್.ಎಸ್.ದೊರೆಸ್ವಾಮಿ, ಇತ್ತೀಚಿನ ವರ್ಷಗಳಲ್ಲಿ ಮಳೆಗಾಲ ಬಂದರೆ ಸಾಕು ಬೆಂಗಳೂರಿನ ತಗ್ಗು ಪ್ರದೇಶಗಳು ಜಲಾವೃತಗೊಂಡು ಸಾರ್ವಜನಿಕರು ಸಂಕಷ್ಟ ಪಡುವಂತಾಗಿದೆ. ಹೀಗಾಗಿ, ಒತ್ತುವರಿ ಮಾಡಿರುವ ಜಾಗ ಮತ್ತು ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಬೇಕು ಎಂದು ಹೇಳಿದರು.

ಈ ಹಿಂದೆ, ಬಡವರ ಸಣ್ಣ ಮನೆಗಳು ನೆಲಸಮ ಮಾಡಿದ ಬಿಬಿಎಂಪಿ, ಪ್ರಭಾವಿಗಳ ಅಕ್ರಮ ಮನೆ, ಕಟ್ಟಡಗಳನ್ನು ತೆರವುಗೊಳಿಸಲು ವಿಫಲವಾಯಿತು ಎಂದ ಅವರು, ಒತ್ತುವರಿ ತೆರವು ಸಂಬಂಧ ಬಿಬಿಎಂಪಿ ಸೂಕ್ತ ಕ್ರಮ ಕೈಗೊಳ್ಳಬೇಕು. ಅದೇ ರೀತಿ, ಒಳಚರಂಡಿ ನೀರು ನಿಲ್ಲುವಿಕೆ ಬಗ್ಗೆ ಸೂಕ್ಷ ಗಮನ ನೀಡಿ, ಈ ಸಮಸ್ಯೆ ಬಗೆಹರಿಸಬೇಕು. ರಾಜಕಾಲುವೆ ಹಾಗೂ ಅವುಗಳ ನಿರ್ವಹಣೆ ಇತ್ತೀಚಿನ ಮಾಹಿತಿಯನ್ನು ಬಿಬಿಎಂಪಿ ವೆಬ್ಸೈಟ್‌ನಲ್ಲಿ ಪ್ರಕಟಿಸಬೇಕೆಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News